ಸಾರಾಂಶ
ಕನ್ನಡಪ್ರಭ ವಾರ್ತೆ ಹಿರಿಯೂರು
ಮಹಿಳೆಯರು ಆರೋಗ್ಯವಂತರಾಗಿ ಆತ್ಮಬಲ ಹೆಚ್ಚಿಸಿಕೊಂಡು ಸ್ವಾವಲಂಬನೆ ಹಾಗೂ ಆರ್ಥಿಕ ಸದೃಢತೆ ಜೀವನ ರೂಪಿಸಿಕೊಳ್ಳಬೇಕು ಎಂದು ಸತ್ವ ಮಹಿಳಾ ಸಂಸ್ಥೆ ಅಧ್ಯಕ್ಷೆ ಶಶಿಕಲಾ ರವಿಶಂಕರ್ ಅಭಿಪ್ರಾಯಪಟ್ಟರು.ತಾಲೂಕಿನ ಮಾಯಸಂದ್ರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಡೆಂಘೀ ಜ್ವರದ ಮುನ್ನೆಚ್ಚರಿಕಾ ಕ್ರಮಗಳ ಬಗೆಗಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾವುದೇ ಕಾಯಿಲೆಗಳ ಉಲ್ಬಣಕ್ಕೆ ಕೆಟ್ಟ ಪರಿಸರವು ಕಾರಣವಾಗುವುದರಿಂದ ಎಲ್ಲರೂ ಆದಷ್ಟು ನಿಮ್ಮ ನಿಮ್ಮ ಮನೆ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಜವಾಬ್ದಾರಿ ಹೊರಬೇಕು. ಸೊಳ್ಳೆಗಳ ಆವಾಸ ಸ್ಥಾನ ನಾಶ ಪಡಿಸುವ ಮೂಲಕ ಇದೀಗ ಎಲ್ಲಾ ಕಡೆಯೂ ಹರಡುತ್ತಿರುವ ಡೆಂಘೀ ಜ್ವರದ ನಿಯಂತ್ರಣಕ್ಕೆ ಎಲ್ಲರೂ ಪ್ರಯತ್ನಿಸಬೇಕು. ಮಹಿಳೆಯರ ಮತ್ತು ಮಕ್ಕಳ ಅಭ್ಯುದಯಕ್ಕೆ ಒತ್ತಾಸೆಯಾಗಿರುವ ನಮ್ಮ ಸತ್ವ ಸಂಸ್ಥೆಯು ಸಮಾನ ಮನಸ್ಕ ಮಹಿಳೆಯರ ಒಂದು ಗುಂಪಾಗಿದೆ. ಬೆಳೆಯುವ ಮಕ್ಕಳ ಕನಸಿಗೆ, ಪ್ರತಿಭೆಗೆ ಪ್ರೋತ್ಸಾಹ ನೀಡಿ ನೊಂದವರಿಗೆ ನೆರವಾಗುವ ನಿಟ್ಟಿನಲ್ಲಿ ಸಂಸ್ಥೆ ಕಾರ್ಯ ನಿರ್ವಹಿಸಲಿದೆ ಎಂದರು.
ಉಪಾಧ್ಯಕ್ಷೆ ಯಮುನಾ ಉಮಾಕಾಂತ್ ಮಾತನಾಡಿ, ಮಕ್ಕಳ ಶಾಲಾ ಕಲಿಕೆಯಲ್ಲಿ ಶಿಕ್ಷಕರಷ್ಟೇ ಪೋಷಕರ ಪಾತ್ರವೂ ಮುಖ್ಯವಾಗಿದೆ. ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಶಾಲೆಗಳಿಗೆ ಭೇಟಿ ನೀಡುತ್ತಾ ಶಿಕ್ಷಕರೊಂದಿಗೆ ಚರ್ಚಿಸುತ್ತಾ ಇದ್ದರೆ ಮಕ್ಕಳ ಕಲಿಕೆ ಪ್ರಗತಿಗೆ ಸಹಕಾರಿಯಾಗುತ್ತದೆ ಎಂದರು.ಈ ವೇಳೆ ಪ್ರಧಾನ ಕಾರ್ಯದರ್ಶಿ ಸರ್ವಮಂಗಳಾ ರಮೇಶ್, ಶ್ರೀಕರ, ವೈದ್ಯಾಧಿಕಾರಿ ಸುಪ್ರೀತಾ, ಮುಖ್ಯ ಶಿಕ್ಷಕಿ ಉಷಾರಾಣಿ, ತ್ರಿವೇಣಿ ಸತೀಶ್, ಗೀತಾ ಹಿಮಾಚಲೇಶ್, ಲತಾ ಶಿವಪ್ರಸಾದ್ ಹಾಗೂ ಶಾಲಾಭಿವೃದ್ಧಿ ಸಮಿತಿಯವರು, ಪೋಷಕರಿದ್ದರು.