ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರದೇಶದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕಾರ್ಪೊರೇಟ್ ಸಂಸ್ಥೆಗಳ ಪರವಾದ ನೀತಿಗಳನ್ನು ಜಾರಿಗೆ ತರಲಾಗಿದ್ದು ಕ್ವಿಟ್ ಇಂಡಿಯಾ ಚಳವಳಿಯ ಮಾದರಿಯಲ್ಲಿ ಕಾರ್ಪೊರೇಟ್ ಸಂಸ್ಥೆಗಳೇ ದೇಶ ಬಿಟ್ಟು ತೊಲಗಲಿ ಎಂದು ನಗರದ ಗಾಂಧಿವನದಲ್ಲಿ ಸಂಯುಕ್ತ ಹೋರಾಟ ಸಮಿತಿ ನೇತೃತ್ವದಲ್ಲಿ ಧರಣಿ ನಡೆಸಿದರು.ಕೆ.ಪಿ.ಆರ್.ಎಸ್ ರಾಜ್ಯ ಉಪಾಧ್ಯಕ್ಷ ಪಿ.ಆರ್.ಸೂರ್ಯನಾರಾಯಣ ಮಾತನಾಡಿ, ಬ್ರಿಟಿಷರಂತೆ ದೇಶದ ಕಾರ್ಪೊರೇಟ್ ಕಂಪನಿಗಳು ದೇಶದ ಸಂಪತ್ತು ಲೂಟಿ ಮಾಡಿದ್ದಾರೆ, ೧೯೪೨ರಲ್ಲಿ ನಡೆದ ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಚಳವಳಿಯ ಮಾದರಿಯಲ್ಲಿ ಕಾರ್ಪೊರೇಟ್ ಕಂಪನಿಗಳೇ ಭಾರತ ಬಿಟ್ಟು ತೊಲಗಿ ದೇಶದ ರೈತರು ಕಾರ್ಮಿಕರು ಬಡವರನ್ನು ರಕ್ಷಣೆ ಮಾಡಬೇಕಾದ ಸಂದರ್ಭ ಬಂದಿದೆ ಎಂದು ತಿಳಿಸಿದರು.ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಅಬ್ಬಣಿ ಶಿವಪ್ಪ ಮಾತನಾಡಿ, ಬ್ರಿಟಿಷರ ಒಡೆದಾಳುವ ನೀತಿಯನ್ನೇ ಇಂದಿನ ರಾಜಕಾರಣಿಗಳು ಮಾಡುತ್ತಿದ್ದಾರೆ. ದಿನ ನಿತ್ಯದ ಬೆಲೆ ಏರಿಕೆ ಪೆಟ್ರೋಲ್, ಡೀಸೆಲ್ ಬೆಲೆಗಳು ಗಗನಕ್ಕೇರಿವೆ. ಕೃಷಿಕರು, ಶ್ರಮಿಕರು ಹಾಗೂ ದಲಿತರು ಬದುಕುವುದು ದುಸ್ತರವಾಗಿದೆ, ರೈತ ವಿರೋಧಿಯಾದ ಕೇಂದ್ರ ಸರಕಾರದ ಕೃಷಿ ಹಾಗೂ ಕೈಗಾರಿಕಾಭಿವೃದ್ಧಿಯ ವಿರೋಧಿ ಮತ್ತು ಸಾರ್ವಜನಿಕ ರಂಗದ ಉದ್ಯಮಗಳ ವಿರೋಧಿ ನೀತಿಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿದರು.
ಧರಣಿಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಟಿ.ಎಂ. ವೆಂಕಟೇಶ್, ಜಿಲ್ಲಾ ಕಾರ್ಯದರ್ಶಿ ಪಾತಕೋಟ ನವೀನ್ ಕುಮಾರ್, ಮುಖಂಡರಾದ ಗಂಗಮ್ಮ, ಟಿ.ಶ್ರೀನಿವಾಸ್, ಅಲಹಳ್ಳಿ ವೆಂಕಟೇಶಪ್ಪ, ನಾರಾಯಣರೆಡ್ಡಿ, ವೆಂಕಟಪ್ಪ, ನಾರಾಯಣಪ್ಪ, ಸೈಯದ್ ಫಾರೂಕ್, ನಮ್ಮ ರೈತ ಸಂಘದ ಜಿಲ್ಲಾ ಅಧ್ಯಕ್ಷ ಕೋಟಿಗಾನಹಳ್ಳಿ ಗಣೇಶ್ ಗೌಡ, ವೆಂಕಟರಾಮಪ್ಪ, ಸಿಐಟಿಯು ಮುಖಂಡರಾದ ಗಾಂಧಿನಗರ ನಾರಾಯಣಸ್ವಾಮಿ, ಎಂ. ವಿಜಯಕೃಷ್ಣ, ಭೀಮರಾಜ್, ಕೇಶವ್ ರಾವ್, ಕೆ.ವಿ. ಮಂಜುನಾಥ್, ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ದಿನ್ನೆಹೊಸಹಳ್ಳಿ ರಮೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಆನಂದಕುಮಾರ್ ಇದ್ದರು.