ಬರಿದಾಯ್ತು ಮಲೆನಾಡಿನ ಜೀವನದಿ ತುಂಗೆ

| Published : Feb 26 2024, 01:30 AM IST

ಸಾರಾಂಶ

ಸದಾ ತುಂಬಿ ಹರಿಯುತ್ತಾ ಮಲೆನಾಡ ಜೀವಕಳೆಯಾದ ತುಂಗೆ ಪಶ್ಚಿಮಘಟ್ಟಗಳ ತಪ್ಪಲಲ್ಲಿರುವ ಸಹ್ಯಾದ್ರಿ ಪರ್ವತ ಶ್ರೇಣಿಗಳ ಅಂಚಿನಲ್ಲಿರುವ ದಟ್ಟ ಕಾನನಗಳ ನಡುವೆ ಮೈದುಂಬಿ ಹರಿಯುತ್ತಾ ನೀರಿನ ಆಸರೆಯಾಗಿದ್ದ ನದಿ ಈ ಬಾರಿ ಮಳೆ ಕೊರತೆ ಮತ್ತು ಅಂತರ್ಜಲ ಕುಸಿತದಿಂದ ಹಿಂದೆಂದೂ ಕಾಣದ ರೀತಿಯಲ್ಲಿ ಬರಿದಾಗಿದೆ.

ಕಾಲುವೆಯಂತಾದ ನದಿಯ ಹರಿವು । ಕುಡಿಯುವ ನೀರಿಗೂ ಕಂಟಕವಾಗುತ್ತಿರುವ ಪರಿಸ್ಥಿತಿ

ನೆಮ್ಮಾರ್‌ ಅಬೂಬಕರ್

ಕನ್ನಡಪ್ರಭ ವಾರ್ತೆ, ಶೃಂಗೇರಿ ಸದಾ ತುಂಬಿ ಹರಿಯುತ್ತಾ ಮಲೆನಾಡ ಜೀವಕಳೆಯಾದ ತುಂಗೆ ಪಶ್ಚಿಮಘಟ್ಟಗಳ ತಪ್ಪಲಲ್ಲಿರುವ ಸಹ್ಯಾದ್ರಿ ಪರ್ವತ ಶ್ರೇಣಿಗಳ ಅಂಚಿನಲ್ಲಿರುವ ದಟ್ಟ ಕಾನನಗಳ ನಡುವೆ ಮೈದುಂಬಿ ಹರಿಯುತ್ತಾ ನೀರಿನ ಆಸರೆಯಾಗಿದ್ದ ನದಿ ಈ ಬಾರಿ ಮಳೆ ಕೊರತೆ ಮತ್ತು ಅಂತರ್ಜಲ ಕುಸಿತದಿಂದ ಹಿಂದೆಂದೂ ಕಾಣದ ರೀತಿಯಲ್ಲಿ ಬರಿದಾಗಿದೆ.

ಗಂಗಾ ಸ್ನಾನ ತುಂಗಾ ಪಾನಂ ಎಂಬ ನಾಣ್ಣುಡಿಯಂತೆ ಕೆರೆಕಟ್ಟೆ ಶೃಂಗೇರಿಯಿಂದ ಶಿವಮೊಗ್ಗ ಹೊಸಪೇಟೆವರೆಗೂ ಹರಿದು ಹೋಗುತ್ತಿದ್ದ ತುಂಗೆ ಮಳೆ ಯಿಲ್ಲದೇ ಮೂಲ ಸ್ಥಳದಲ್ಲೇ ಬತ್ತಿ ಹೋಗುವ ಆತಂಕ ಎದುರಾಗಿದೆ.

ಪ್ರತೀ ವರ್ಷ ಬೀಳುತ್ತಿದ್ದ ಅತ್ಯಧಿಕ ಮಳೆಯಿಂದ ತುಂಬಿರುತ್ತಿದ್ದ ನದಿ, ಏಪ್ರಿಲ್‌ ಮೇ ತಿಂಗಳಲ್ಲಿಯೂ ಸಾಧಾರಣವಾಗಿ ನೀರು ಇರುತ್ತಿತ್ತು. ಜೀವನದಿಯಾದ ತುಂಗೆ ಕೇವಲ ಮಲೆನಾಡಿಗಲ್ಲದೇ ಕರ್ನಾಟಕದ ಅರ್ಧ ಭಾಗಕ್ಕೆ ನೀರುಣಿಸುತ್ತಾ ಜೀವ ಸೆಲೆಯಾಗಿತ್ತು.

