ಸಿಂಗಟಾಲೂರು ವೀರಭದ್ರೇಶ್ವರ ಸುಕ್ಷೇತ್ರಕ್ಕೆ ಪ್ರವಾಸೋದ್ಯಮ ಇಲಾಖೆಯಿಂದ ರು. 1 ಕೋಟಿ ಅನುದಾನ-ಸಚಿವ ಎಚ್ಕೆ

| Published : Jan 30 2024, 02:01 AM IST

ಸಿಂಗಟಾಲೂರು ವೀರಭದ್ರೇಶ್ವರ ಸುಕ್ಷೇತ್ರಕ್ಕೆ ಪ್ರವಾಸೋದ್ಯಮ ಇಲಾಖೆಯಿಂದ ರು. 1 ಕೋಟಿ ಅನುದಾನ-ಸಚಿವ ಎಚ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರ ಮಾಡುವಂತಹ ಕಾರ್ಯವನ್ನು ದೇವಸ್ಥಾನ ಟ್ರಸ್ಟ್ ಕಮಿಟಿಯ ಎಲ್ಲರೂ ಸೇರಿ ಪ್ರಾಮಾಣಿಕವಾಗಿ ಮಾಡಿದ್ದಾರೆ. ಸಿಂಗಟಾಲೂರು ಶ್ರಿ ವೀರಭದ್ರೇಶ್ವರ ಸುಕ್ಷೇತ್ರದ ಅಭಿವೃದ್ಧಿಗಾಗಿ ಪ್ರವಾಸೋದ್ಯಮ ಇಲಾಖೆಯಿಂದ 1 ಕೋಟಿ ರು.ಗಳ ಅನುದಾನ ನೀಡುವುದಾಗಿ ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಮುಂಡರಗಿ: ಗ್ರಾಮೀಣ ಜನರ ಹೃದಯಕ್ಕೆ ಹತ್ತಿರವಾಗುವ ನಮ್ಮ ಸಂಸ್ಕೃತಿ, ಪರಂಪರೆಯನ್ನು ಅಭಿವ್ಯಕ್ತಗೊಳಿಸುವ ದೇಶಿ ಕಲಾ ಪ್ರತಿಭೆಯನ್ನು ಇಲ್ಲಿ ನಿರ್ಮಾಣ ಮಾಡಿರುವುದು ಅಭಿನಂದನೀಯ. ಸರ್ಕಾರ ಮಾಡುವಂತಹ ಕಾರ್ಯವನ್ನು ದೇವಸ್ಥಾನ ಟ್ರಸ್ಟ್ ಕಮಿಟಿಯ ಎಲ್ಲರೂ ಸೇರಿ ಪ್ರಾಮಾಣಿಕವಾಗಿ ಮಾಡಿದ್ದಾರೆ. ಸಿಂಗಟಾಲೂರು ಶ್ರಿ ವೀರಭದ್ರೇಶ್ವರ ಸುಕ್ಷೇತ್ರದ ಅಭಿವೃದ್ಧಿಗಾಗಿ ಪ್ರವಾಸೋದ್ಯಮ ಇಲಾಖೆಯಿಂದ 1 ಕೋಟಿ ರು.ಗಳ ಅನುದಾನ ನೀಡುವುದಾಗಿ ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಸೋಮವಾರ ತಾಲೂಕಿನ ಸಿಂಗಟಾಲೂರು ಸುಕ್ಷೇತ್ರದಲ್ಲಿ ಶ್ರೀ ವೀರಭದ್ರೇಶ್ವರ ಉದ್ಯಾನವನ ಉದ್ಘಾಟಿಸಿ ಅವರು ಮಾತನಾಡಿದರು.

