ರಾಮನಗರ: ಗ್ರೇಟರ್ ಬೆಂಗಳೂರು ಸಮಗ್ರ ಉಪ ನಗರ (ಬಿಡದಿ ಟೌನ್ ಶಿಪ್ ) ಯೋಜನೆ ವಿರೋಧಿಸಿ ಕಮಲ ನಾಯಕರ ಬೆಂಬಲದೊಂದಿಗೆ ದಳಪತಿಗಳು 3 ದಿನಗಳ ಪಾದಯಾತ್ರೆಗೆ ಭಾನುವಾರ ಚಾಲನೆ ನೀಡುವ ಮೂಲಕ ಕಾಂಗ್ರೆಸ್ ನೇತೃತ್ವದ ರಾಜ್ಯಸರ್ಕಾರದ ವಿರುದ್ಧ ರಣಕಹಳೆ ಮೊಳಗಿಸಿದರು.

ಬಿಡದಿ ಟೌನ್ ಶಿಪ್ ಯೋಜನೆ ಜಾರಿ ಕುರಿತು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಹಾಗೂ ವಿಪಕ್ಷಗಳ ಜಂಗೀಕುಸ್ತಿ ನಡುವೆಯೇ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಪಾದಯಾತ್ರೆಗೆ ರೈತರು ಮತ್ತು ಪಕ್ಷದ ಕಾರ್ಯಕರ್ತರಿಂದ ವ್ಯಾಪಕ ಬೆಂಬಲ ವ್ಯಕ್ತವಾಯಿತು.

ಬೆಳಗ್ಗೆ 9 ಗಂಟೆಗೆ ಆರಂಭವಾಗ ಬೇಕಿದ್ದ ಪಾದಯಾತ್ರೆ ನಾಲ್ಕೂವರೆ ತಾಸು ತಡವಾಗಿ ಪ್ರಾರಂಭವಾಯಿತು.

ಪಾದಯಾತ್ರೆಗೆ ಚಾಲನೆ ನೀಡಲು ವಿಪಕ್ಷ ನಾಯಕ ಆರ್.ಅಶೋಕ್ ಬೆಳಗ್ಗೆ 11.15ರ ವೇಳೆಗೆ ಆಗಮಿಸಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗಾಗಿ ಕಾದು ಕುಳಿತರು. ಮಧ್ಯಾಹ್ನ 12ಗಂಟೆಗೆ ಆಗಮಿಸಿದ ಕುಮಾರಸ್ವಾಮಿ ಅವರನ್ನು ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಅದ್ಧೂರಿಯಾಗಿ ಬರ ಮಾಡಿಕೊಂಡರು.

ಗಿಡಕ್ಕೆ ನೀರೆರೆದು ಪಾದಯಾತ್ರೆಗೆ ಚಾಲನೆ:


ರೈತರ ಚಳವಳಿಯ ಶಕ್ತಿ ಕೇಂದ್ರವಾಗಿರುವ ಬೈರಮಂಗಲ ವೃತ್ತದಲ್ಲಿಯೇ ಗಿಡಕ್ಕೆ ನೀರು ಹಾಕುವ ಮೂಲಕ ಕುಮಾರಸ್ವಾಮಿ ಮತ್ತು ಆರ್.ಅಶೋಕ್ ರವರು ಪಾದಯಾತ್ರೆಗೆ ಚಾಲನೆ ನೀಡಿದರು. ಆನಂತರ ಉಭಯ ಪಕ್ಷಗಳ ನಾಯಕರು ಭಾಷಣ ಮಾಡಿ ನೆರೆದಿದ್ದ ಜನರನ್ನು ಪಾದಯಾತ್ರೆಗೆ ಹುರಿದುಂಬಿಸಿದರು.

ಮಧ್ಯಾಹ್ನ 1.45ರ ವೇಳೆಗೆ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಪಾದಯಾತ್ರೆ ಆರಂಭವಾಗುತ್ತಿದ್ದಂತೆ ರೈತರು ಹಾಗೂ ಜೆಡಿಎಸ್ - ಬಿಜೆಪಿ ಪಕ್ಷಗಳ ಕಾರ್ಯಕರ್ತರು ನಮ್ಮ ಭೂಮಿ - ನಮ್ಮ ಹಕ್ಕು ಘೋಷಣೆಗಳನ್ನು ಮೊಳಗಿಸುತ್ತಾ ಹೆಜ್ಜೆ ಹಾಕಿದರು.

