ಯಾರಿಗೇ ಟಿಕೆಟ್‌ ಕೊಟ್ರೂ ಗೆಲ್ಲಿಸಿಕೊಂಡು ಬನ್ನಿ ಅಷ್ಟೇ!

| Published : Oct 09 2024, 01:38 AM IST

ಸಾರಾಂಶ

ಇಲ್ಲಿ ಆಕಾಂಕ್ಷಿಗಳು ಸಾಕಷ್ಟು ಜನರಿದ್ದಾರೆ. ಕ್ಷೇತ್ರಕ್ಕೆ ಮುಸ್ಲಿಮರಿಗೆ ಟಿಕೆಟ್‌ ಕೊಡಬೇಕು ಎಂಬ ಬೇಡಿಕೆ ಎಷ್ಟಿದೆಯೋ ಅಷ್ಟೇ ಪ್ರಮಾಣದಲ್ಲಿ ಹಿಂದೂಗಳಿಗೆ ಕೊಡಬೇಕು ಎಂಬ ಒತ್ತಡವೂ ಇದೆ.

ಹುಬ್ಬಳ್ಳಿ:

ಟಿಕೆಟ್‌ ಯಾರಿಗೆ ಕೊಡುತ್ತೇವೆ ಎಂಬುದು ಮುಖ್ಯವಲ್ಲ. ಆದರೆ ಯಾರಿಗೇ ಕೊಟ್ಟರೂ ಅವರನ್ನು ಗೆಲ್ಲಿಸಿಕೊಂಡು ಬರಬೇಕಷ್ಟೇ. ಹೊರಗೆ ಹೋಗುವವರಿದ್ದರೆ ಈಗಲೇ ಹೊರಟು ಬಿಡಿ..!

ಇದು ಹಾವೇರಿ ಜಿಲ್ಲೆಯ ಶಿಗ್ಗಾವಿ-ಸವಣೂರು ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆ ಆಕಾಂಕ್ಷಿಗಳ ಗೌಪ್ಯಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ ನೀಡಿರುವ ಸಂದೇಶ. ಹತ್ತೇ ನಿಮಿಷ ಸಭೆ ನಡೆಸಿದರೂ ಎಚ್ಚರಿಕೆ ಸಂದೇಶ ರವಾನಿಸಿದರು.

ರಾಯಚೂರ ಜಿಲ್ಲೆಯ ಸಿಂಧನೂರನಿಂದ ಹೆಲಿಕಾಪ್ಟರ್‌ ಮೂಲಕ ನಗರಕ್ಕೆ ಆಗಮಿಸಿದ್ದ ಡಿಕೆಶಿ, ಇಲ್ಲಿನ ಸರ್ಕ್ಯೂಟ್‌ ಹೌಸ್‌ನಲ್ಲಿ ಶಿಗ್ಗಾವಿ ಕ್ಷೇತ್ರದ ಆಕಾಂಕ್ಷಿಗಳು, ಧಾರವಾಡ ಹಾಗೂ ಹಾವೇರಿ ಜಿಲ್ಲೆಯ ಶಾಸಕರೊಂದಿಗೆ ಕೆಲಹೊತ್ತು ಗೌಪ್ಯ ಸಭೆ ನಡೆಸಿದರು. ಸಭೆಯಲ್ಲಿ ಪಕ್ಷದ ಗೆಲುವಿಗೆ ಏನು ಮಾಡಬೇಕು ಎಂಬುದರ ಖಡಕ್‌ ಸೂಚನೆ ನೀಡಿದರು ಎಂದು ಮೂಲಗಳು ತಿಳಿಸಿವೆ.

ಟಿಕೆಟ್‌ ಆಕಾಂಕ್ಷಿಗಳಾದ ಅಜ್ಜಂಪೀರ ಖಾದ್ರಿ, ಸೋಮಣ್ಣ ಬೇವಿನಮರದ, ಯಾಸೀರಖಾನ ಪಠಾಣ, ಸಂಜೀವ ನೀರಲಗಿ, ರಾಜೇಶ್ವರಿ ಪಾಟೀಲ, ರಾಜು ಕುನ್ನೂರ ಸೇರಿದಂತೆ ಹಲವರು ಇದ್ದರು.