ಕಪ್ಪತ್ತಗುಡ್ಡದ ಕೊನೆಯ ಅಂಚಿನಲ್ಲಿರುವ ಸಿಂಗಟಾಲೂರು ಶ್ರೀ ವೀರಭದ್ರೇಶ್ವರ ದೇವಸ್ಥಾನವನ್ನು ನಾವು ಹಿಂದಿನಿಂದಲೂ ನೋಡುತ್ತಾ ಬಂದಿದ್ದೇವೆ. ಇತ್ತೀಚಿನ ವರ್ಷಗಳಲ್ಲಿ ಇಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಇಲ್ಲಿನ ಟ್ರಸ್ಟ್ ಕಮಿಟಿಯವರು ಇನ್ನಷ್ಟು ಅಭಿವೃದ್ಧಿಗಾಗಿ ಮನವಿವೊಂದನ್ನು ಸಲ್ಲಿಸಿದ್ದು, ಅದರಲ್ಲಿ ತೂಗು ಸೇತುವೆ, ಯಾತ್ರಾ ನಿವಾಸ ನಿರ್ಮಾಣ ಸೇರಿದಂತೆ ಹಲವು ಬೇಡಿಕೆಗಳನ್ನಿಟ್ಟಿದ್ದು, ಇಲಾಖೆಯಿಂದ 1 ಕೋಟಿ ರು.ಗಳ ಅನುದಾನ ನೀಡುತ್ತಿದ್ದು, ಆದ್ಯತೆ ಮೇರೆಗೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು. ರಾಜ್ಯದಲ್ಲಿ ಪ್ರವಾಸೋದ್ಯಮ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಬೇಕಾಗಿದೆ. ಸವದತ್ತಿ ಯಲ್ಲಮ್ಮನ ಗುಡ್ಡಕ್ಕೆ ಪ್ರತಿ ವರ್ಷ 1.20 ಕೋಟಿ ಜನ ಭಕ್ತರು ಬಂದು ಹೋಗುತ್ತಾರೆ. ಭಾರತ ಹುಣ್ಣಿಮೆಯ ಒಂದೇ ದಿನ 6ರಿಂದ 8 ಲಕ್ಷ ಭಕ್ತರು ಬರುತ್ತಾರೆ. ಉತ್ತರ ಕರ್ನಾಟಕ ಭಾಗದ ಇಂತಹ ಭಕ್ತಿ ಕೇಂದ್ರಗಳ ಅಭಿವೃದ್ಧಿಗಾಗಿ ನಮ್ಮ ಸರ್ಕಾರ ಸದಾ ಸನ್ನದ್ಧವಾಗಿದೆ. ಈ ವೀರಭದ್ರೇಶ್ವರ ಉದ್ಯಾನವನದಲ್ಲಿ ಗ್ರಾಮೀಣ ಭಾಗದ ನಿತ್ಯದ ಜೀವನ ಪದ್ಧತಿಗಳನ್ನು ತೆರೆದಿಡುವ ಪ್ರಯತ್ನಮಾಡಲಾಗಿದೆ. ಶಾಲಾ-ಕಾಲೇಜಿನ ಮಕ್ಕಳಿಗೆ ಗ್ರಾಮೀಣ ಪ್ರದೇಶದ ಸಮಗ್ರ ಜೀವನ ಶಿಕ್ಷಣ ನೀಡುವಂತಹ ಎಲ್ಲ ದಿನ ನಿತ್ಯದ ಕಾರ್ಯವೈಖರಿಗಳನ್ನು ತೆರೆದಿಡುವಂತಹ ಅದ್ಭುತವಾದ ಉದ್ಯಾನವನ ಇದಾಗಿದೆ. ಇದನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವ ಮೂಲಕ ಈ ಸೃಷ್ಟಿಯ ಸೌಂದರ್ಯ ಹೆಚ್ಚಿಸುವುದು ಪ್ರವಾಸೋದ್ಯಮದ ಕಾರ್ಯವಾಗಿದೆ. ಆ ಕಾರ್ಯವನ್ನು ನಮ್ಮ ಇಲಾಖೆ ಹಂತ ಹಂತವಾಗಿ ಮಾಡುತ್ತದೆ ಎಂದರು. ದೇವಸ್ಥಾನ ಟ್ರಸ್ಟ್‌ ಕಮಿಟಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ದೇವಸ್ಥಾನಕ್ಕೆ ರಾಜ್ಯಾದ್ಯಂತ ಭಕ್ತರಿದ್ದಾರೆ. ಹೀಗಾಗಿ ಇಲ್ಲಿನ ಯಾವುದೇ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಂಡರೂ ಯಾವುದೇ ರೀತಿಯ ಹಣಕಾಸಿನ ತೊಂದರೆಯಾಗದಂತೆ ನಡೆದು ಹೋಗುತ್ತದೆ. ಇದೀಗ ಇಲ್ಲಿ ಇನ್ನಷ್ಟು ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಉದ್ದೇಶದಿಂದ ಪ್ರವಾಸೋದ್ಯಮ ಸಚಿವರಿಗೆ ಕೆಲವು ಬೇಡಿಕೆಗಳುಳ್ಳ ಮನವಿಯನ್ನು ಸಲ್ಲಿಸಿದ್ದು, ಸಚಿವರು ನಮಗೆ ಹೆಚ್ಚಿನ ಅನುದಾನ ನೀಡಬೇಕು ಎಂದು ಮನವಿ ಮಾಡಿಕೊಂಡರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ರಾಮಣ್ಣ ಲಮಾಣಿ, ಜಿ.ಎಸ್. ಗಡ್ಡದೇವರಮಠ, ರಾಮಕೃಷ್ಣ ದೊಡ್ಡಮನಿ, ಸಿಂಗಟಾಲೂರು ಗ್ರಾಪಂ ಅಧ್ಯಕ್ಷ ಮೈಲಾರಪ್ಪ ಉದಂಡಿ, ಎಂ.ಆರ್. ಪಾಟೀಲ, ರವೀಂದ್ರ ಉಪ್ಪಿನಬೆಟಗೇರಿ, ಭೀಮಸಿಂಗ್ ರಾಠೋಡ, ವಾಸಣ್ಣ ಕುರುಡಗಿ, ಸುಜಾತಾ ದೊಡ್ಡಮನಿ, ಎಸ್.ವಿ. ಪಾಟೀಲ, ವಿ.ಎಲ್. ನಾಡಗೌಡ್ರ, ಡಿ.ಡಿ. ಮೋರನಾಳ, ರಜನೀಕಾಂತ ದೇಸಾಯಿ, ನಾಗೇಶ ಹುಬ್ಬಳ್ಳಿ, ಶೇಖರಪ್ಪ ಬಾಲೆಹೊಸೂರು, ಕೊಟ್ರೇಶ ಬಳ್ಳೊಳ್ಳಿ, ಸುಭಾಸಪ್ಪ ಬಾಗೇವಾಡಿ, ಕಾಶಯ್ಯ ಬೆಂತೂರಮಠ, ಕರ್ಣಂ ಸಣ್ಣ ತಮ್ಮಪ್ಪ, ಸಿ.ಕೆ. ಎಂ. ಬಸವಲಿಂಗಸ್ವಾಮಿ, ಅಂದಪ್ಪ ಗೋಡಿ, ಬಸವರಾಜಪ್ಪ ಉಮನಾಬಾದಿ, ಮುತ್ತಯ್ಯ ಹಿರೇಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ವೈ.ಎನ್. ಗೌಡರ್ ಸ್ವಾಗತಿಸಿ, ನಿರೂಪಿಸಿದರು.