ಕೇಂದ್ರ ಸಚಿವ ಕುಮಾರಸ್ವಾಮಿ ದೆಹಲಿಯತ್ತ ಪ್ರಯಾಣ ಬೆಳೆಸಿದರೆ, ವಿಪಕ್ಷ ನಾಯಕ ಆರ್.ಅಶೋಕ್ ಬೆಂಗಳೂರಿಗೆ ವಾಪಸ್ಸಾದರು. ಬಿಜೆಪಿ ಪಕ್ಷದ ಯಾವುದೇ ಪ್ರಮುಖ ನಾಯಕರು ಪಾದಯಾತ್ರೆಯಲ್ಲಿ ಕಾಣಿಸಿಕೊಳ್ಳಲಿಲ್ಲ.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಅರಕಲುಗೂಡು ಕ್ಷೇತ್ರ ಶಾಸಕ ಎ.ಮಂಜು,

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಶಾಸಕಿ ಶಾರದಾ ಪೂರ್ವನಾಯ್ಕ, ಗುರುಮಿಟ್ಕಲ್ ಕ್ಷೇತ್ರ ಶಾಸಕ ಶರಣಗೌಡ ಕಂದಕೂರು, ದೇವದುರ್ಗ ಕ್ಷೇತ್ರ ಶಾಸಕಿ ಕರೇಮ್ಮ, ಹುಣುಸೂರು ಕ್ಷೇತ್ರ ಶಾಸಕ ಹರೀಶ್ ಗೌಡ, ಕೆ. ಆರ್. ಪೇಟೆ ಕ್ಷೇತ್ರ ಶಾಸಕ ಎಚ್. ಟಿ.ಮಂಜು, ಮಾಜಿ ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಡಾ. ಕೆ.ಅನ್ನದಾನಿ ಅ‍ವರೆಲ್ಲರು

ನಿಖಿಲ್ ಅವರೊಂದಿಗೆ ಕಾಲ್ನಡಿಗೆಯಲ್ಲಿ ಸಾಗಿದರು.

5 ರಿಂದ 6 ಸಾವಿರ ಜನರು ಭಾಗಿ :

ಇಷ್ಟೇ ಅಲ್ಲದೆ, ಜೆಡಿಎಸ್ ಪಕ್ಷದ ಮಹಿಳಾ ಘಟಕ ಸೇರಿದಂತೆ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಈ ಭಾಗದ ರೈತರು, ಕಾರ್ಮಿಕರು, ಮಹಿಳೆಯರು, ಯುವಕರು, ವಿದ್ಯಾರ್ಥಿಗಳು ಹಾಗೂ ಮಂಡ್ಯ, ಮೈಸೂರು , ತುಮಕೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದಲೂ ಆಗಮಿಸಿದ್ದ ಕಾರ್ಯಕರ್ತರು ಸೇರಿದಂತೆ ಸುಮಾರು 5 ರಿಂದ 6 ಸಾವಿರ ಜನರು ಹೆಜ್ಜೆ ಹಾಕಿ ಪಾದಯಾತ್ರೆಗೆ ಶಕ್ತಿ ತುಂಬಿದರು.

ಪಾದಯಾತ್ರೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಪಕ್ಷದ ಧ್ವಜ ಬೀಸುತ್ತಾ ಉತ್ಸಾಹದಿಂದ ಹೆಜ್ಜೆ ಹಾಕಿದರು. ನಿಖಿಲ್ ಕುಮಾರಸ್ವಾಮಿ ಮತ್ತು ಸುರೇಶ್ ಬಾಬು ಸೇರಿದಂತೆ ಅನೇಕ ನಾಯಕರು ಮುನ್ನಡೆದು ಕಾರ್ಯಕರ್ತರಲ್ಲಿ ಜೋಶ್ ತುಂಬುತ್ತಿದ್ದರು. ಮಾರ್ಗ ಮಧ್ಯೆ ಪಾದಯಾತ್ರಿಗಳಿಗೆ ಕುಡಿಯುವ ನೀರು, ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು.

