ಸಾರಾಂಶ
ಭಾರತೀಯ ಹವಾಮಾನ ಇಲಾಖೆ ಇನ್ನೂ ಒಂದೆರಡು ದಿನ ಭಾರಿಮಳೆಯಾಗುವ ಸಂಭವದ ಬಗ್ಗೆ ಮುನ್ಸೂಚನೆ ನೀಡಿದೆ, ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಬುಧವಾರ ಮತ್ತು ಗುರುವಾರ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ಹಲವು ದಿನಗಳ ಬಳಿಕ ಕರಾವಳಿಯಲ್ಲಿ ಮತ್ತೆ ಮಳೆ ಚುರುಕಾಗಿದೆ. ಕಳೆದ ಎರಡು ದಿನಗಳಿಂದ ಉಡುಪಿ ಜಿಲ್ಲೆಯಲ್ಲಿ, ಮುಖ್ಯವಾಗಿ ಪಶ್ಚಮಘಟ್ಟದ ತಪ್ಪಲಿನ ಹೆಬ್ರಿ ಮತ್ತು ಕಾರ್ಕಳ ಭಾಗದಲ್ಲಿ ಭಾರಿ ಮಳೆಯಾಗಿದೆ. ಸಿಡಿಲಿಗೆ ಒಬ್ಬ ವಿದ್ಯಾರ್ಥಿನಿ ಗಾಯಗೊಂಡಿದ್ದಾಳೆ.ಈ ಅನಿರೀಕ್ಷಿತ ಮಳೆಯ ಜೊತೆಗೆ ಗುಡುಗು ಮಿಂಚಿನ ಅಬ್ಬರ ಜೋರಾಗಿದ್ದು, ಜನರಲ್ಲಿ ಭಯಕ್ಕೆ ಮತ್ತು ಭತ್ತದ ತೆನೆ ಒಣಗುವ ಈ ಸಂದರ್ಭದಲ್ಲಿ ಮಳೆಯಾಗುತ್ತಿರುವುದು ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಸೋಮವಾರ ಸಂಜೆಯಾಗುತ್ತಿದ್ದಂತೆ ಬಾರೀ ಮಳೆಯೊಂದಿಗೆ ಇಲ್ಲಿನ ಪೆರಂಪಳ್ಳಿಯ ಕಮಲಾ ಪೂಜಾರಿ ಎಂಬವರ ಮನೆಗೆ ಸಿಡಿಲು ಬಡಿದಿದೆ. ಇದರಿಂದ ಮನೆಯೊಳಗಿದ್ದ 9ನೇ ವರ್ಷದ ವಿದ್ಯಾರ್ಥಿನಿಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.ಭಾರತೀಯ ಹವಾಮಾನ ಇಲಾಖೆ ಇನ್ನೂ ಒಂದೆರಡು ದಿನ ಭಾರಿಮಳೆಯಾಗುವ ಸಂಭವದ ಬಗ್ಗೆ ಮುನ್ಸೂಚನೆ ನೀಡಿದೆ, ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಬುಧವಾರ ಮತ್ತು ಗುರುವಾರ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.
ಸೋಮವಾರ ಸಂಜೆ ಜಿಲ್ಲೆಯಲ್ಲಿ ಸರಾಸರಿ 39.40 ಮಿ.ಮೀ. ಮಳೆಯಾಗಿದೆ. ತಾಲೂಕುವಾರು: ಕಾರ್ಕಳ 26.80, ಕುಂದಾಪುರ 60.10, ಬೈಂದೂರು 40, ಉಡುಪಿ 38.50, ಬ್ರಹ್ಮಾವರ 32.30, ಹೆಬ್ರಿ 40.40 ಕಾಪು 8 ಮಿ.ಮೀ. ಮಳೆ ದಾಖಲಾಗಿದೆ...............
ತೈಲ ಸೋರಿ ಅವಾಂತರನಗರದ ಸಿಟಿ ಬಸ್ಸ್ ನಿಲ್ದಾಣದ ಬಳಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಯಾವುದೋ ವಾಹನದಿಂದ ತೈಲ ಸೋರಿಕೆಯಿಂದಾಗಿ ಜಾರುವಿಕೆ ಉಂಟಾಗಿ, ಹತ್ತಾರು ದ್ವಿಚಕ್ರ ವಾಹನಗಳು ಜಾರಿ ಬಿದ್ದ ಘಟನೆಗಳು ಸೋಮವಾರ ಸಂಜೆ ನಡೆದಿದೆ. ಸವಾರರು ಹೆಲ್ಮೇಟ್ ಧರಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾದರು.ಈ ಸಮಸ್ಯೆಯ ಬಗ್ಗೆ ಸಾರ್ವಜನಿಕರು ಸಮಯಪ್ರಜ್ಞೆಯಿಂದ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದರು. ಇದಕ್ಕೆ ಸ್ಪಂದಿಸಿದ ಅಗ್ನಿಶಾಮಕದಳ ವಾಹನವು ಸ್ಥಳಕ್ಕಾಮಿಸಿ ರಸ್ತೆಯಲ್ಲಿದ್ದ ತೈಲ ಶುಚಿಗೊಳಿಸಿತು.ಸಂಚಾರ ಪೋಲಿಸರು ವಾಹನ ದಟ್ಟಣೆಯನ್ನು ನಿಯಂತ್ರಿಸಿ ಸುಗಮ ಸಂಚಾರದ ವ್ಯವಸ್ಥೆಗೊಳಿಸಿದರು. ಅಗ್ನಿಶಾಮಕ ದಳದ ಸಿಬ್ಬಂದಿ ಪದ್ಮನಾಭ ಕಾಂಚನ್, ದಿವಾಕರ್, ಅರುಣ್ ಕಾರ್ಯಚರಣೆಯಲ್ಲಿದ್ದರು. ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ನೆರವಾದರು.
ತೈಲವು ಸಿಟಿ ಬಸ್ಸು ನಿಲ್ದಾಣದಿಂದ ಕಲ್ಸಂಕ ವೃತ್ತದವರೆಗೆ ರಸ್ತೆಯ ಉದ್ದಕ್ಕೂ ಸೋರಿರುವುದು ಕಂಡುಬಂದಿದ್ದು, ಅದರ ಮುಂದೆ ತೈಲ ಸೋರಿರುವ ಕುರುಹುಗಳಿಲ್ಲ. ಸಿಸಿ ಕ್ಯಾಮೆರಾ ದೃಶ್ಯಗಳ ಪರಿಶೀಲಿಸಿ ವಾಹನ ಪತ್ತೆಗೊಳಿಸಿ, ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರಿಂದ ಆಗ್ರಹಿಸಿದ್ದಾರೆ.