ಸಾರಾಂಶ
ಬೆವರ ಹನಿ ಸಂಪಾದನೆಯಿಂದ ಜೀವನ ಜೇನಾಗುತ್ತದೆ. ಒಂದು ಸಣ್ಣ ಇರುವೆ ಕೂಡ ನಮಗೆ ಅದ್ಭುತವಾದ ದುಡಿಮೆ ಹಾಗೂ ಶಿಸ್ತಿನ ಪಾಠ ಕಲಿಸುತ್ತದೆ
ಬಸವಕಲ್ಯಾಣ: ದುಡಿಮೆಯೇ ಒಂದು ಆರಾಧನೆಯಾಗಿದ್ದು, ಬದುಕಿನ ಶ್ರೇಯಸ್ಸಿಗೆ ಮೂಲಾಧಾರವಾಗಿದೆ. ನಿಷ್ಠೆಯಿಂದ ಕೂಡಿದ ದುಡಿಮೆ ಭಗವಂತನ ಪೂಜೆಗೆ ಸಮ ಎಂದು ಹಾರಕೂಡದ ಡಾ.ಚನ್ನವೀರ ಶಿವಾಚಾರ್ಯರು ನುಡಿದರು.
ತಾಲೂಕಿನ ಹಾರಕೂಡ ಮಠದಲ್ಲಿ ಆಯೋಜಿಸಿದ ಗುರುಲಿಂಗ ಶಿವಾಚಾರ್ಯರ ಉಚಿತ ವಸತಿ ನಿಲಯದ 2008-09ನೇ ಸಾಲಿನ 2ನೇ ಬ್ಯಾಚ್ ವಿದ್ಯಾರ್ಥಿಗಳಿಂದ ಗುರುವಂದನೆ ಹಾಗೂ ಹಾರಕೂಡ ಶ್ರೀಗಳ 724ನೇ ತುಲಾಭಾರ ಮತ್ತು ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪೂಜ್ಯರು, ಬೆವರ ಹನಿ ಸಂಪಾದನೆಯಿಂದ ಜೀವನ ಜೇನಾಗುತ್ತದೆ. ಒಂದು ಸಣ್ಣ ಇರುವೆ ಕೂಡ ನಮಗೆ ಅದ್ಭುತವಾದ ದುಡಿಮೆ ಹಾಗೂ ಶಿಸ್ತಿನ ಪಾಠ ಕಲಿಸುತ್ತದೆ ಎಂದರು. ಶಾಲೆಯ 2ನೇ ಬ್ಯಾಚ್ ವಿದ್ಯಾರ್ಥಿಗಳಾದ ಸಂಗಮೇಶ ಕನಕಪೂರ, ವಿಜಯಕುಮಾರ ನಾಗವಾರ, ಮಹಾದೇವ ದೇಗಾಂವ, ನಿತ್ಯಾನಂದ ಏಕಲೂರವಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಬೀದರ ಜಿಪಂ ನಿವೃತ್ತ ಉಪ ಕಾರ್ಯದರ್ಶಿ ಬಿ.ಕೆ.ಹಿರೇಮಠ, ಮಲ್ಲಿನಾಥ ಹಿರೇಮಠ ಹಾರಕೂಡ, ಭೀಮಶ ಜೋಜನ, ಅಪ್ಪಣ್ಣ ಜನವಾಡ, ಡಾ.ರಾಜಶೇಖರ ಮದರಿ, ಗುರುಲಿಂಗಪ್ಪ ದೇಗಾಂವ ಇದ್ದರು. ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನಾ ಗೀತೆ ನಡೆಸಿಕೊಟ್ಟರು. ಅಂಬಿಕಾ ಸ್ವಾಮಿ ಸ್ವಾಗತಿಸಿ, ಗುರುಲಿಂಗಪ್ಪ ದೇಗಾಂವ ನಿರೂಪಿಸಿ, ಪ್ರಾಸ್ತಾವಿಕ ಮಾತನಾಡಿದರು. ಅರುಣ ಪತ್ತಾರ ವಂದಿಸಿದರು.