ನನ್ನ ಮಣ್ಣಿದು, ನನ್ನ ಮಣ್ಣಿದು , ನನ್ನ ಮಣ್ಣಿದು ಕನ್ನಡ ಮಣ್ಣು, ನನ್ನುಸಿರಲ್ಲಿ ಕಂಪಿಸೋ ಮಣ್ಣು..., ರೈತ ರೈತ ರೈತ ಅನ್ನ ಕೊಡುವ ಧಾತ... ಹಾಗೂ ಜೆಡಿಎಸ್ ಪಕ್ಷ ಮತ್ತು ಮಾಜಿ ಪ್ರಧಾನಿ ದೇವೇಗೌಡ ಅವರನ್ನು ಕುರಿತಾದ ಕರುನಾಡ ಸಿರಿ... ಗೀತೆಗಳು ನೆರೆದಿದ್ದ ಪಾದಯಾತ್ರಿಗಳನ್ನು ಹುರಿದುಂಬಿಸುತ್ತಿತ್ತು.

ಬೈರಮಂಗಲ ವೃತ್ತದಿಂದ ಆರಂಭವಾದ ಪಾದಯಾತ್ರೆ ಬಿಡದಿ - ಹಾರೋಹಳ್ಳಿ ಮಾರ್ಗವಾಗಿ ಜೋಗರದೊಡ್ಡಿ

ಗ್ರಾಮಕ್ಕೆ ಮಧ್ಯಾಹ್ನ 3.30ಕ್ಕೆ ಪ್ರವೇಶಿಸಿತು. ನಿಖಿಲ್ ಕುಮಾರಸ್ವಾಮಿ , ಸುರೇಶ್ ಬಾಬು ಸೇರಿದಂತೆ ಎಲ್ಲ ನಾಯಕರು ಭೋಜನ ಸೇವಿಸಿ ಕೆಲಕಾಲ ವಿಶ್ರಾಂತಿ ಪಡೆದರು.

ಆನಂತರ ಮತ್ತೆ 5.30ರ ವೇಳೆಗೆ ಪ್ರಾರಂಭವಾದ ಪಾದಯಾತ್ರೆಯೂ ಬಿಡದಿ ಪಟ್ಟಣ ಪ್ರವೇಶಿಸುವ ಮೂಲಕ ಮೊದಲ ದಿನದ ಪಾದಯಾತ್ರೆಗೆ ತೆರೆ ಬಿದ್ದಿತು. ರಾತ್ರಿ ಬಿಡದಿಯ ಎಸ್.ಬಿ.ಕಲ್ಯಾಣ ಮಂಟಪದಲ್ಲಿ ಪಾದಯಾತ್ರಿಗಳು ಭೋಜನ ಸೇವಿಸಿ ವಾಸ್ತವ್ಯ ಹೂಡಿದರು.

ಬಾಕ್ಸ್‌.............

ಪಾದಯಾತ್ರೆಗೆ ಕಮಲ ನಾಯಕರ ಗೈರು!

ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಪ್ರಾರಂಭಗೊಂಡ ಮೂರು ದಿನಗಳ ಪಾದಯಾತ್ರೆಯ ಮೊದಲ ದಿನ ವಿಪಕ್ಷ ನಾಯಕ ಆರ್.ಅಶೋಕ್ ಅವರನ್ನು ಹೊರತು ಪಡಿಸಿದರೆ ಬಿಜೆಪಿ ಪಕ್ಷದ ಯಾವೊಬ್ಬ ನಾಯಕರು ಕಾಣಿಸಿಕೊಳ್ಳಲಿಲ್ಲ.

ವಿಪಕ್ಷ ನಾಯಕ ಆರ್.ಅಶೋಕ್, ಕೇಂದ್ರ ಸಚಿವ ಕುಮಾರಸ್ವಾಮಿ ಅವರೊಂದಿಗೆ ಗಿಡಕ್ಕೆ ನೀರು ಹಾಕುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು. ಆನಂತರ ತೆರೆದ ವಾಹನದಲ್ಲಿ ನೆರೆದಿದ್ದ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಬಳಿಕ ಅಶೋಕ್ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕದೆ ಬೆಂಗಳೂರಿನತ್ತ ಹೊರಟರು.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಸೇರಿದಂತೆ ಯಾವೊಬ್ಬ ನಾಯಕರು ಪಾದಯಾತ್ರೆಯತ್ತ ಸುಳಿಯಲಿಲ್ಲ.

ಬಾಕ್ಸ್‌..............

ಯುವ ನಾಯಕ ನಿಖಿಲ್ ಗೆ ಅದ್ಧೂರಿ ಸ್ವಾಗತ

ರಾಮನಗರ: ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ರಾಜ್ಯ ಸರ್ಕಾರದ ವಿರುದ್ಧ ಪಾದಯಾತ್ರೆ ಮೂಲಕ ರಣಕಹಳೆ ಮೊಳಗಿಸಿರುವ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರಿಗೆ ಭರ್ಜರಿ ಸ್ವಾಗತ ದೊರೆಯಿತು.

