ಡಾ.ಅಂಬೇಡ್ಕರ್ ಭವನ ನಿರ್ಮಾಣಕ್ಕೆ ₹3 ಕೋಟಿ

| Published : Oct 09 2024, 01:38 AM IST

ಸಾರಾಂಶ

ಈಗಾಗಲೇ ೩ಕೋಟಿ ರೂ ವೆಚ್ಚದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಭವನದ ಕಟ್ಟಡ ನಿರ್ಮಾಣವಾಗಿದ್ದು, ಈ ಕಟ್ಟಡಕ್ಕೆ ಮತ್ತಷ್ಟು ರೂಪುರೇಷಗಳನ್ನು ನೀಡಿ ಭವನದ ಉದ್ದ, ಆಗಲ ವಿಸ್ತರಣೆ ಮಾಡಿ ರಾಜ್ಯದಲ್ಲಿಯೇ ಮಾದರಿಯಾದ ಸುಸಜ್ಜಿತ ಅಂಬೇಡ್ಕರ್ ಭವನವನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ.

ಕನ್ನಡಪ್ರಭ ವಾರ್ತೆ ಚಿಂತಾಮಣಿ

ಚಿಂತಾಮಣಿಯಲ್ಲಿ ಅಂಬೇಡ್ಕರ್ ಕಲಾಭವನ ನಿರ್ಮಾಣ ಮಾಡಬೇಕೆಂಬುದು ನನ್ನ ಬಹುದೊಡ್ಡ ಕನಸಾಗಿದ್ದು ಆ ಕನಸು ನನಸು ಮಾಡಲು ಅವಕಾಶ ಸಿಕ್ಕಿದೆಯೆಂದು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಸಂತಸ ವ್ಯಕ್ತಪಡಿಸಿದರು.

ನಗರದಲ್ಲಿ ನಿರ್ಮಾಣವಾಗುತ್ತಿರುವ ಅಂಬೇಡ್ಕರ್ ಭವನಕ್ಕೆ ಭೇಟಿ ನೀಡಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಈ ಹಿಂದೆ ಅಂಬೇಡ್ಕರ್ ಭವನಕ್ಕೆ ಜಾಗ ಕೊಡಲು ಸಾಕಷ್ಟು ಕಷ್ಟಪಟ್ಟಿದ್ದೇನೆ. ಈಗಲಾದರೂ ನನಗೆ ಆಪ್ತ ಸಹಾಯಕರು ಇದ್ದಾರೆ. ಹಿಂದೆ ಶಾಸಕನೂ ನಾನೇ ಆಪ್ತಸಹಾಯಕನೂ ನಾನೇ ಆಗಿದ್ದು, ಫೈಲ್ ಹಿಡಿದುಕೊಂಡು ವಿಧಾನಸೌಧ ಸುತ್ತಿ ಸುತ್ತಿ ಜಾಗ ಮಂಜೂರು ಮಾಡಿಸಿದ್ದೆ ಎಂದು ಹಿಂದಿನ ಕೆಲಸಗಳ ಬಗ್ಗೆ ಮೆಲುಕು ಹಾಕಿದರು.

ಅಂಬೇಡ್ಕರ್‌ ಭವನಕ್ಕೆ ₹3 ಕೋಟಿ

ಈಗಾಗಲೇ ೩ಕೋಟಿ ರೂ ವೆಚ್ಚದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಭವನದ ಕಟ್ಟಡ ನಿರ್ಮಾಣವಾಗಿದ್ದು, ಈ ಕಟ್ಟಡಕ್ಕೆ ಮತ್ತಷ್ಟು ರೂಪುರೇಷಗಳನ್ನು ನೀಡಿ ಭವನದ ಉದ್ದ, ಆಗಲ ವಿಸ್ತರಣೆ ಮಾಡಿ ರಾಜ್ಯದಲ್ಲಿಯೇ ಮಾದರಿಯಾದ ಸುಸಜ್ಜಿತ ಅಂಬೇಡ್ಕರ್ ಭವನವನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ ಎಂದರು.

ಈ ಹಿನ್ನಲೆಯಲ್ಲಿ ವಿಸ್ತರಣಾ ಯೋಜನಾ ವರದಿ ವೀಕ್ಷಿಸಿ ವಿನ್ಯಾಸದ ಸಾಧಕ ಭಾದಕಗಳ ಬಗ್ಗೆ ಚರ್ಚೆ ಮಾಡಲು ದಲಿತ ಮುಖಂಡರು ಹಾಗೂ ಅಧಿಕಾರಿಗಳ ಸಭೆಯನ್ನು ನಡೆಸಿ ನೂತನ ಅಂಬೇಡ್ಕರ್ ಭವನ ವಿಸ್ತರಣೆ ರೂಪುರೇಷಗಳನ್ನು ತಯಾರು ಮಾಡಿರುವ ಅಂಬೇಡ್ಕರ್ ಭವನದ ನೀಲಿ ನಕಾಶೆಯನ್ನು ದೃಶ್ಯಚಿತ್ರದ ಮೂಲಕ ವಿವರಿಸಲಾಯಿತೆಂದರು.

