ಸಾರಾಂಶ
ಸಿಂದಗಿಯು ಭೌಗೋಳಿಕವಾಗಿ ಕೇಂದ್ರಸ್ಥಾನದಲ್ಲಿದ್ದು, ಸುತ್ತ ಮುತ್ತಲಿನ ಕಲಬುರುಗಿ, ಯಾದಗೀರಿ, ರಾಯಚೂರ, ವಿಜಯಪೂರ ಜಿಲ್ಲೆಗಳ ಹೆಚ್ಚಿನ ಸಂಪರ್ಕ ಹೊಂದಿದೆ ಹೀಗಾಗಿ ಹೊಸ ಜಿಲ್ಲೆ ಮಾಡುವುದಾದರೆ ಸಿಂದಗಿ ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕು.
ಕನ್ನಡಪ್ರಭ ವಾರ್ತೆ ಸಿಂದಗಿ
ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕು ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಜನಸಂಖ್ಯೆ ಹೊಂದಿದ್ದು, ವಿಸ್ತೀರ್ಣದಲ್ಲಿಯೂ ದೊಡ್ಡದಾಗಿದೆ. ಸಿಂದಗಿಯು ಭೌಗೋಳಿಕವಾಗಿ ಕೇಂದ್ರಸ್ಥಾನದಲ್ಲಿದ್ದು, ಸುತ್ತ ಮುತ್ತಲಿನ ಕಲಬುರುಗಿ, ಯಾದಗೀರಿ, ರಾಯಚೂರ, ವಿಜಯಪೂರ ಜಿಲ್ಲೆಗಳ ಹೆಚ್ಚಿನ ಸಂಪರ್ಕ ಹೊಂದಿದೆ ಹೀಗಾಗಿ ಹೊಸ ಜಿಲ್ಲೆ ಮಾಡುವುದಾದರೆ ಸಿಂದಗಿ ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕೆಂದು ಕರ್ನಾಟಕ ಆದಿಜಾಂಬವ ಜನಸಂಘದ ಉತ್ತರ ಕರ್ನಾಟಕ ವಲಯ ಅಧ್ಯಕ್ಷ ಸಾಯಬಣ್ಣ ದೇವರಮನಿ ಆಗ್ರಹಿಸಿದ್ದಾರೆ.ಕಂದಾಯ ಇಲಾಖೆಯಲ್ಲಿ ಅತೀ ಹೆಚ್ಚಿನ ಆದಾಯ ಸಿಂದಗಿ ತಾಲೂಕಿನಿಂದ ಸಂಗ್ರಹವಾಗುತ್ತಿದ್ದು, ವ್ಯವಸ್ಥಿತ ನಗರ ವ್ಯವಸ್ಥೆ ಹೊಂದಿದೆ. ಹಲವಾರು ಶಿಕ್ಷಣ ಸಂಸ್ಥೆಗಳಿದ್ದು, ಶೈಕ್ಷಣಿಕ ಕಾಶಿ ಎನಿಸಿಕೊಂಡಿದೆ. ದಿನದ 24 ಗಂಟೆ ಉತ್ತಮ ಸಾರಿಗೆ ಸಂಪರ್ಕ ವ್ಯವಸ್ಥೆ ಇದ್ದು, ಮುಂಬಯಿ, ಚೆನ್ನೈ ವಾಣಿಜ್ಯ ಕಾರಿಡಾರ್ ಚತುಷ್ಕೋನ ಹೆದ್ದಾರಿ ಸಿಂದಗಿ ನಗರಕ್ಕೆ ಸಮೀಪದಲ್ಲಿದೆ. ರಾಷ್ಟ್ರೀಯ ಹೆದ್ದಾರಿ-50 ಸಿಂದಗಿ ನಗರದೊಂದಿಗೆ ಸಂಪರ್ಕ ಬೆಸೆದಿದ್ದು, ಸಾರಿಗೆ ಸಂಪರ್ಕಕ್ಕೆ ಉತ್ತಮವಾಗಿದೆ. ಮುಂಬರುವ ದಿನಗಳಲ್ಲಿ ಶೇಡಬಾಳ-ಶಾಹಾಬಾದ ರೈಲ್ವೆ ಮಾರ್ಗ ನಿರ್ಮಾಣಗೊಳ್ಳುವ ಸಂಭವವಿದೆ. ಪೂರ್ವ ದಿಕ್ಕಿನಲ್ಲಿ ಕಲಬುರಗಿ ಹಾಗೂ ಪಶ್ಚಿಮದಲ್ಲಿ ವಿಜಯಪುರ ಜಿಲ್ಲೆಯಲ್ಲಿ ವಿಮಾನ ನಿಲ್ದಾಣಗಳಿದ್ದು, ರಾಜ್ಯದ ರಾಜಧಾನಿ ಸಂಪರ್ಕಿಸಲು ಸಮಯದ ಉಳಿತಾಯವಾಗುವುದು. ಕೈಗಾರಿಕೆ ವಲಯವಾಗಿ ಪರಿವರ್ತಿಸಲು ಕೇಂದ್ರ ಸ್ಥಾನದಲ್ಲಿದೆ. ಕಲ್ಯಾಣ ಕರ್ನಾಟಕ ಹಾಗೂ ಮುಂಬಯಿ ಕರ್ನಾಟಕ ಹೆಬ್ಬಾಗಿಲು ಆಗಿ ಭೌಗೋಳಿಕವಾಗಿ ಎರಡು ವಲಯಗಳನ್ನು ಸಂಪರ್ಕಿಸುವ ಸಾಂಸ್ಕೃತಿ ಪ್ರತಿಬಿಂಬವಾಗಿದೆ. ಜೊತೆಗೆ ಸುತ್ತ-ಮುತ್ತಲಿನ ಎಲ್ಲಾ ತಾಲೂಕುಗಳಿಗೆ ಕೇವಲ 20 ರಿಂದ 40 ಕಿ.ಮೀ. ಅಂತರ ಹೊಂದಿದ್ದು, ಇದರಿಂದ ಇಂಡಿ ಜಿಲ್ಲೆಯನ್ನು ಸೃಷ್ಟಿಸದೇ, ಸಿಂದಗಿ ಜಿಲ್ಲಾ ಕೇಂದ್ರವೆಂದು ಪರಿಗಣಿಸಬೇಕು. ಸಿಂದಗಿ, ಆಲಮೇಲ, ದೇವರಹಿಪ್ಪರಗಿ ತಾಳಿಕೋಟಿ, ತಾಲೂಕುಗಳನ್ನು ಸಾಧ್ಯವಾದರೆ ಇಂಡಿ ಮತ್ತು ಚಡಚಣ ತಾಲೂಕುಗಳನ್ನು ಸಿಂದಗಿ ಜಿಲ್ಲಾ ಕೇಂದ್ರಕ್ಕೆ ಸೇರಿಸಿ ಹೊಸ ಜಿಲ್ಲೆ ಸೃಷ್ಟಿ ಮಾಡಬೇಕು ಎಂದವರು ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