ಎಲ್ಲರ ಅಹವಾಲು ಕೇಳಿದ ಬಳಿಕ ತಮ್ಮದೇ ಸ್ಟೈಲ್‌ನಲ್ಲಿ ಎಲ್ಲರಿಗೂ ಸಂದೇಶ ರವಾನಿಸಿದರು ಎನ್ನಲಾಗಿದೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೋಕಸಭೆ ಸದಸ್ಯರಾಗಿದ್ದಾರೆ. ಅವರ ರಾಜೀನಾಮೆಯಿಂದಾಗಿ ಈ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ. ಇಲ್ಲಿ ಆಕಾಂಕ್ಷಿಗಳು ಸಾಕಷ್ಟು ಜನರಿದ್ದಾರೆ. ಕ್ಷೇತ್ರಕ್ಕೆ ಮುಸ್ಲಿಮರಿಗೆ ಟಿಕೆಟ್‌ ಕೊಡಬೇಕು ಎಂಬ ಬೇಡಿಕೆ ಎಷ್ಟಿದೆಯೋ ಅಷ್ಟೇ ಪ್ರಮಾಣದಲ್ಲಿ ಹಿಂದೂಗಳಿಗೆ ಕೊಡಬೇಕು ಎಂಬ ಒತ್ತಡವೂ ಇದೆ. ಕ್ಷೇತ್ರದಲ್ಲಿ ನಾಲ್ಕು ಚುನಾವಣೆಯಿಂದ ಪಕ್ಷ ಗೆದ್ದಿಲ್ಲ. ಈ ಸಲ ಯಾವುದೇ ಕಾರಣಕ್ಕೂ ಸೋಲಬಾರದು. ಆ ರೀತಿ ಎಲ್ಲರೂ ಸೇರಿಕೊಂಡು ಕೆಲಸ ಮಾಡಬೇಕು. ತಮಗೆ ಟಿಕೆಟ್‌ ಸಿಕ್ಕಿಲ್ಲ ಎಂದುಕೊಂಡು ಪಕ್ಷಕ್ಕೆ ದ್ರೋಹ ಬಗೆಯುವ ಕೆಲಸ ಯಾರೂ ಮಾಡಬಾರದು. ಹಾಗೊಂದು ವೇಳೆ ಮಾಡಿದರೂ ನಮಗೆ ಗೊತ್ತಾಗುತ್ತದೆ ಎಂದರು

ಏಳೆಂಟು ಜನ ಆಕಾಂಕ್ಷಿಗಳಿದ್ದಾರೆ. ಇಲ್ಲಿರುವ ಆಕಾಂಕ್ಷಿಗಳಿಗೂ ಟಿಕೆಟ್‌ ಕೊಡಬಹುದು ಅಥವಾ ಬೇರೆಯವರಿಗೂ ಟಿಕೆಟ್‌ ಕೊಡಬಹುದು. ಯಾರಿಗೆ ಕೊಡಬೇಕು ಎಂಬುದನ್ನು ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುತ್ತದೆ. ಯಾರಿಗೆ ಟಿಕೆಟ್‌ ಕೊಟ್ಟರೂ ಎಲ್ಲರೂ ಒಟ್ಟಾಗಿ ಕೆಲಸ ಮಾಡಿ ಗೆಲ್ಲಿಸಿಕೊಂಡು ಬರಬೇಕಷ್ಟೇ. ಯಾರಿಗೆ ಟಿಕೆಟ್‌ ಕೊಡಬೇಕೆಂದರೂ ಪಕ್ಷ ತಾನೇ ಮೂರ್ನಾಲ್ಕು ಬಾರಿ ಸಮೀಕ್ಷೆ ನಡೆಸುತ್ತದೆ. ಆ ಬಳಿಕವಷ್ಟೇ ಟಿಕೆಟ್‌ ಯಾರಿಗೆ ಎಂಬುದನ್ನು ಫೈನಲ್‌ ಮಾಡುತ್ತೇವೆ ಎಂದು ತಿಳಿಸಿದರು ಎನ್ನಲಾಗಿದೆ. ರಾಜ್ಯದಲ್ಲಿ ನಮ್ಮದೇ ಸರ್ಕಾರವಿದೆ. ಇನ್ನೂ ಮೂರುವರೆ ವರ್ಷ ನಮ್ಮದೇ ಸರ್ಕಾರವಿರುತ್ತದೆ. ಯಾರ್ಯಾರು ಕೆಲಸ ಮಾಡಿರುತ್ತಾರೋ ಅವರಿಗೆಲ್ಲ ಯಾವಾಗ ಸ್ಥಾನಮಾನ ಕೊಡಬೇಕು ಕೊಟ್ಟೇ ಕೊಡುತ್ತೇವೆ. ಕೆಲಸ ಮಾಡಿದವರಿಗೆ ಕೈಬಿಡುವುದಿಲ್ಲ. ಹಾಗಂತ ಟಿಕೆಟ್‌ ತಪ್ಪಿತು ಎಂದುಕೊಂಡು ಪಕ್ಷಕ್ಕೆ ದ್ರೋಹ ಬಗೆದರೆ ನಡೆಯಲ್ಲ. ಒಂದು ವೇಳೆ ಆ ಯೋಚನೆ ಏನಾದರೂ ಇದ್ದರೆ ಈಗಲೇ ಹೊರಗೆ ನಡೆದುಬಿಡಿ ಎಂದು ಖಡಕ್‌ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ವೇಳೆ ವಿಧಾನ ಪರಿಷತ್‌ನ ಮುಖ್ಯ ಸಚೇತಕ ಸಲೀಂ ಅಹ್ಮದ್, ಶಾಸಕರಾದ ಶ್ರೀನಿವಾಸ ಮಾನೆ, ಎನ್.ಎಚ್. ಕೋನರಡ್ಡಿ, ಯು.ಬಿ. ಬಣಕಾರ, ಮಾಜಿ ಸಂಸದ ಪ್ರೊ. ಐ.ಜಿ. ಸನದಿ, ರಾಜು ಕುನ್ನೂರ ಸೇರಿದಂತೆ ಶಿಗ್ಗಾಂವಿ- ಸವಣೂರು ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರ, ಗ್ರಾಮೀಣ ಅಧ್ಯಕ್ಷ ಅನೀಲಕುಮಾರ ಪಾಟೀಲ, ಪ್ರಕಾಶಗೌಡ ಪಾಟೀಲ ಸೇರಿದಂತೆ ಹಲವರಿದ್ದರು. ಯಾವುದೇ ಸಭೆ ಮಾಡಿಲ್ಲ?:

