ಕಟೀಲು ಲಲಿತಾ ಪಂಚಮಿ: 20 ಸಾವಿರ ಭಕ್ತರಿಗೆ ಶೇಷ ವಸ್ತ್ರ ವಿತರಣೆ

| Published : Oct 09 2024, 01:38 AM IST

ಸಾರಾಂಶ

ನವರಾತ್ರಿಯಲ್ಲಿ ಈ ಬಾರಿ ಪಂಚಮಿ ಸೋಮವಾರ ಮಧ್ಯಾಹ್ನದಿಂದ ಮಂಗಳವಾರ ಮಧ್ಯಾಹ್ನದವರೆಗೆ ಇದ್ದ ಹಿನ್ನೆಲೆಯಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ಮಂಗಳವಾರ ಲಲಿತಾ ಪಂಚಮಿ ಆಚರಿಸಲಾಯಿತು.ಲಲಿತಾ ಪಂಚಮಿಯಂದು ಸುಮಾರು 30 ಸಾವಿರ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡಿದ್ದು ಸುಮಾರು20 ಸಾವಿರ ಮಹಿಳಾ ಭಕ್ತರಿಗೆ ದೇವಿಯ ಶೇಷವಸ್ತ್ರ ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ನವರಾತ್ರಿಯಲ್ಲಿ ಈ ಬಾರಿ ಪಂಚಮಿ ಸೋಮವಾರ ಮಧ್ಯಾಹ್ನದಿಂದ ಮಂಗಳವಾರ ಮಧ್ಯಾಹ್ನದವರೆಗೆ ಇದ್ದ ಹಿನ್ನೆಲೆಯಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ಮಂಗಳವಾರ ಲಲಿತಾ ಪಂಚಮಿ ಆಚರಿಸಲಾಯಿತು.

ಲಲಿತಾ ಪಂಚಮಿಯಂದು ಸುಮಾರು 30 ಸಾವಿರ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡಿದ್ದು ಸುಮಾರು20 ಸಾವಿರ ಮಹಿಳಾ ಭಕ್ತರಿಗೆ ದೇವಿಯ ಶೇಷವಸ್ತ್ರ ವಿತರಿಸಲಾಯಿತು.

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಲಲಿತಾ ಪಂಚಮಿ ಪ್ರಯುಕ್ತ ಮಂಗಳವಾರ ವಿಶೇಷ ಸಾಮೂಹಿಕ ಚಂಡಿಕಾಹವನ ನಡೆಯಿತು. ಬೆಳಿಗ್ಗಿನಿಂದಲೇ ಭಕ್ತರು ಸಹಸ್ರ ಸಂಖ್ಯೆಯಲ್ಲಿ ಬರುತ್ತಲೇ ಇದ್ದು ರಾತ್ರಿಯ ಹೊತ್ತಿಗೆ ಸುಮಾರು ಮೂವತ್ತು ಸಾವಿರಕ್ಕಿಂತಲೂ ಹೆಚ್ಚು ಮಂದಿ ಭೇಟಿ ನೀಡಿದ್ದಾರೆ. ಐದು ಸಾವಿರಕ್ಕೂ ಹೆಚ್ಚು ಹೂವಿನ ಪೂಜೆಗಳಾಗಿವೆ. 20 ಸಾವಿರದಷ್ಟು ಮಹಿಳಾ ಭಕ್ತರಿಗೆ ಶೇಷವಸ್ತ್ರ ವಿತರಣೆಗೆ ಸಿದ್ದತೆ ಮಾಡಲಾಗಿದ್ದು, ದೇವಸ್ಥಾನದ ಎದುರಿನ ವಿಶಾಲ ಸ್ಥಳವಲ್ಲದೆ ಬಸ್ ನಿಲ್ದಾಣ ಮೀರಿ ಸರತಿ ಸಾಲು ಮುಂದುವರಿದಿತ್ತು. ಬೆಳಿಗ್ಗಿನಿಂದಲೇ ಸಾವಿರಾರು ಮಂದಿ ಅನ್ನಪ್ರಸಾದ ಸ್ವೀಕರಿಸಿದ್ದು ರಾತ್ರಿ 12 ಗಂಟೆ ದಾಟಿದರೂ ಭೋಜನ ವಿತರಿಸಲು ದೇಗುಲದ ಸಿಬಂದಿಯಲ್ಲದೆ ನೂರಾರು ಭಕ್ತರು ಸ್ವಯಂಸೇವಕರಾಗಿ ಸಹಕರಿಸಿದರು. ದಿನವಿಡೀ ನಾನಾ ಭಜನಾ ತಂಡಗಳಿಂದ ಭಜನೆ, ತಾಳಮದ್ದಲೆ ಯಕ್ಷಗಾನ ಬಯಲಾಟ ನಡೆದವು. ಕೊಡೆತ್ತೂರು ಗ್ರಾಮಸ್ಥರ 60ನೇ ವರುಷದ ವೈಭವದ ನವರಾತ್ರಿ ಮೆರವಣಿಗೆ ಕಟೀಲು ಕ್ಷೇತ್ರವನ್ನು ತಲುಪಿ ವೇಷಧಾರಿಗಳು ಹರಕೆ ತೀರಿಸಿದರು.

