ಸಾರಾಂಶ
ಲೋಕಸಭಾ ಚುನಾವಣೆಯಲ್ಲಿ ಮತದಾರರಿಗೆ ಕೋಟಿ ಕೋಟಿ ಹಣ ಹಂಚಿಕೆ ಕುರಿತು ಮಾತನಾಡಿರುವ ಶಾಸಕ ಕೆ.ಎಂ.ಶಿವಲಿಂಗೇಗೌಡ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜೆಡಿಎಸ್ ಮುಖಂಡರು ಶುಕ್ರವಾರ ಸಂಜೆ ನಗರಠಾಣೆ ಎದುರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಪರ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಏಳೆಂಟು ಕೋಟಿ ರು.ಹಂಚುವಂತೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್, ರಾಜ್ಯಸಭಾ ಸದಸ್ಯ ಚಂದ್ರಶೇಖರ್ ಸೂಚನೆ ನೀಡಿದ್ದಾರೆ ಎಂದು ಆರೋಪಿಸಿದರು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ಲೋಕಸಭಾ ಚುನಾವಣೆಯಲ್ಲಿ ಮತದಾರರಿಗೆ ಕೋಟಿ ಕೋಟಿ ಹಣ ಹಂಚಿಕೆ ಕುರಿತು ಮಾತನಾಡಿರುವ ಶಾಸಕ ಕೆ.ಎಂ.ಶಿವಲಿಂಗೇಗೌಡ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜೆಡಿಎಸ್ ಮುಖಂಡರು ಶುಕ್ರವಾರ ಸಂಜೆ ನಗರಠಾಣೆ ಎದುರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು.ಜೆಡಿಎಸ್ ಮುಖಂಡ ಎನ್.ಆರ್. ಸಂತೋಷ್ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಪರ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಏಳೆಂಟು ಕೋಟಿ ರು.ಹಂಚುವಂತೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್, ರಾಜ್ಯಸಭಾ ಸದಸ್ಯ ಚಂದ್ರಶೇಖರ್ ಸೂಚನೆ ನೀಡಿದ್ದಾರೆ. ಅವರು ಹೇಳಿದಂತೆ ಮಾಡಿ ಎಂದು ಖುದ್ದು ಶಾಸಕರೇ ಕಾರ್ಯಕರ್ತರು ಹಾಗೂ ಮುಖಂಡರಿಗೆ ಹೇಳಿರುವ ಆಡಿಯೋ ವೈರಲ್ ಆಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಹಣ ಕೊಟ್ಟವರು ಯಾರು? ಎಂದು ಪ್ರಶ್ನಿಸಿದರು.
ಪನ್ನಸಮುದ್ರ, ಸೂಳೆಕೆರೆ ಹಾಗೂ ಲಕ್ಷ್ಮೀ ದೇವರಹಳ್ಳಿ ರೈತರನ್ನು ಒಕ್ಕಲೆಬ್ಬಿಸಿ ಉಪ ನಗರ ಮಾಡಲು ಭೂ ಮಾಫಿಯಾ ಜತೆ ಶಾಮೀಲಾಗಿದ್ದಾರೆ. ಇಡೀ ಪ್ರಕರಣದ ತನಿಖೆಯನ್ನು ಅಧಿಕಾರಿಗಳು ನಡೆಸಬೇಕು. ಚುನಾವಣಾ ಆಯೋಗ, ಇಡಿ ಸೇರಿದಂತೆ ಯಾವುದೇ ಬಗೆಯ ಹೋರಾಟಕ್ಕೆ ನಾವು ಹಿಂಜರಿಯುವುದಿಲ್ಲ. ಲೋಕಸಭಾ ಚುನಾವಣೆ ಹಣದ ವಹಿವಾಟು ಭೇದಿಸಬೇಕು. ರಿಯಲ್ ಎಸ್ಟೇಟ್ ದಂಧೆಯಿಂದ ಅಮಾಯಕ ರೈತರನ್ನು ರಕ್ಷಿಸಬೇಕು. ನ್ಯಾಯ ದೊರೆಯುವವರೆಗೆ ಠಾಣೆ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದರು.ಮತ್ತೋರ್ವ ಮುಖಂಡ ಹೊಸೂರು ಗಂಗಾಧರ್ ಮಾತನಾಡಿ, ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡರ ಕುಟುಂಬದ ಕುರಿತು ಲಘುವಾಗಿ ಮಾತನಾಡಿದ ವ್ಯಕ್ತಿ ಹೇಗೆ ಹಣ ಹಂಚಿದ್ದಾರೆ ಎನ್ನುವುದು ಬಟಾ ಬಯಲಾಗಿದೆ. ಇಡೀ ಪ್ರಕಣವನ್ನು ಗಂಭೀರವಾಗಿ ಪರಿಗಣಿಸಬೇಕು. ಹಣ ಮದದ ಹೇಳಿಕೆಗೆ ತಕ್ಕ ಶಾಸ್ತಿ ನೀಡಬೇಕು. ಸಂಸದ ಶ್ರೇಯಸ್ ಪಟೇಲ್ ಹಾಗೂ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರನ್ನು ಸದಸ್ಯ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಆಗ್ರಹಿಸಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್, ನಗರಸಭೆ ಸದಸ್ಯ ಸಿ.ಗಿರೀಶ್, ಮುಖಂಡರಾದ ಉಮೇಶ್, ಕುಡುಕುಂದಿ ಕುಮಾರ್, ತಾಪಂ ಮಾಜಿ ಸದಸ್ಯ ಭೋಜಾನಾಯ್ಕ್, ಚಿಕ್ಕಮ್ಮನಹಳ್ಳಿ ನಾಗರಾಜ್, ಹರ್ಷವರ್ಧನ್ ರಾಜ್, ರವಿಕಿರಣ, ಶಿವನ್ ರಾಜ್, ರಘು, ರಂಗನಾಥ್, ಪುಟ್ಟಸ್ವಾಮಿ ಸೇರಿದಂತೆ ನೂರಾರು ಮುಖಂಡರು ಹಾಜರಿದ್ದರು. ಡಿವೈಎಸ್ಪಿ ಲೋಕೇಶ್ ಅವರಿಗೆ ಮನವಿ ಸಲ್ಲಿಸಿದರು. ಕ್ರಮದ ಭರವಸೆ ನೀಡಿದ ಬಳಿಕ ಹೋರಾಟ ಕೈ ಬಿಡಲಾಯಿತು.1