ಕಾರ್ಪೋರೇಟ್ ಕಂಪನಿಗಳೇ ದೇಶ ಬಿಟ್ಟು ತೊಲಗಿ: ರೈತಸಂಘ ಆಕ್ರೋಶ

| Published : Aug 11 2024, 01:41 AM IST

ಸಾರಾಂಶ

ಶಿವಮೊಗ್ಗದ ಶಿವಪ್ಪ ನಾಯಕ ವೃತ್ತದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಕಾರ್ಪೋರೇಟ್ ಕಂಪನಿ ಭೂತಗಳ ದಹನ ಮಾಡುವ ಮೂಲಕ ಕಾರ್ಪೋರೇಟ್ ಕಂಪನಿಗಳ ವಿರುದ್ಧ ಪ್ರತಿಭಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಇಲ್ಲಿನ ಶಿವಪ್ಪ ನಾಯಕ ವೃತ್ತದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಕಾರ್ಪೋರೇಟ್ ಕಂಪನಿ ಪ್ರತಿಕೃತಿಗಳ ದಹನ ಮಾಡುವ ಮೂಲಕ ಕಾರ್ಪೋರೇಟ್ ಕಂಪನಿಗಳ ವಿರುದ್ಧ ಪ್ರತಿಭಟನೆ ನಡೆಯಿತು.

ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂದು ಕರೆ ನೀಡಿದ ದಿನವಾದ ಇಂದು ಕಾರ್ಪೋರೇಟ್ ಕಂಪನಿಗಳೇ ದೇಶಬಿಟ್ಟು ತೊಲಗಿ ಎಂಬ ಘೋಷಣೆಯೊಂದಿಗೆ ಈ ಪ್ರತಿಭಟನೆ ಹಮ್ಮಿಕೊಂಡಿದ್ದು, ಕೃಷಿಯ ಮೇಲೆ ಕಾರ್ಪೋರೇಟ್ ಕಂಪನಿಗಳ ಹಿಡಿತದಿಂದ ಮುಕ್ತಿಯಾಗಿ ಆಕ್ರಮಣ ನಿಲ್ಲಬೇಕು. ರೈತರ ಬೆಳೆಗಳಿಗೆ ಎಂಎಸ್‌ಪಿ ಖಾತ್ರಿಯಾಗಬೇಕು. ರೈತರ ಹಾಗೂ ಜನಸಾಮಾನ್ಯರ ಬದುಕಿಗೆ ಕಂಠಕವಾಗಿರುವ ವಿದ್ಯುತ್ ಖಾಸಗೀಕರಣ ರದ್ದು ಮಾಡಬೇಕು. ಕಂಪನಿಗಳ ಹಿತ ಕಾಯಲು ತಂದಿರುವ ಕಾರ್ಮಿಕ ವಿರೋಧಿ ನಾಲ್ಕು ಕೋಡ್‌ಗಳು ರದ್ದು ಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಉದ್ಯೋಗ ಭದ್ರತೆ ದೇಶದ ನೀತಿಯಾಗಬೇಕು. ಹಿಂಬಾಗಿಲಿನಿಂದ ಬಂದು ಮೀಸಲಾತಿಯನ್ನು ಸರ್ವಾನಾಶಗೊಳಿಸುತ್ತಿರುವ ಕಾರ್ಪೋರೇಟ್ ಪರ ಖಾಸಗೀಕರಣ ನಿಂತು ಮೀಸಲಾತಿ ಜಾರಿಯಾಗಬೇಕು. ಮಹಿಳೆಯರನ್ನು ಭೋಗದ ವಸ್ತುವಂತೆ ಬಿಂಬಿಸಿ ಅತ್ಯಾಚಾರ ಸರಮಾಲೆಗೆ ಕಾರಣವಾಗುವ ಕಾರ್ಪೋರೇಟ್ ಸಂಸ್ಕೃತಿ ನಾಶವಾಗಬೇಕು. ವೈಯನಾಡು ಭೂ ಕುಸಿತ, ಅತಿವೃಷ್ಟಿ, ಅನಾವೃಷ್ಟಿಯಂತಹ ಪಾಕೃತಿಕ ವಿಕೋಪಗಳಿಗೆ ದೇಶವನ್ನು ತಳ್ಳುತ್ತಿರುವ ಕಾರ್ಪೋರೇಟ್ ಮಾದರಿ ಕೊನೆಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಂಘದ ರಾಜ್ಯಾಧ್ಯಕ್ಷ ಎಚ್. ಆರ್.ಬಸವರಾಜಪ್ಪ, ಪ್ರಮುಖರಾದ ಇ.ಬಿ.ಜಗದೀಶ್, ಕೆ. ರಾಘವೇಂದ್ರ, ಟಿ.ಎಂ.ಚಂದ್ರಪ್ಪ, ಹಿಟ್ಟೂರು ರಾಜು, ಜಿ.ಎನ್.ಪಂಚಾಕ್ಷರಿ, ಜ್ಞಾನೇಶ್, ಸಿ. ಚಂದ್ರಪ್ಪ, ಗುರುಶಾಂತ ಇದ್ದರು.