ಮಂಗಳವಾರ ಬೆಳಗ್ಗೆ ದೇವಳದಲ್ಲಿ ಅಲಂಕಾರ ಪೂಜೆ, ಭಕ್ತರ ದೇಣಿಗೆಯಿಂದ ಚಂಡಿಕಾ ಯಾಗ, ಮುಂಜಾನೆ 4 ಗಂಟೆಯಿಂದ ಸಾವಿರ ಸೀಯಾಳ ಅಭಿಷೇಕ, ರಂಗ ಪೂಜೆ, ರಾತ್ರಿ ಸುಮಾರು 100ರಷ್ಟು ಆರತಿಯ ಮೂಲಕ ಭ್ರಾಮರಿಗೆ ರಂಗ ಪೂಜೆ, ಮಂಗಳಾರತಿ ನಡೆಯಿತು.

.......................ಕಟೀಲಿನಲ್ಲಿ ವಿಶೇಷವಾಗಿ ಕನ್ನಿಕಾ ಸುವಾಸಿನಿ ಆರಾಧನೆ ನಡೆಯುತ್ತಿರುವುದರಿಂದ ಪ್ರಸಾದ ರೂಪದಲ್ಲಿ ಕನ್ನಿಕೆಯರಿಗೆ ವಸ್ತ್ರ ನೀಡಲಾಗುತ್ತದೆ. ದೇವಸ್ಥಾನಕ್ಕೆ ಪ್ರತಿ ದಿನವೂ ಹರಕೆಯ ರೂಪದಲ್ಲಿ ಸೀರೆ ಮತ್ತು ರವಿಕೆ ಕಣಗಳು ಬರುತ್ತಿದ್ದು ಲಲಿತಾ ಪಂಚಮಿಯಂದು ದೇವರಿಗೆ ಸಮರ್ಪಿತವಾದ ಶೇಷ ವಸ್ತ್ರವನ್ನು ಮಹಿಳಾ ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡಲಾಗುತ್ತಿದೆ. ಈಗ ಭಕ್ತರ ಸಂಖ್ಯೆ ಹೆಚ್ಚಿರುವ ಕಾರಣ ಒಂದೇ ರೀತಿಯ ಬೇರೆ ಬೇರೆ ಬಣ್ಣದ ಸೀರೆಗಳನ್ನು ಖರೀದಿಸಿ ದುರ್ಗೆಗೆ ಸಮರ್ಪಿಸಿ ಹಂಚಲಾಗುತ್ತದೆ.

-ವೇ.ಮೂ.ಶ್ರೀಹರಿನಾರಾಯಣ ಆಸ್ರಣ್ಣ, ಕಟೀಲು ಕ್ಷೇತ್ರದ ಅರ್ಚಕ.