ನದಿಯಲ್ಲಿ ಜೂನ್‌ ನಿಂದ ಡಿಸೆಂಬರ್‌ ವರೆಗೂ ಹೆಚ್ಚಿರುತ್ತಿದ್ದ ನೀರಿನ ಪ್ರಮಾಣ ಈ ವರ್ಷ ನಿರೀಕ್ಷೆಯಂತೆ ಮುಂಗಾರು ಮಳೆ ಬಾರದೆ, ಅಂತರ್ಜಲ ಕೊರತೆಯಿಂದ ಜಲಮೂಲವೇ ಸಂಪೂರ್ಣವಾಗಿ ಕ್ಷೀಣಿಸಿದೆ. ಆಗಸ್ಟ್‌, ಸೆಪ್ಟೆಂಬರ್‌ ವರೆಗೂ ಪ್ರವಾಹದ ನೀರಿನಿಂದ ತುಂಬಿರುತ್ತಿದ್ದ ನದಿಯಲ್ಲಿ ಆಗಸ್ಟ್‌ನಲ್ಲೇ ನೀರಿನ ಪ್ರಮಾಣ ತೀರ ಕಡಿಮೆಯಾಗಿತ್ತು. ಈ ವರ್ಷ ಹಳ್ಳ, ಕೆರೆ, ಕಾಲುವೆಗಳಲ್ಲಿ ನೀರು ಸಂಗ್ರಹವಾಗದ ಕಾರಣ ಈ ಭಾಗದಲ್ಲಿ ಹೊಲಗೆದ್ದೆಗಳು, ತೋಟಗಳು ಒಣಗುತ್ತಿವೆ.ಪಶ್ಚಿಮ ಘಟ್ಟಗಳ ತಪ್ಪಲು ಗಂಗಾಮೂಲದಲ್ಲಿ ಉಗಮಿಸಿ ಕೆರೆಕಟ್ಟೆ ದಟ್ಟಾರಣ್ಯಗಳ ನಡುವಿನಿಂದ ಹರಿವ ತುಂಗಾ ನದಿ ಹಲವು ಹಳ್ಳಗಳು, ಉಪನದಿಗಳು ಕೂಡಿಕೊಂಡು ಹರಿಯುತ್ತಿತ್ತು. ಆದರೆ ಹಳ್ಳಗಳು, ಉಪನದಿಗಳು ಈ ವರ್ಷ ಬತ್ತಿ ಹೋಗುವ ಹಂತದಲ್ಲಿದೆ. ಹಳ್ಳಗಳಲ್ಲಿ ನೀರೆ ಇಲ್ಲ. ಕೆರೆಗಳು ಒಣಗಿ ನಿಂತಿವೆ. ಹಾಗಾಗಿ ತುಂಗಾ ನದಿಯೂ ಕಾಲುವೆಯಂತೆ ಹರಿಯುತ್ತಿದೆ.ಜೂನ್‌ ನಿಂದ ಆಗಸ್ಟ್‌ ವರೆಗಿನ ಮಳೆಗಾಲದಲ್ಲಿ ತುಂಗಾನದಿಯಲ್ಲಿ ಪ್ರವಾಹ ಕಂಡುಬರುತ್ತಿತ್ತು. ನದಿ ಹರಿದು ಬರುವ ಪ್ರದೇಶದ ಅಲ್ಲಲ್ಲಿ ಜಲ ಮೂಲಗಳು ಕೂಡುವಿಕೆಯಿಂದ ನದಿ ಸದಾ ತುಂಬಿರುತ್ತಿತ್ತು. ಆದರೀಗ ಕಾಲುವೆಯಂತೆ ಹರಿಯುತ್ತಿರುವ ನದಿಯಲ್ಲಿ ಒಡಲಿನ ಕಲ್ಲುಗಳು ಗೋಚರಿಸುವ ಸ್ಥಿತಿಗೆ ಬಂದಿದೆ. ಮಳೆ ಕೊರತೆಯಿಂದ ಈಗಾಗಲೇ ಕೃಷಿ ಚಟುವಟಿಕೆಗಳ ಮೇಲೆ ಅದರಲ್ಲೂ ಅಡಕೆ, ಕಾಫಿ ಸೇರಿದಂತೆ ಪ್ರಮುಖ ಬೆಳೆಗಳ ಮೇಲೆ ಪರಿಣಾಮ ಬೀರುತ್ತಿತ್ತು, ನೀರಿನಲ್ಲೇ ಫಸಲು ಒಣಗಿ ಹಾನಿಯುಂಟಾಗುತ್ತಿತ್ತು. ಆದರೀಗ ತುಂಗಾ ನದಿಯಲ್ಲಿ ನೀರು ಸಂಪೂರ್ಣ ಕ್ಷೀಣಿಸಿ ಬತ್ತಿ ಹೋಗುತ್ತಿರುವುದರಿಂದ ಕುಡಿವ ನೀರಿಗೂ ಪರದಾಡುವ ಪರಿಸ್ಥಿತಿ ಎದುರಾಗುವ ಕಾಲ ದೂರವಿಲ್ಲ.

