ಮೌಂಟ್‌ ರೋಸಾರಿಯೋ ಶಾಲೆಯಲ್ಲಿ ‘ಕ್ಯುರಿಯೋ’ ಸಂಪನ್ನ

| Published : Nov 06 2025, 02:45 AM IST

ಸಾರಾಂಶ

ಸಂತೆಕಟ್ಟೆಯ ಮೌಂಟ್‌ ರೋಸರಿ ಆಂಗ್ಲ ಶಾಲೆಯಲ್ಲಿ ಇತ್ತೀಚೆಗೆ ವಿಜ್ಞಾನ ವಸ್ತು ಪ್ರದರ್ಶನ ‘ಕ್ಯುರಿಯೋ’ ಇತ್ತೀಚೆಗೆ ಸಂಪನ್ನಗೊಂಡಿತು.

ಉಡುಪಿ: ಎಳವೆಯಲ್ಲಿ ಕುತೂಹಲ, ಪ್ರಶ್ನೆಗಳು ಮೂಡುವುದು ಸಹಜ, ಇದಕ್ಕೆ ಶಾಲೆಯಲ್ಲಿ ಸೂಕ್ತ ಕಾಯ೯ಕ್ರಮಗಳನ್ನು ಹಮ್ಮಿಕೊಂಡರೆ ಪ್ರತಿಭೆಗಳನ್ನು ಅನಾವರಣಗೊಳ್ಳಲು ಮುಕ್ತ ಅವಕಾಶಗಳು ಸಿಗುತ್ತವೆ ಮತ್ತು ಪ್ರಬುದ್ಧತೆಗಳಿಸಲು ಭದ್ರ ಬುನಾದಿಯಾಗುತ್ತದೆ ಎಂದು ಇಲ್ಲಿನ ಸಂತೆಕಟ್ಟೆಯ ಮೌಂಟ್‌ ರೋಸರಿ ಆಂಗ್ಲ ಶಾಲೆಯ ಹಳೆವಿದ್ಯಾರ್ಥಿನಿ, ಬೆಂಗಳೂರಿನ ಐಟಿ ಸಂಸ್ಥೆಯ ಮುಖ್ಯಸ್ಥೆ ಮೇಘನಾ ಆಚಾರ್ಯ ಹೇಳಿದ್ದಾರೆ.

ಶಾಲೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ‘ಕ್ಯುರಿಯೋ’ ಉದ್ಘಾಟಿಸಿ ಮಾತನಾಡಿ, ತನ್ನ ಶಾಲಾ ದಿನಗಳಲ್ಲಿ ಸಂಸ್ಥೆ ನೀಡಿದ ಅನೇಕ ಅವಕಾಶಗಳನ್ನು ಮೆಲುಕು ಹಾಕಿದರು.

ಇನ್ನೊರ್ವ ಹಳೆ ವಿದ್ಯಾರ್ಥಿ, ಪ್ರಸ್ತುತ ವಿಜಯಪುರ ಜಿಲ್ಲೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಯಾದ ಭರತ್‌ ಶ್ಯಾನುಭಾಗ್‌ ಮತ್ತು ಮಣಿಪಾಲದಲ್ಲಿ ಹೃದಯ ತಜ್ಞೆಯಾಗಿ ಸ್ನಾತಕೋತರ ಪದವಿ ವ್ಯಾಸಂಗ ಮಾಡುವ ಆನ್ವಿತಾ ಪೂಜಾರಿ ತೀರ್ಪುಗಾರರಾಗಿ ಸಹಕರಿಸಿದರು.ಅಧ್ಯಕ್ಷತೆ ವಹಿಸಿದ ಶಾಲಾ ಸಂಚಾಲಕ ವಂ.ಡಾ.ರೋಕ್‌ ಡಿಸೋಜ ಮಾತನಾಡಿ, ಪ್ರಪಂಚದಲ್ಲಿ ಕ್ಷಣ ಕ್ಷಣವೂ ಹಲವು ಅನ್ವೇ಼ಷಣೆ, ಸಂಶೋಧನೆಗಳು ನಡೆಯುತ್ತಿವೆ. ಮಾನವ ಕುಲಕ್ಕೆ ಹಾಗು ಪರಿಸರಕ್ಕೆ ಪೂರಕ ವೈಜ್ಞಾನಿಕ ಪ್ರಗತಿ ಆಗಬೇಕಾಗಿದೆ ಎಂದರು.

ಮುಖ್ಯಶಿಕ್ಷಕಿ ಸಿಸ್ಟರ್‌ ಆನ್ಸಿಲ್ಲಾ ಮಾತನಾಡಿ, ಶಾಲಾ ಹಂತದಲ್ಲಿ ಮಾಡಿದ ವಿಜ್ಞಾನ ಮಾದರಿಗಳು ಬಹುಬೇಗನೆ ಯಂತ್ರಗಳಾಗಿ ಬಹುಬೇಗನೆ ಬಹುಬೇಡಿಕೆಯ ವಸ್ತುಗಳಾಗಿವೆ ಎಂದು ಕೆಲವು ಪ್ರಚಲಿತ ನಿದರ್ಶನಗಳನ್ನು ನೀಡಿದರು.ವಿಜ್ಞಾನದ ದಿನದ ಮಹತ್ವವನ್ನು ವಿದ್ಯಾರ್ಥಿ ಪುಜಾನ್‌ ವಿವರಿಸಿದರು. ವಿದ್ಯಾರ್ಥಿ ಶ್ಲೋಕ್‌ ಸ್ವಾಗತಿಸಿದರು. ವಾಮಿಕ ನಿರೂಪಿಸಿ, ಧುವಿಕಾ ವಂದಿಸಿದರು.

ಪ್ರದರ್ಶನದಲ್ಲಿ ಒಟ್ಟು 637 ವಿವಿಧ ವಿಜ್ಞಾನ ಮಾದರಿಗಳಿದ್ದು ವೀಕ್ಷಕರಿಗೆ ಮನಮುಟ್ಟುವಂತೆ ವಿದ್ಯಾಥಿ೯ಗಳು ಸರಳವಾಗಿ ವಿವರಿಸಿದರು. ವಿಜ್ಞಾನ ಶಿಕ್ಷಕಿಯಾದ ಲವೀನಾ, ಸಾರಾ, ದಿವ್ಯಜ್ಯೋತಿ, ಮಿಲನಾ, ಮಮತಾ, ಸೌಜನ್ಯ ಸಹಕರಿಸಿದರು.