ಸಭೆ ಪೂರ್ಣಗೊಳ್ಳುತ್ತಿದಂತೆ ಪ್ರವಾಸಿ ಮಂದಿರದಿಂದ ಹೊರಬಂದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ನಾನಿಲ್ಲಿ ಪಕ್ಷದ ಕಾರ್ಯಕರ್ತರನ್ನು ಭೇಟಿಯಾಗಿದ್ದೇನೆ ಅಷ್ಟೆ. ಯಾವುದೇ ಆಕಾಂಕ್ಷಿಗಳ ಸಭೆ ನಡೆಸಿಲ್ಲ. ಅದೆಲ್ಲ ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿ ಅಲ್ಲಿಂದ ತೆರಳಿದರು.

ಸಭೆಯಲ್ಲಿ ಅಭ್ಯರ್ಥಿಯ ಕುರಿತು ಯಾವುದೇ ರೀತಿಯ ಚರ್ಚೆಯಾಗಿಲ್ಲ. ಯಾರಿಗೆ ಟಿಕೆಟ್‌ ಸಿಕ್ಕರೂ ಎಲ್ಲರೂ ಒಟ್ಟಾಗಿ ಶ್ರಮಿಸಿ ಗೆಲ್ಲಿಸಬೇಕು ಎಂದು ಸೂಚನೆ ನೀಡಿದ್ದಾರೆ ಅಷ್ಟೇ ಎಂದು ಟಿಕೆಟ್‌ ಆಕಾಂಕ್ಷಿ ಅಜ್ಜಂಪೀರ ಖಾದ್ರಿ ಹೇಳಿದರು. ಪಕ್ಷದ ಟಿಕೆಟ್‌ ಯಾರಿಗೆ ನೀಡಬೇಕು ಎಂಬುದರ ಕುರಿತು ಚರ್ಚೆಯಾಗಿಲ್ಲ. ಶಿಗ್ಗಾಂವಿ-ಸವಣೂರು ಮತಕ್ಷೇತ್ರದ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿದ್ದಾರೆ. ನಾನೂ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ನನಗೆ ಟಿಕೆಟ್‌ ಸಿಗುವ ವಿಶ್ವಾಸವಿದೆ ಎಂದು ಟಿಕೆಟ್‌ ಆಕಾಂಕ್ಷಿ ಯಾಸೀರಖಾನ್‌ ಪಠಾಣ ತಿಳಿಸಿದರು.