ನರಸಿಂಹ ಪರ್ವತಗಳ ತಪ್ಪಲಿನ ಮಳೆಯ ನಾಡು ಕಿಗ್ಗಾ ಸಮೀಪದಲ್ಲಿ ಜನಿಸಿ ಹರಿದು ಬಂದು ತುಂಗಾ ನದಿ ಸೇರುತ್ತಿದ್ದ ನಳಿನಿ, ನಂದಿನಿ ಪ್ರಮುಖ ಉಪನದಿಗಳು ಸಹ ಸಂಪೂರ್ಣ ಬತ್ತಿ ಹೋಗುತ್ತಿದೆ. ಈ ವರ್ಷ ಜೂನ್‌ ಆರಂಭದಲ್ಲಿ ನಿರೀಕ್ಷೆ ಯಂತೆ ಮುಂಗಾರು ಆರಂಭಗೊಳ್ಳದಿರುವುದು, ವಾಡಿಕೆಯಷ್ಟು ಮಳೆಯಾಗದಿರುವುದು, ಪ್ರತೀ ವರ್ಷದಂತೆ ಜುಲೈನಲ್ಲಿ ಹೆಚ್ಚು ಮಳೆಯಾಗದಿರುವುದು ಈ ಪರಿಸ್ಥಿತಿಗೆ ಕಾರಣ.ತುಂಗೆ ಕುಡಿಯುವ ನೀರು, ಕೃಷಿ ಚಟುವಟಿಕೆಗಳಿಗೆ ಆಧಾರ ಮಾತ್ರವಲ್ಲದೆ, ಪ್ರಮುಖ ಧಾರ್ಮಿಕ ಕೇಂದ್ರಗಳ ಸಮೀಪದಲ್ಲೆ ಹಾದು ಹೋಗುವ ಪುಣ್ಯ ನದಿಯೂ ಹೌಡು. ದಕ್ಷಿಣ ಭಾರತದ ಪ್ರಮುಖ ಧಾರ್ಮಿಕ ಕ್ಷೇತ್ರವಾದ ಶೃಂಗೇರಿ, ಹರಿಹರಹುರ ಪೀಠ, ತೀರ್ಥಹಳ್ಳಿ ರಾಮೇಶ್ವರ ದೇಗುಲ, ಕೂಡಲಿ ಕ್ಷೇತ್ರ ಹೀಗೆ ಹಲವು ಪುಣ್ಯ ಕ್ಷೇತ್ರಗಳಲ್ಲಿ ಹಾದು ಹೋಗುತ್ತದೆ. ಶೃಂಗೇರಿ ಶ್ರೀ ಶಾರದಾ ಪೀಠದ ಸಮೀಪ ಹೆಚ್ಚಿರುತ್ತಿದ್ದ ನೀರಿನ ಮಟ್ಟ ತೀರಾ ಕಡಿಮೆಯಾಗಿ ಈ ವರ್ಷ ಕಾಲುವೆಯಂತಾಗಿರುವುದು ವಿಪರ್ಯಾಸವೇ ಸರಿ. ನವೆಂಬರ್‌ ನಲ್ಲೆ ಸುಡು ಬಿಸಿಲು ಮುಂದುವರೆದಿದ್ದು, ಮಲೆನಾಡಲ್ಲಿ ಫೆಬ್ರವರಿಯಲ್ಲೇ ರಣ ಬಿಸಿಲಿಗಿದೆ. ಏಪ್ರಿಲ್‌, ಮೇ ತಿಂಗಳ ಸುಡು ಬಿಸಿಲ ವಾತಾವರಣ ಡಿಸೆಂಬರ್ ಜನವರಿಯಲ್ಲೇ ಕಾಣಿಸಿದೆ. ಆಗಾಗ ಬರುತ್ತಿದ್ದ ಅಕಾಲಿಕ ಮಳೆ ಕ್ಷಣ ತಂಪೆರೆದು ಹೋಗುತ್ತಿತ್ತು. ಆದರೆ ಅಕಾಲಿಕ ಮಳೆಯೂ ಇಲ್ಲದೆ, ತುಂಗಾ ನದಿ ಮಾತ್ರ ಹಂತ ಹಂತವಾಗಿ ಬತ್ತಿ ಹೋಗುತ್ತಿದೆ. ಇದೇ ರೀತಿ ಮುಂದುವರೆದಲ್ಲಿ ಬೇಸಿಗೆಯಲ್ಲಿ ಮತ್ತಷ್ಟು ಕಷ್ಟವಾಗುವುದು ನಿಶ್ಚಿತ.

