ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಶ್ರೀ ಹಾಸನಾಂಬೆ ದೇವಿ ದರ್ಶನ ಮತ್ತು ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಇಂದಿನಿಂದ (ಅ.9) ಪ್ರಾರಂಭವಾಗಲಿದೆ. ಮಧ್ಯಾಹ್ನ 12 ಗಂಟೆಗೆ ಶ್ರೀ ಹಾಸನಾಂಬ ದೇವಿಯ ದೇವಾಲಯದ ಬಾಗಿಲನ್ನು ತೆರೆಯಲಾಗುತ್ತದೆ. ಅ.23ರಂದು ದೇವಾಲಯದ ಬಾಗಿಲನ್ನು ಮುಚ್ಚಲಾಗುತ್ತದೆ. ಭಕ್ತರಿಗೆ ಅ.10ರಿಂದ ಅ.23ರವರೆಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ, ತುಮಕೂರು ಶ್ರೀ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ.ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ, ಮಾಜಿ ಪ್ರಧಾನಮಂತ್ರಿ ಹಾಗೂ ರಾಜ್ಯಸಭಾ ಸದಸ್ಯರಾದ ಹೆಚ್.ಡಿ.ದೇವೇಗೌಡ, ಕರ್ನಾಟಕ ಸರ್ಕಾರದ ಉಪ ಮುಖ್ಯ ಮಂತ್ರಿಗಳಾದ ಡಿ.ಕೆ ಶಿವಕುಮಾರ್ ಅವರು ಗೌರವ ಉಪಸ್ಥಿತಿವಹಿಸಲಿದ್ದಾರೆ. ಕಂದಾಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಬೈರೇಗೌಡ, ಮುಜರಾಯಿ ಮತ್ತು ಸಾರಿಗೆ ಸಚಿವರಾದ ರಾಮಲಿಂಗರೆಡ್ಡಿ, ಕರ್ನಾಟಕ ರಾಜ್ಯ ಗೃಹ ಮಂಡಳಿಯ ಅಧ್ಯಕ್ಷರು ಹಾಗೂ ಶಾಸಕರಾದ ಕೆ.ಎಂ.ಶಿವಲಿಂಗೇಗೌಡ ಅವರು ಘನ ಉಪಸ್ಥಿತಿ ವಹಿಸಲಿದ್ದಾರೆ. ಶಾಸಕರಾದ ಸ್ವರೂಪ್ ಪ್ರಕಾಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಸಂಸದರಾದ ಶ್ರೇಯಸ್ ಎಂ.ಪಟೇಲ್, ಶಾಸಕರಾದ ಎಚ್.ಡಿ.ರೇವಣ್ಣ, ಡಾ.ಸಿ.ಎನ್.ಬಾಲಕೃಷ್ಣ, ಎ.ಮಂಜು, ಎಚ್.ಕೆ. ಸುರೇಶ್, ಸಿಮೆಂಟ್ ಮಂಜು, ವಿಧಾನ ಪರಿಷತ್ ಶಾಸಕರಾದ ಮಧು ಜಿ.ಮಾದೇಗೌಡ, ಕೆ.ವಿವೇಕಾನಂದ, ಡಾ ಸೂರಜ್ ರೇವಣ್ಣ ಹಾಗೂ ಮಹಾನಗರ ಪಾಲಿಕೆಯ ಮಹಾಪೌರರಾದ ಗಿರೀಶ್ ಚನ್ನವಿರಪ್ಪ ಅವರು ಭಾಗವಹಿಸಲಿದ್ದಾರೆ. ಕ್ರೀಡಾ ಮತ್ತು ಯುವಜನ ಸಬಲೀಕರಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮದಾಯ ದತ್ತಿಗಳ ಇಲಾಖೆಯ ಆಯುಕ್ತರಾದ ಡಾ.ವೆಂಕಟೇಶ್ ಎಂ.ವಿ, ಜಿಲ್ಲಾಧಿಕಾರಿ ಕೆ.ಎಸ್ ಲತಾ ಕುಮಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪೂರ್ಣಿಮಾ ಬಿ.ಆರ್, ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್ ಕುಮಾರ್, ಉಪ ವಿಭಾಗಾಧಿಕಾರಿ ಹಾಗೂ ಶ್ರೀ ಹಾಸನಾಂಬ ದೇವಾಲಯದ ಆಡಳಿತಾಧಿಕಾರಿ ಮಾರುತಿ ಜೆ.ಬಿ, ತಹಸೀಲ್ದಾರ್ ಗೀತಾ ಸಿ.ಜಿ ಭಾಗವಹಿಸಲಿದ್ದಾರೆ.ಅ.೧೦ರಿಂದ ಅ.೧೭ ರವರೆಗೆ ಬೆ.೧೦ ರಿಂದ ಮ.೦೧ ಗಂಟೆಯವರೆಗೆ ಮಾತ್ರ ಶಿಷ್ಟಾಚಾರ ದರ್ಶನಕ್ಕೆ ಅವಕಾಶವಿರುತ್ತದೆ. ಅ.18ರಿಂದ ಅ.22ರವರೆಗೆ ಯಾವುದೇ ರೀತಿಯ ಶಿಷ್ಟಾಚಾರ ದರ್ಶನಕ್ಕೆ ಅವಕಾಶ ಇರುವುದಿಲ್ಲ.