ಹಳ್ಳಿಗಳತ್ತ ಸಂವಿಧಾನ ಜಾಗೃತಿ ರಥ

| Published : Jan 30 2024, 02:01 AM IST

ಸಾರಾಂಶ

ಸಂವಿಧಾನ ಜಾಗೃತಿ ಜಾಥಾದ ಅಂಗವಾಗಿ ಸ್ಥಬ್ಧ ಚಿತ್ರದ ಮೆರವಣಿಗೆಗೆ ವಿಶೇಷ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಹೆಚ್ಚು ಗ್ರಾಮಗಳಿಗೆ ಭೇಟಿ ನೀಡಲು ಸಾಧ್ಯವಾಗುವಂತೆ ಮಾರ್ಗವನ್ನು (ರೂಟ್‌ಮ್ಯಾಪ್) ರೂಪಿಸಲಾಗಿದೆ.

ರವಿ ಕಾಂಬಳೆ

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಸಂವಿಧಾನ ಪೀಠಿಕೆ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ವಿವಿಧ ಇಲಾಖೆಗಳ ಸಹಯೋಗದಲ್ಲಿ ಸಮಾಜ ಕಲ್ಯಾಣ ಇಲಾಖೆಯು ಜಿಲ್ಲೆಯಲ್ಲಿ ಸಂವಿಧಾನ ಜಾಗೃತಿ ಜಾಥಾ ಹಮ್ಮಿಕೊಂಡಿದೆ. ಇದಕ್ಕಾಗಿ ಸ್ತಬ್ಧ ಚಿತ್ರಗಳನ್ನೊಳಗೊಂಡ ವಿಶೇಷ ರಥಗಳೆರಡು ಏಕಕಾಲಕ್ಕೆ ಎರಡು ಮಾರ್ಗದಲ್ಲಿ ಸಂಚಾರ ಶುರು ಮಾಡಿವೆ.

ಗಣರಾಜ್ಯೋತ್ಸವ ದಿನದಂದು ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಸ್ತಬ್ದಚಿತ್ರದ ಮೆರವಣಿಗೆಗೆ ಚಾಲನೆ ನೀಡಿದ್ದಾರೆ.

ಸ್ತಬ್ದ ಚಿತ್ರಗಳ ನಿರ್ಮಾಣ, ಮೆರವಣಿಗೆ ಹಾಗೂ ಇನ್ನಿತರ ಕಾರ್ಯಕ್ರಮಗಳ ಖರ್ಚುಗಳಿಗೆ ಸಮಾಜ ಕಲ್ಯಾಣ ಇಲಾಖೆಗೆ ₹45 ಲಕ್ಷ ಬಿಡುಗಡೆ ಮಾಡಿದೆ. ಸ್ಥಳೀಯ ಆಡಳಿತಗಳೂ ಹೆಚ್ಚುವರಿ ಖರ್ಚುಗಳನ್ನು ಭರಿಸಲಿವೆ. ಫೆ.23ರವರೆಗೆ ಜಿಲ್ಲೆಯ ಎಲ್ಲ 500 ಗ್ರಾ.ಪಂಗಳ ಹಾಗೂ 38 ನಗರ ಸ್ಥಳೀಯ ಸಂಸ್ಥೆಗಳು ಸೇರಿ ಒಟ್ಟು 538 ಆಡಳಿತ ಕಚೇರಿಗಳಿಗೆ ಮೆರವಣಿಗೆ ಸಾಗಲಿದೆ. ನಿತ್ಯ 10ಕ್ಕೂ ಹೆಚ್ಚು ಹಳ್ಳಿಗಳಿಗೆ ತೆರಳಿ, ವೇದಿಕೆ ಕಾರ್ಯಕ್ರಮ ನಡೆಸುವ ಗುರಿ ಹೊಂದಿದೆ.

ಮೊದಲ ಮಾರ್ಗದ ರಥ ಬೆಳಗಾವಿ, ಹುಕ್ಕೇರಿ, ನಿಪ್ಪಾಣಿ, ಚಿಕ್ಕೋಡಿ, ಕಾಗವಾಡ, ಅಥಣಿ, ರಾಯಬಾಗ ತಾಲೂಕುಗಳಲ್ಲಿ ಸಂಚರಿಸಲಿದೆ. ಇನ್ನೊಂದು ಸ್ಥಬ್ಧ ಚಿತ್ರವು ಬೆಳಗಾವಿ, ಗೋಕಾಕ, ಮೂಡಲಗಿ, ರಾಮದುರ್ಗ, ಸವದತ್ತಿ, ಬೈಲಹೊಂಗಲ, ಚನ್ನಮ್ಮನ ಕಿತ್ತೂರು, ಖಾನಾಪುರ ತಾಲೂಕು ಮಾರ್ಗದಲ್ಲಿ ತೆರಳಲಿದೆ.

ಸಂವಿಧಾನ ಜಾಗೃತಿ ಜಾಥಾದ ಸ್ತಬ್ಧ ಚಿತ್ರದ ಮೆರವಣಿಗೆ ಆಯಾ ಗ್ರಾಪಂನಲ್ಲಿ ಸ್ಥಳೀಯ ಅಧಿಕಾರಿಗಳು, ಜನಪ್ರತಿನಿಧಿಗಳು, ಸಾಮಾಜಿಕ ಹೋರಾಟಗಾರರು, ಸ್ವಯಂ ಸೇವಾ ಸಂಘಟನೆಗಳು, ಸ್ಥಳೀಯ ಸಂಘ-ಸಂಸ್ಥೆಗಳು, ಒಕ್ಕೂಟದ ಸದಸ್ಯರು, ಮುಖಂಡರು ಸ್ವಾಗತಿಸಲಿದ್ದಾರೆ.

