ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ವಿದ್ಯಾರ್ಥಿಗಳ ಭವಿಷ್ಯವು ಅವರ ಹಸ್ತರೇಖೆಗಳಿಂದ ನಿರ್ಧಾರವಾಗುವುದಿಲ್ಲ. ಬದಲಾಗಿ ನಿಮ್ಮಲ್ಲಿರುವ ಶಿಸ್ತು, ಪರಿಶ್ರಮ, ಜ್ಞಾನದಿಂದ ಮಾತ್ರ ಉತ್ತಮ ವ್ಯಕ್ತಿಗಳಾಗಲು ಸಾಧ್ಯ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.ತಾಲೂಕಿನ ಬಿ.ಜಿ.ನಗರದ ಬಿ.ಜಿ.ಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಮಂಗಳವಾರ ಆಯೋಜಿದ್ದ ಮೊದಲ ವರ್ಷದ ಬಿ.ಇ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಾದ ನೀವು ತಂದೆ ತಾಯಿ ಪರಿಶ್ರಮವನ್ನು ಎಂದಿಗೂ ಮರೆಯಬಾರದು. ನೀವು ಇಷ್ಟು ಎತ್ತರಕ್ಕೆ ಬೆಳೆಯಲು ಅವರ ಬೆವರಿನ ಶ್ರಮವೇ ಮೂಲವಾಗಿದೆ. ಮಕ್ಕಳು ಹೆತ್ತವರು ಮತ್ತು ಸಮಾಜದ ಶಕ್ತಿಯನ್ನು ಬಳಸಿಕೊಂಡು ಓದುವ ಸಮಯದಲ್ಲಿ ನಮ್ಮ ಶಕ್ತಿಯನ್ನು ಕೇವಲ ಓದಿಗಾಗಿಯೇ ಮೀಸಲಿಡಬೇಕು. ಆಗ ಮಾತ್ರವೇ ನೀವು ಸಾಧನೆ ಮಾಡಲು ಸಾಧ್ಯ ಎಂದರು.ಕೇವಲ ಗಿಣಿಪಾಠ ಮಾಡಿ ತಲೆಗೆ ಪರಿಕಲ್ಪನೆ ತುಂಬಿಕೊಳ್ಳುತ್ತೀರೋ ಅವರು ಕೌಶಲಗಳನ್ನು ಬೆಳೆಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆ ನಿಟ್ಟಿನಲ್ಲಿ ನಿಮಗೆ ಉದ್ಯೋಗ ಸಿಗಬೇಕಾದರೆ ಜ್ಞಾನದ ಜೊತೆಗೆ ಕೌಶಲವು ಮುಖ್ಯವಾಗಿರುತ್ತದೆ. ನಮ್ಮ ಹಳ್ಳಿಜನರ ಜೀವನ ಅಭಿವೃದ್ಧಿಯಾಗುವುದು ಯಾವಾಗ ಎಂದರೆ ಅವರ ಮನೆಯ ಮಕ್ಕಳು ಶಿಕ್ಷಣ ಪಡೆದು ಜ್ಞಾನವಂತರಾದಾಗ ಮಾತ್ರ ಎಂದರು.
ರಾಜ್ಯ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಎಸ್.ಆರ್.ನಿರಂಜನ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಬಹುತೇಕರು ಗ್ರಾಮೀಣ ವಿದ್ಯಾರ್ಥಿಗಳಾಗಿದ್ದಾರೆ. ನಾವು ವೇದ, ಉಪನಿಷತ್‌ನಿಂದ ಶಿಕ್ಷಣವನ್ನು ಪ್ರಾರಂಭಿಸುತ್ತಾ ಬಂದಿದ್ದೇವೆ, ನಳಂದಾ, ತಕ್ಷಣ ಶಿಲಾ ವಿವಿಗಳು ಪ್ರಪಂಚಕ್ಕೆ ಉನ್ನತ ಗುಣಮಟ್ಟದ ಶಿಕ್ಷಣವನ್ನು ನೀಡಿವೆ. ಇವು ಅಂದಿನ ಕಾಲದಲ್ಲೇ ಪ್ರಪಂಚ ಎಲ್ಲಾ ದೇಶಗಳ ವಿದ್ಯಾರ್ಥಿಗಳನ್ನು ಆಕರ್ಷಿಸಿದ್ದವು. ಅಂತ ಶ್ರೇಷ್ಟ ಶಿಕ್ಷಣ ನಮ್ಮ ದೇಶದಲ್ಲಿ ಸಿಗುತ್ತಿತ್ತು. ಪ್ರಪಂಚದಲ್ಲಿ ಬುದ್ಧಿಸೂಚ್ಯಂಕ, ಶಿಕ್ಷಣದ ಗುಣಮಟ್ಟವನ್ನು ಅಳತೆ ಮಾಡಲಾಗುತ್ತದೆ. ಸ್ವಾತಂತ್ರ್ಯ ಬಂದ ನಂತರ ಆಹಾರ ಭದ್ರತೆ, ಶಿಕ್ಷಣ, ಸಂಪರ್ಕ ವ್ಯವಸ್ಥೆ ಇರಲಿಲ್ಲ. ಅಂದು ದೇಶದ ಪ್ರಧಾನಿಯಾಗಿದ್ದ ನೆಹರೂ ರವರು ದೇಶ ಅಭಿವೃದ್ಧಿಯಾಗಬೇಕಾದರೆ ತಂತ್ರಜ್ಞಾನ ಅವಶ್ಯಕ ಎಂದು ತಂತ್ರಜ್ಞಾನಕ್ಕೆ ಒತ್ತು ನೀಡಿದರು ಎಂದರು.ಎಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥ ಮಂಜುನಾಥ್ ಅವರು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ಅಲ್ಲದೇ ಪ್ರಸಕ್ತ ಸಾಲಿನಲ್ಲಿ ವಿವಿಧ ವಿಭಾಗಗಳಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.
ಜೆಡಿಎಸ್ ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು, ಆದಿಚುಂಚನಗಿರಿ ವಿವಿಯ ಉಪಕುಲಪತಿ ಎಂ.ಎ.ಶೇಖರ್, ಆದಿಚುಂಚನಗಿರಿ ವಿವಿಯ ರಿಜಿಸ್ಟ್ರಾರ್ ಸಿ.ಕೆ.ಸುಬ್ಬರಾಯ, ಕಾಲೇಜಿನ ಪ್ರಾಂಶುಪಾಲ ಎಂ.ಜಿ.ಶಿವರಾಮು, ಬಿಜಿಎಸ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಎ.ಟಿ.ಶಿವರಾಮು, ಆದಿಚುಂಚನಗಿರಿ ವಿವಿಯ ಸಲಹೆಗಾರ ಡಾ.ಇ.ಎಸ್. ಚಕ್ರವರ್ತಿ, ಪ್ರಾಂಶುಪಾಲೆ ಶೋಭಾ ಸೇರಿದಂತೆ ವಿವಿಧ ಕಾಲೇಜುಗಳ ಪ್ರಾಂಶುಪಾಲರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.