ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಟ್ಟು ಸಮಾಜದ ಸತ್ಪ್ರಜೆಯಾಗಿಸಬೇಕು: ಶ್ರೀನಿವಾಸ್

| Published : Aug 11 2024, 01:41 AM IST

ಸಾರಾಂಶ

ತರೀಕೆರೆ, ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಟ್ಟು ಸಮಾಜಕ್ಕೆ ಸತ್ಪ್ರಜೆಯಾಗಲು ಪೋಷಕರು ಸಹಕರಿಸಬೇಕು ಎಂದು ತರೀಕೆರೆ ದಿ ಹಂಗರ್ ಪ್ರಾಜೆಕ್ಟ್ ಅಧಿಕಾರಿ ಶ್ರೀನಿವಾಸ್ ಹೇಳಿದ್ದಾರೆ.

ಸ್ವಾಸ್ಥ್ಯ ಸಂಕಲ್ಪ- ಸುಜ್ಞಾನ ನಿಧಿ ಶಿಷ್ಯವೇತನ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಟ್ಟು ಸಮಾಜಕ್ಕೆ ಸತ್ಪ್ರಜೆಯಾಗಲು ಪೋಷಕರು ಸಹಕರಿಸಬೇಕು ಎಂದು ತರೀಕೆರೆ ದಿ ಹಂಗರ್ ಪ್ರಾಜೆಕ್ಟ್ ಅಧಿಕಾರಿ ಶ್ರೀನಿವಾಸ್ ಹೇಳಿದ್ದಾರೆ.

ಶುಕ್ರವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ತರೀಕೆರೆ, ಚಿಕ್ಕಮಗಳೂರು ಅಖಿಲ ಕರ್ನಾಟಕ ಜನ ಜಾಗೃತಿ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ಸ್ವಾಸ್ಥ್ಯ ಸಂಕಲ್ಪ ಮತ್ತು ಸುಜ್ಞಾನ ನಿಧಿ ಶಿಷ್ಯವೇತನ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪೋಷಕರು ಮತ್ತು ಅವರ ಮಕ್ಕಳ ಜೊತೆ ಕುಳಿತಿರುವುದು ಇದೊಂದು ವಿಶೇಷ ಕಾರ್ಯಕ್ರಮ. ಮಕ್ಕಳು 5 ವಿಶೇಷ ಜೀವನ ಕೌಶಲ್ಯಗಳಾದ ಸ್ವ ಅರಿವು, ಸಮಸ್ಯೆ ಬಗೆರಿಸಿಕೊಳ್ಳುವುದು, ತೀರ್ಮಾನ ತೆಗೆದುಕೊಳ್ಳುವುದು, ಒತ್ತಡ ನಿರ್ವಹಣೆ ಮತ್ತು ನಿಭಾಯಿಸುವುದು, ಸಂವಹನ ಕೌಶಲ್ಯ ಬೆಳೆಸಿಕೊಳ್ಳುವುದನ್ನು ಕಲಿಯಬೇಕಾಗುತ್ತದೆ. ಮಕ್ಕಳಿಂದ ದುಶ್ಚಟ ದೂರ ಮಾಡುವಲ್ಲಿ ಪೋಷಕರ ಪಾತ್ರ ಹಾಗೂ ದುಶ್ಚಟಗಳಿಂದ ದೂರವಿರಲು ಮಕ್ಕಳ ಸಂಕಲ್ಪವೂ ಬಹಳ ಮುಖ್ಯ, ದುಶ್ಚಟಗಳಲ್ಲಿ ವಿಮಲ್ ಇನ್ನಿತರೆ ಗುಟ್ಕಗಳು ಮತ್ತು ಗಾಂಜಾ ಹೊಗೆ ಸೊಪ್ಪು ಇನ್ನಿತರ ಚಟಗಳಿಂದ ಮಕ್ಕಳು ದೂರವಿರಬೇಕು ಎಂದು ಹೇಳಿದರು.ಮದ್ಯಪಾನ, ಮೊಬೈಲ್ ವೀಕ್ಷಣೆ, ಬೇಕರಿ ಮತ್ತು ಹೋಟೆಲ್ ತಿಂಡಿ ತಿನಿಸುಗಳು ಜೊತೆಗೆ ತಂದೆ ತಾಯಿ ಮಾತಿಗೆ ನಿರ್ಲಕ್ಷ್ಯ , ಅಸಡ್ಡೆ ಸೋಮಾರಿತನ ಹಾಗೂ ಇಂತಹ ಕೆಟ್ಟ ಚಟಗಳನ್ನು ಬಿಡಿಸುವ ಕಡೆ ಪೋಷಕರು ಗಮನ ಹರಿಸಬೇಕು. ಮಕ್ಕಳು ಇವುಗಳನ್ನು ಬಿಡುವ ಸಂಕಲ್ಪ ಮಾಡಿ ಓದಿನ ಕಡೆಗೆ ಗಮನ ಹರಿಸಬೇಕು. ಈ ದಿನ ಸುಜ್ಞಾನ ನಿಧಿ ಅಡಿ 136 ಮಕ್ಕಳಿಗೆ ಸಹಾಯಧನ ನೀಡುವ ಪತ್ರ ವಿತರಣೆ ಮಾಡಿದೆ ಇದನ್ನ ಮಕ್ಕಳು ಅರ್ಥ ಮಾಡಿಕೊಂಡು ತಮ್ಮ ಬೆನ್ನ ಹಿಂದೆ ಗುರು ನಮ್ಮ ಮುಂದೆ ಗುರಿ ಇಟ್ಟುಕೊಂಡು ವಿದ್ಯಾಭ್ಯಾಸ ಮಾಡಿದರೆ ಮುಂದಿನ ಗುರಿ ತಲುಪಲು ಸಾಧ್ಯ ಎಂದು ಹೇಳಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಕುಸುಮಾಧರ್ ಮಾತನಾಡಿ ಯೋಜನೆ ಯಲ್ಲಿ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಭಯ ದಾನ. ಅನ್ನದಾನ, ವಿದ್ಯಾದಾನ, ಔಷಧಗಳ ದಾನ, ಎಂಬ ಚತುರ್ವಿದ ದಾನಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಹೆಸರಾಗಿದೆ ಎಂದರು. ಸುಜ್ಞಾನ ನಿಧಿಯೋಜನೆಯಲ್ಲಿ ಇಂದು 136 ವಿದ್ಯಾರ್ಥಿ ಗಳನ್ನು ಆಯ್ಕೆ ಮಾಡಲಾಗಿದ್ದು ತಾಲೂಕಿನಲ್ಲಿ ಈ ವರೆವಿಗೆ 1040 ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ವಿತರಿಸಲಾಗಿದೆ ಎಂದರು.

