ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿನೂತನವಾಗಿ ಆಯ್ಕೆಯಾಗಿರುವ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ಕಾರದ ಸೌಲಭ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಶ್ರಮಿಸಬೇಕು. ಸಿಕ್ಕಿರುವ ಅವಕಾಶ ಸದುಪಯೋಗ ಪಡೆದು ರಾಜಕೀಯವಾಗಿ ಎತ್ತರಕ್ಕೆ ಬೆಳೆಯಲು ಉತ್ತಮ ಆಡಳಿತ ನೀಡುವ ಮೂಲಕ ಜನ ಸೇವೆ ಮಾಡಬೇಕೆಂದು ಮಾಜಿ ಶಾಸಕ ಮಹೇಶ್ ಕುಮಟಳ್ಳಿ ಹೇಳಿದರು. ಪಟ್ಟಣದಲ್ಲಿ ತೆಲಸಂಗ ಗ್ರಾಮದ ಗ್ರಾಪಂ ಎರಡನೇ ಅವಧಿಗೆ ಆಯ್ಕೆಯಾದ ನೂತನ ಅಧ್ಯಕ್ಷ ಭಾರತಾ ಕಾಶಿಲಿಂಗ ಲೋಕಂಡೆ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಅನಿತಾ ಪರಶುರಾಮ ಕಂದಾರೆ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ನನ್ನ ಸ್ವಗ್ರಾಮ ತೆಲಸಂಗ ಗ್ರಾ.ಪಂ ನಲ್ಲಿ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅವಿರೋಧ ಆಯ್ಕೆ ನಡೆದಿರುವುದು ಸಂತಸ ತಂದಿದೆ. 27 ಜನ ಸದಸ್ಯರ ಗ್ರಾ.ಪಂ ಆಡಳಿತ ಸದಸ್ಯರು ಗ್ರಾಮದ ಹಿರಿಯರ ಮಾರ್ಗದರ್ಶನದಂತೆ ಅವಿರೋಧ ಆಯ್ಕೆ ಪ್ರಕ್ರಿಯೆ ನಡೆಸಿರುವುದು ಒಳ್ಳೆಯ ಬೆಳವಣಿಗೆ. ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷಾತೀತ ಮತ್ತು ಜಾತ್ಯಾತೀತವಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ಒಳ್ಳೆಯ ಆಡಳಿತ ನೀಡಬೇಕೆಂದು ಸಲಹೆ ನೀಡಿದರು. ಈ ವೇಳೆ ಮುಖಂಡ ಮಲ್ಲಪ್ಪ ಹಂಚಿನಾಳ, ಡಾ. ಪ್ರಕಾಶ್ ಕುಮಟಳ್ಳಿ ಹಾಗೂ ಗ್ರಾ.ಪಂ ಸರ್ವ ಸದಸ್ಯರು ಇದ್ದರು.