ಮೆರವಣಿಗೆಯಲ್ಲಿ ಜಾನಪದ ಕಲಾವಿದರಿಂದ ಕಲಾ ಪ್ರದರ್ಶನ ನಡೆಯಲಿದ್ದು, ವೇದಿಕೆ ಕಾರ್ಯಕ್ರಮದಲ್ಲಿ ಸಂವಿಧಾನ ಬಗ್ಗೆ ಅರಿವು, ಸಾಮಾಜಿಕ ನ್ಯಾಯ, ಅಂಬೇಡ್ಕರ ಪರಿಕಲ್ಪನೆ ಸೇರಿ ವಿವಿಧ ವಿಷಯಗಳ ಬಗ್ಗೆ ತಜ್ಞರಿಂದ ಭಾಷಣವೂ ಇರಲಿದೆ. ಸಂವಿಧಾನ ಪೀಠಿಕೆಯ ಕರಪತ್ರಗಳನ್ನು ಹಂಚಲು ಉದ್ದೇಶಿಸಲಾಗಿದೆ.

ಸ್ತಬ್ಧಚಿತ್ರದಲ್ಲಿ ಏನಿದೆ? :

ಸ್ತಬ್ಧಚಿತ್ರದಲ್ಲಿ ಭಾರತದ ಸಂವಿಧಾನದ ಪ್ರತಿಯ ಚಿತ್ರ, ಬೃಹತ್ ಎಲ್‌ಇಡಿ ಪರದೆ, ಸಂವಿಧಾನ ಪ್ರಸ್ತಾವನೆ ಚಿತ್ರ, ಬುದ್ಧ, ಬಸವ, ಅಂಬೇಡ್ಕರ್ ಮೂರ್ತಿಗಳು, ಅನುಭವ ಮಂಟಪ ಸೃಷ್ಟಿಸಲಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಪ್ರಚಾರ, ಸಂವಿಧಾನ ಮಹತ್ವ ಸಾರುವ ಸಾಲುಗಳೂ ಗಮನ ಸೆಳೆಯಲಿವೆ.

ಸಂವಿಧಾನ ಜಾಗೃತಿ ಜಾಥಾದ ಯಶಸ್ವಿಗೆ ಸಮಿತಿಗಳನ್ನು ರಚಿಸಲಾಗಿದೆ. ಭವ್ಯತೆ, ನಾವೀನ್ಯತೆ, ಭಾಗವಹಿಸುವಿಕೆ ಪರಿಣಾಮಕಾರಿತ್ವ ಹಾಗೂ ಮಾಧ್ಯಮ, ಸಮಾಜದ ಪ್ರತಿಕ್ರಿಯೆ ಸೇರಿದಂತೆ ಹಲವು ಅಂಶಗಳನ್ನು ಆಧರಿಸಿ ಜಾಥಾದ ಮೌಲ್ಯಮಾಪನ ಮಾಡಲಾಗುತ್ತದೆ. ಅತ್ಯುತ್ತಮ ಸಾಧನೆ ತೋರಿದ ಮೂರು ಜಿಲ್ಲೆಗಳಿಗೆ ಸಿಎಂ ಸಿದ್ದರಾಮಯ್ಯ ಪ್ರಶಸ್ತಿ ನೀಡಲಿದ್ದಾರೆ.

ಜಿಲ್ಲೆಯಲ್ಲಿ ಸಂಚಾರ ಮುಗಿಸಿದ ಬಳಿಕ ಈ ಎರಡು ರಥಗಳು ಫೆ.25 ರಂದು ಬೆಂಗಳೂರಿನಲ್ಲಿ ನಡೆಯುವ ರಾಷ್ಟ್ರೀಯ ಸಮಾವೇಶಕ್ಕೆ ತೆರಳಲಿವೆ. ಈ ರಾಷ್ಟ್ರೀಯ ಸಮಾವೇಶದಲ್ಲಿ ಸುಮಾರು 1 ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಲಕ್ಷ್ಮಣ ಬಬಲಿ ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು. ಕೋಟ್

ಸಂವಿಧಾನ ಜಾಗೃತಿ ಜಾಥಾದ ಅಂಗವಾಗಿ ಸ್ಥಬ್ಧ ಚಿತ್ರದ ಮೆರವಣಿಗೆಗೆ ವಿಶೇಷ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಹೆಚ್ಚು ಗ್ರಾಮಗಳಿಗೆ ಭೇಟಿ ನೀಡಲು ಸಾಧ್ಯವಾಗುವಂತೆ ಮಾರ್ಗವನ್ನು (ರೂಟ್‌ಮ್ಯಾಪ್) ರೂಪಿಸಲಾಗಿದೆ.

- ಲಕ್ಷ್ಮಣ ಬಬಲಿ, ಜಂಟಿ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ

---------------

27ಎಚ್‌ಯುಕೆ-1ಎಲಕ್ಷ್ಮಣ ಬಬಲಿ