ಟೆಂಡರ್ ಕರೆಯುವಲ್ಲಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ

| Published : Oct 09 2024, 01:38 AM IST

ಟೆಂಡರ್ ಕರೆಯುವಲ್ಲಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ಪುರಸಭೆಯ ಕೆಲವೇ ಸದಸ್ಯರ ಗಮನಕ್ಕೆ ತಂದು ಟೆಂಡರ್ ಕರೆಯುವ ಕಾರ್ಯ ನಡೆಯುತ್ತಿದೆ

ಲಕ್ಷ್ಮೇಶ್ವರ: ಪುರಸಭೆಯಲ್ಲಿ 15ನೇ ಹಣಕಾಸು ಯೋಜನೆ ಅಡಿಯಲ್ಲಿ ಕೆಲಸ ಕಾಮಗಾರಿಗಳಿಗೆ ಕರೆದಿರುವ ಟೆಂಡರ್ ರದ್ದು ಪಡಿಸಿ ಹೊಸದಾಗಿ ಟೆಂಡರ್ ಕರೆಯಬೇಕು ಎಂದು ಪುರಸಭೆ ಉಪಾಧ್ಯಕ್ಷ ಪಿರ್ಧೋಶ್ ಆಡೂರ ಆಗ್ರಹಿಸಿದರು.

ಪಟ್ಟಣದ ಪುರಸಭೆಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಪುರಸಭೆಯ ಸಾಮಾನ್ಯ ನಿಧಿ ಹಾಗೂ 15ನೇ ಹಣಕಾಸು ಯೋಜನೆ ಅಡಿಯಲ್ಲಿ ಸುಮಾರು ₹44.25 ಲಕ್ಷ ವೆಚ್ಚದಲ್ಲಿ 9ವಿವಿಧ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದ್ದು, ಆ ಟೆಂಡರಗಳನ್ನು ಕರೆಯುವ ಮೊದಲು ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಬದಲು ಕೆಲವೇ ಸದಸ್ಯರ ಗಮನಕ್ಕೆ ತಂದು ಟೆಂಡರ್ ಕರೆಯಲಾಗಿದೆ. ಹಲವು ಸದಸ್ಯರು ಈ ಕುರಿತು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಈ ಟೆಂಡರ್ ಪ್ರಕ್ರಿಯೆ ರದ್ದು ಪಡಿಸಿ ಹೊಸದಾಗಿ ಟೆಂಡರ್ ಕರೆಯಬೇಕು ಎಂದರು.

ಈ ವೇಳೆ ರಾಮಣ್ಣ ಗಡದವರ ಹಾಗೂ ಸಾಹೀಬ್ಜಾನ್ ಹವಾಲ್ದಾರ್ ಪುರಸಭೆಯ ಕೆಲವೇ ಸದಸ್ಯರ ಗಮನಕ್ಕೆ ತಂದು ಟೆಂಡರ್ ಕರೆಯುವ ಕಾರ್ಯ ನಡೆಯುತ್ತಿದೆ. ಹೀಗಾದಲ್ಲಿ ನಮ್ಮ ವಾರ್ಡಿನ ಜನರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಆಗುತ್ತಿಲ್ಲ. ಕೆಲವೇ ವಾರ್ಡುಗಳಲ್ಲಿ ವಿವಿಧ ಕಾಮಗಾರಿಗಳಿಗೆ ಟೆಂಡರ್ ಕರೆದಿರುವುದು ಸರಿಯಲ್ಲ. ಆದ್ದರಿಂದ ಈ ಕಾಮಗಾರಿಗೆ ಮರು ಟೆಂಡರ್ ಕರೆಯಬೇಕು ಹಾಗು ಎಲ್ಲ ವಾರ್ಡ್‌ಗಳಲ್ಲಿ ಕಾಮಗಾರಿಗಳು ನಡೆಯುವಂತಾಗಬೇಕು ಎಂದು ಒತ್ತಾಯಿಸಿದರು.