ಪುರಸಬೆ ಸದಸ್ಯ ಪರಮೇಶ್ ಕಾರ್ಯಕ್ರಮ ಉದ್ಘಾಟಿಸಿದರು, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಟಿ.ಆರ್.ಶ್ರೀಧರ್,

ಜಿಲ್ಲಾ ಜನ ಜಾಗೃತಿ ಸದಸ್ಯ ಅಸ್ಲಾಂಖಾನ್, ಕುಡ್ಲೂರು ಜನ ಜಾಗೃತಿ ಸದಸ್ಯ ಮಲ್ಲಪ್ಪ, ಯೋಜನೆ ಮೇಲ್ವಿಚಾರಕರು ಸಿದ್ದಯ್ಯ, ಹೋಮ್ಯಾನಾಯ್ಕ, ಸೇವಾ ಪ್ರತಿನಿಧಿಗಳು ಮತ್ತಿತರರು ಭಾಗವಹಿಸಿದ್ದರು.10ಕೆಟಿಆರ್.ಕೆ.1ಃ

ತರೀಕೆರೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಪುರಸಭೆ ಸದಸ್ಯ ಪರಮೇಶ್ ಉದ್ಘಾಟಿಸಿದರು. ಜಿಲ್ಲಾ ಜನ ಜಾಗೃತಿ ಸದಸ್ಯರಾದ ಅಸ್ಲಾಂಖಾನ್, ಟಿ.ಆರ್.ಶ್ರೀಧರ್, ಯೋಜನಾಧಿಕಾರಿ ಕುಸುಮಾಧರ್ ಮತ್ತಿತರರು ಇದ್ದರು.