ಬೈರಮಂಗಲ ವೃತ್ತದಿಂದ ಪಾದಯಾತ್ರೆ ಹೊರಟ ನಿಖಿಲ್ ಕುಮಾರಸ್ವಾಮಿ ಅವರಿಗೆ ಮಾರ್ಗಮಧ್ಯೆ ರಸ್ತೆ ಬದಿಯಲ್ಲಿ ನಿಂತಿದ್ದ ವಯೋವೃದ್ಧರು, ಮಹಿಳೆಯರು ಆಶೀರ್ವಾದ ಮಾಡಿದರೆ, ಯುವಕರು ಪಟಾಕಿ ಸಿಡಿಸಿ ಜೈಕಾರ ಹಾಕಿ ಪಾದಯಾತ್ರೆಗೆ ಶುಭ ಕೋರಿದರು.

ಬಾಕ್ಸ್‌..............

ಪಾದಯಾತ್ರೆಗೆ ವಯೋವೃದ್ಧರು, ಪುಟಾಣಿಗಳು ಸಾಥ್

ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ಜೆಡಿಎಸ್ ಪಕ್ಷದ ನೇತೃತ್ವದಲ್ಲಿ ನಡೆದ ಪಾದಯಾತ್ರೆಯಲ್ಲಿ ಪಕ್ಷದ ಕಾರ್ಯಕರ್ತರು, ರೈತರು, ಮಹಿಳೆಯರು ಹಾಗೂ ವಿದ್ಯಾರ್ಥಿಗಳು ಮಾತ್ರವಲ್ಲದೆ ವಯೋವೃದ್ಧರು ಮತ್ತು ಸಣ್ಣ ಮಕ್ಕಳು ಸಹ ಹೆಜ್ಜೆ ಹಾಕಿದರು.

ಪಾದಯಾತ್ರೆಗೆ ಕುಟುಂಬದವರೊಂದಿಗೆ ಆಗಮಿಸಿದ ಪುಟಾಣಿಗಳು ರಿಯಲ್ ಎಸ್ಟೇಟ್ ಸರ್ಕಾರಕ್ಕೆ ಧಿಕ್ಕಾರ, 10ಲಕ್ಷಕ್ಕೂ ಅಧಿಕ ಮರಗಳನ್ನು ಉಳಿಸಿಲು ನಮ್ಮ ಹೋರಾಟ, ಅನ್ನದಾತರ ಭೂಮಿ ಕಸಿಯಲು ಹೊರಟಿರುವ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ, ಸರ್ಕಾರಿ ಪ್ರಾಯೋಜಿತ 33 ಸಾವಿರ ಕೋಟಿ ರಿಯಲ್ ಎಸ್ಟೇಟ್ ಗೆ ಧಿಕ್ಕಾರ, ಭೂ ಸ್ವಾಧೀನಕ್ಕೆ ನಮ್ಮ ಧಿಕ್ಕಾರ ಎಂಬ ಟೌನ್ ಶಿಪ್ ವಿರುದ್ಧದ ಭಿತ್ತಿ ಪತ್ರಗಳನ್ನು ಹಿಡಿದು ಗಮನ ಸೆಳೆದರು.

ಬಾಕ್ಸ್‌..........

ಟ್ರಾಫಿಕ್ ಜಾಮ್:

ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ಬಿಡದಿ - ಹಾರೋಹಳ್ಳಿ ರಸ್ತೆ ಮಾರ್ಗದಲ್ಲಿ ಪಾದಯಾತ್ರೆ ಸಾಗಿಬಂದ ಕಾರಣ ವಾಹನಗಳ ದಟ್ಟಣೆ ಹೆಚ್ಚಾಗಿ ಟ್ರಾಫಿಕ್ ಜಾಮ್ ಉಂಟಾಯಿತು.

ಬಿಡದಿ ಮತ್ತು ಹಾರೋಹಳ್ಳಿ ಕೈಗಾರಿಕಾ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಪಾದಯಾತ್ರೆ ನಡೆದಿದ್ದರಿಂದ ಕಾರ್ಖಾನೆಗಳ ವಾಹನಗಳು, ಸಾರಿಗೆ ಬಸ್ ಗಳು ಹಾಗೂ ಸಾರ್ವಜನಿಕರ ವಾಹನಗಳ ಸಂಚಾರಕ್ಕೆ ತೊಡಕು ಉಂಟಾಯಿತು.