ಈ ವೇಳೆ ರಾಜು ಕುಂಬಿ ಸದಸ್ಯರನ್ನು ಸಮಾಧಾನ ಪಡಿಸಲು ಯತ್ನಿಸಿ ವಿಫಲರಾದರು. ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸ್ವಲ್ಪ ಗೊಂದಲದ ವಾತಾವರಣ ನಿರ್ಮಾಣವಾಯಿತು. ಪುರಸಭೆಯ ಸದಸ್ಯ ಪ್ರವೀಣ ಬಾಳಿಕಾಯಿ ಮಾತನಾಡಿ, ತುಂಗಭದ್ರಾ ನದಿಯ ನೀರು ಎತ್ತುವ ಮೋಟಾರ್ ದುರಸ್ತಿಗೆ ಕ್ರಮ ಕೈಗೊಳ್ಳಬೇಕು.

ಲಕ್ಷ್ಮೇಶ್ವರ ಪಟ್ಟಣಕ್ಕೆ ತುಂಗಭದ್ರಾ ನದಿಯ ನೀರು ಪೂರೈಸುವ ಮೇವುಂಡಿ ಜಾಕ್ ವೆಲ್ಲ್ ನಲ್ಲಿನ ಹಾಗೂ ಸೂರಣಗಿ ಗ್ರಾಮದ ಹತ್ತಿರ ಇರುವ ಶುದ್ಧೀಕರಣ ಘಟಕದಲ್ಲಿನ ಮೋಟಾರಗಳ ದುರಸ್ತಿಗೆ ಕೂಡಲೇ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಪುರಸಭೆಯ ಪೌರ ಕಾರ್ಮಿಕರನ್ನು ಹೊರ ಗುತ್ತಿಗೆ ಆಧಾರದಲ್ಲಿ ಸುಮಾರು 30 ಕ್ಕೂ ಹೆಚ್ಚು ಕಾರ್ಮಿಕರನ್ನು ನೇಮಕ ಮಾಡಿಸಿಕೊಳ್ಳಲು ಅವಕಾಶ ಇದ್ದು, ಈ ಕುರಿತು ಜಿಲ್ಲಾಧಿಕಾರಿಗಳ ಗಮನ ಸೆಳೆದು, ಪೌರಾಡಳಿತ ಸಚಿವರನ್ನು ಭೇಟಿಯಾಗಿ ಅವರಿಗೆ ಮನವರಿಕೆ ಮಾಡಿಕೊಡುವ ಕಾರ್ಯ ಮಾಡಬೇಕು ಎಂದು ಹೇಳಿದರು.

ಸಭೆಯ ಅಧ್ಯಕ್ಷತೆಯನ್ನು ಪುರಸಭೆಯ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ ವಹಿಸಿದ್ದರು. ಜಯಕ್ಕ ಕಳ್ಳಿ, ಜಯಕ್ಕ ಅಂದಲಗಿ, ಮಂಜುಳಾ ಗುಂಜಳ, ಮಂಜವ್ವ ನಂದೆಣ್ಣವರ, ಮುಕ್ತಿಯಾರ ಅಹ್ಮದ್ ಶಿರಹಟ್ಟಿ, ಮಹೇಶ ಹುಲಬಜಾರ್, ವಾಣಿ ಹತ್ತಿ, ಅಶ್ವಿನಿ ಅಂಕಲಕೋಟಿ, ಪುರ್ಣಿಮಾ ಪಾಟೀಲ, ಬಸವರಾಜ ಓದುನವರ, ಪೂಜಾ ಕರಾಟೆ, ಸಿಕಂದರ್ ಕಣಕೆ, ಮಹಾದೇವಪ್ಪ ಅಣ್ಣಿಗೇರಿ, ಪುರಸಭೆಯ ಮುಖ್ಯಾಧಿಕಾರಿ ಮಹೇಶ ಹಡಪದ, ಕಂದಾಯ ಅಧಿಕಾರಿ ಶಿವಾನಂದ ಅಜ್ಜಣ್ಣವರ, ಮಂಜುಳಾ ಹುಗಾರ ಇದ್ದರು. ಹನುಮಂತಪ್ಪ ನಂದೆಣ್ಣವರ ಕಾರ್ಯಕ್ರಮ ನಿರ್ವಹಿಸಿದರು.