ಡಾ.ಅಂಬೇಡ್ಕರ್‌ ವಿಶ್ವ ಮಾನವ

ಅಂಬೇಡ್ಕರ್ ಕೇವಲ ಒಂದು ಜಾತಿಗೆ ಸೀಮಿತವಾಗಿಲ್ಲ ಅವರು ವಿಶ್ವ ಮಾನವರಾಗಿದ್ದು ಅವರು ಬರೆದಿರುವ ಸಂವಿಧಾನದಡಿಯಲ್ಲಿ ನಾವೆಲ್ಲರೂ ಅಧಿಕಾರ ಅನುಭವಿಸುತ್ತಿದ್ದೇವೆ. ಸರ್ಕಾರಿ ಕಾರ್ಯಕ್ರಮಗಳನ್ನು ಒಂದೆಡೆ ಮಾಡುವ ಉದ್ದೇಶದಿಂದ ಹಿಂದೆಯೇ ಸುಸಜ್ಜಿತವಾದ ಅಂಬೇಡ್ಕರ್ ಕಲಾಭವನ ನಿರ್ಮಿಸಲು ನಕ್ಷೆಯನ್ನು ತಯಾರಿಸಲಾಗಿತ್ತಾದರೂ ಚುನಾವಣೆ ಸಮಯದಲ್ಲಿ ನನ್ನ ವಿರುದ್ಧ ಜಾತಿ ಹೆಸರಿನಲ್ಲಿ ಇಲ್ಲದ ಸುಳ್ಳು ಆರೋಪಗಳನ್ನು ಮಾಡಿ ಸೋಲಿಸಲಾಯಿತೆಂದು ಅಳಲನ್ನು ತೋಡಿಕೊಂಡರು.

ಸಮಾಜ ಕಲ್ಯಾಣ ಸಚಿವ ಎಚ್.ಮಹದೇವಪ್ಪರ ಸಹಕಾರದಿಂದ ಅಂಬೇಡ್ಕರ್ ಭವನಕ್ಕೆ ೯ ಕೋಟಿ ರೂ ಮಂಜೂರಾಗಿದ್ದು ೨ ವರ್ಷಗಳ ಒಳಗಾಗಿ ಅಂಬೇಡ್ಕರ್ ಭವನದ ಕಾಮಗಾರಿಯನ್ನು ಪೂರ್ಣಗೊಳಿಸಿ ರಾಜ್ಯದ ಹಿರಿಯರನ್ನು ಆಮಂತ್ರಿಸಿ ಎರಡು ದಿನಗಳ ಕಾಲ ಅದ್ದೂರಿಯಾಗಿ ಉದ್ಘಾಟನೆ ನೆರವೇರಿಸುವುದಾಗಿ ತಿಳಿಸಿದರು.

ವಾಲ್ಮೀಕಿ ಹಾಸ್ಟೆಲ್‌ಗೆ ಶಂಕು

ವಾಲ್ಮೀಕಿ ಭವನಕ್ಕೆ ಒಂದು ಎಕರೆ ಜಮೀನು ಮಂಜೂರು ಮಾಡಿಸಿದ್ದು, ಭವನದಲ್ಲಿ ಕಡಿಮೆ ಆಸನಗಳಿಂದ ಹೆಚ್ಚವರಿ ಆಸನಗಳ ಕಟ್ಟಡಕ್ಕೆ ಹೆಚ್ಚವರಿ ಹಣ ಮಂಜೂರು ಮಾಡಿಸಿದ್ದು ಸದ್ಯದಲ್ಲಿಯೇ ಕಾಮಗಾರಿ ಕೆಲಸ ಪುನರಾರಂಭ ಮಾಡಲಾಗುವುದು. ವಾಲ್ಮೀಕಿ ವಿದ್ಯಾರ್ಥಿ ನಿಲಯದ ಕಟ್ಟಡದ ಕಾಮಗಾರಿಗೆ ವಾಲ್ಮೀಕಿ ಜಯಂತಿ ದಿನದಂದು ಶಂಕುಸ್ಥಾಪನೆ ಮಾಡಲಾಗುವುದೆಂದರು.

ಆಜಾದ್‌ಚೌಕ, ಪಾಲಿಟೆಕ್ನಿಕ್, ಪ್ರವಾಸಿಮಂದಿರ, ಇಂಜಿನಿಯರಿಂಗ್ ಕಾಲೇಜು, ಐಟಿಐ ಕಾಲೇಜು, ಕನಂಪಲ್ಲಿ ಕೊಳಾಯಿ ಕೆರೆ, ನೆಕ್ಕುಂದಿಕೆರೆ ಅಭಿವೃದ್ದಿ, ಸೊಣ್ಣಶೆಟ್ಟಿಹಳ್ಳಿಯ ೯ ಎಕರೆ ಪ್ರದೇಶದಲ್ಲಿ ಸುಸಜ್ಜಿತವಾದ ಕ್ರೀಡಾಂಗಣ ಸೇರಿದಂತೆ ಇನ್ನಿತರೆ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರದಲ್ಲಿಯೇ ಪ್ರಾರಂಭ ಮಾಡಲಾಗುವುದು ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕೆಂದರು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ತೇಜಾನಂದರೆಡ್ಡಿ, ಸಹಾಯಕ ನಿರ್ದೇಶಕ ಶ್ರೀನಿವಾಸ್ ನಾಯಕ್, ತಾ.ಪಂ. ಇಒ ಎಸ್.ಆನಂದ್, ಪೌರಾಯುಕ್ತ ಚಲಪತಿ, ನಗರಸಭಾ ಅದ್ಯಕ್ಷ ಜಗನ್ನಾಥ್, ಉಪಾದ್ಯಕ್ಷೆ ರಾಣಿಯಮ್ಮ, ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್, ಮತ್ತಿತರರು ಉಪಸ್ಥಿತರಿದ್ದರು.