ಬದಲಿ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಪೊಲೀಸರು ಸೂಚನೆ ನೀಡಿದ್ದರು. ಆದರೂ ಪರ್ಯಾಯ ರಸ್ತೆಗಳ ಮೂಲಕ ಬಿಡದಿ - ಹಾರೋಹಳ್ಳಿ ರಸ್ತೆಗೆ ಬಂದಿದ್ದರಿಂದ ವಾಹನಗಳ ದಟ್ಟಣೆ ಹೆಚ್ಚಾಗಿತ್ತು. ಪೊಲೀಸರು ಬದಲಿ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲು ಹರಸಾಹಸ ಪಟ್ಟರು.

ಇನ್ನೊಂದಡೆ ಜೆಡಿಎಸ್ ವತಿಯಿಂದ ನಿಯೋಜನೆಗೊಂಡಿದ್ದ ಸ್ವಯಂ ಸೇವಕರು ಯಥೇಚ್ಚ ಸಂಖ್ಯೆಯಲ್ಲಿದ್ದು ಎಲ್ಲವನ್ನು ನಿಭಾಯಿಸುತ್ತಿದ್ದರಾದರು ಅವರ ಮಾತಿಗೆ ಮನ್ನಣೆ ಕೊಟ್ಟಿದ್ದು ಕಡಿಮೆ.

ಬಾಕ್ಸ್‌...................

ರಾರಾಜಿಸುತ್ತಿದ್ದ ದಳಪತಿಗಳ ಕಟೌಟ್ ಮತ್ತು ಧ್ವಜಗಳು

ರಾಮನಗರ:

ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ನಡೆಯುತ್ತಿರುವ ಪಾದಯಾತ್ರೆ ಸಾಗಿ ಬರುವ ಮಾರ್ಗದಲ್ಲಿ ಜೆಡಿಎಸ್ ನಾಯಕರ ಕಟೌಟ್ ಗಳು ರಾರಾಜಿಸುತ್ತಿದ್ದವು.

ಬೈರಮಂಗಲ ವೃತ್ತದಿಂದ ಬಿಡದಿ ಪಟ್ಟಣದವರೆಗೆ ರಸ್ತೆ ಬದಿಗಳಲ್ಲಿ ಜೆಡಿಎಸ್ ನ ಹಿರಿಯ ಮತ್ತು ಕಿರಿಯ ನಾಯಕರು, ಹಾಲಿ, ಮಾಜಿ ಶಾಸಕರು, ಸಂಸದರ ಭಾವಚಿತ್ರವುಳ್ಳ ಸ್ವಾಗತ ಕೋರುವ ಕಟೌಟ್ ಗಳನ್ನು ಹಾಕಲಾಗಿದೆ.

ಬೈರಮಂಗಲ ವೃತ್ತದಿಂದ ಬಿಡದಿ ಪಟ್ಟಣದವರೆಗೆ ಸುಮಾರು 8 ಕಿಲೋ ಮೀಟರ್ ವರೆಗೆ ಹೆಜ್ಜೆ ಹೆಜ್ಜೆಗೂ ನಾಯಕರ ಕಟೌಟ್ ಗಳು ಗಮನ ಸೆಳೆಯುತ್ತಿದ್ದವು. ಇನ್ನು ಪಾದಯಾತ್ರಿಗಳು ಜೆಡಿಎಸ್ ಧ್ವಜ ಹಿಡಿದುಕೊಂಡೇ ಹೆಜ್ಜೆ ಹಾಕಿದರು.

ಬಾಕ್ಸ್ ..............

ಮಧ್ಯಾಹ್ನ ಮೆನುವೇನು?

ಮಧ್ಯಾಹ್ನ ಊಟಕ್ಕೆ ಬೇಳೆ ಸಾರು, ಅನ್ನ, ಮೊಸರನ್ನ, ಪಕೋಡ, ಮೈಸೂರು ಪಾಕ್ ಅನ್ನು ಸುಮಾರು 5 ರಿಂದ 6 ಸಾವಿರ ಮಂದಿಗೆ ಸಿದ್ದಪಡಿಸಲಾಗಿತ್ತು. ಜೋಗರದೊಡ್ಡಿಯಲ್ಲಿ ಪಾದಯಾತ್ರಿಗಳು ಭೋಜನ ಸೇವಿಸಿ ವಿಶ್ರಾಂತಿ ಪಡೆದರು.