--- ಬಾಕ್ಸ್‌--ಕೃಷಿಗೆ ಹಿನ್ನೆಡೆ/: ಕುಡಿಯುವ ನೀರಿಗೂ ಬರ ಇಷ್ಚು ವರ್ಷಗಳಲ್ಲಿ ನವೆಂಬರ್‌, ಡಿಸೆಂಬರ್‌ನಲ್ಲೇ ತುಂಗಾ ನದಿ ಬತ್ತುವ ಹಂತಕ್ಕೆ ತಲುಪಿರುವುದು ಇದೇ ಮೊದಲು. ಏಪ್ರೀಲ್‌, ಮೇನಲ್ಲಿ ನೀರು ಕಡಿಮೆಯಾದರೂ ಅಷ್ಟೊಂದು ಪ್ರಮಾಣದಲ್ಲಿ ಕ್ಷೀಣಿಸುತ್ತಿರಲಿಲ್ಲ. ನದಿಯಲ್ಲಿ ನೀರು ಒಂದೇ ಪ್ರಮಾಣದಲ್ಲಿರುತ್ತಿತ್ತು. ಕುಡಿಯುವ ನೀರಿಗೆ ಬರ ಉಂಟಾಗುತ್ತಿರಲಿಲ್ಲ. ಆದರೆ ಈಗ ಕೃಷಿ ಚಟುವಟಿಕೆಗಳಿಗೆ ಹಿನ್ನೆಡೆ, ಕುಡಿಯುವ ನೀರಿಗೂ ಬರ ಎದುರಾಗುತ್ತಿದೆ. --ಶಂಕ್ರಪ್ರ .

ಗ್ರಾಮಸ್ಥ .ನೆಮ್ಮಾರು.

--ಮಲೆನಾಡಿಗಲ್ಲದೇ ರಾಜ್ಯದ ಅರ್ಧಭಾಗಕ್ಕೆ ನೀರಿನ ಸಮಸ್ಯೆತುಂಗಾ ನದಿ ಮಲೆನಾಡಿನಲ್ಲಿ ಹುಟ್ಟಿ ಹರಿದರೂ ಇದು ಕರ್ನಾಟಕದ ಅರ್ಧ ಬಾಗಕ್ಕೆ ನೀರುಣಿಸುವ ಜೀವ ನದಿ. ಕೃಷಿ ಚಟುವಚಿಕೆಗೆ ಆಧಾರವಾಗಿದ್ದ ನದಿ, ಮಲೆನಾಡಲ್ಲದೆ ಬಹುತೇಕ ಜಿಲ್ಲೆಗಳ ಜನರು, ಕೃಷಿಕರು ತುಂಗಾ ನದಿ ನೀರಿನ ಮೇಲೆ ಅವಲಂಬಿತರಾಗಿದ್ದಾರೆ. ಇದು ಆರ್ಥಿಕ, ಧಾರ್ಮಿಕ, ಸೇರಿದಂತೆ ಪ್ರಮುಖ ಕ್ಷೇತ್ರಗಳ ಮೇಲೆ ಪ್ರಭಾವ ಬೀರುತ್ತದೆ. ಮಲೆನಾಡಿಗೆ ಈ ಪರಿಸ್ಥಿತಿ ಬಂದೊದಗುತ್ತಿರುವುದು ಜನಜೀವನದ ಮೇಲೆ ಸಾಕಷ್ಠು ಪರಿಣಾಮ ಬೀರಲಿದೆ.-- ಪುಟ್ಟಪ್ಪ ಹೆಗ್ಡೆ,

ಗ್ರಾಮಸ್ಥ

25 ಶ್ರೀ ಚಿತ್ರ 1-

ಶೃಂಗೇರಿ ತಾಲೂಕಿನಲ್ಲಿ ಬಿಸಿಲ ಧಗೆಗೆ ಬತ್ತಿ ಹೋಗುತ್ತಿರುವ ತುಂಗಾ ನದಿ.25 ಶ್ರೀ ಚಿತ್ರ2-

ಕಾಲುವೆಯಂತೆ ಕ್ಷೀಣ ಗೊಂಡು ಹರಿಯುತ್ತಿರುವ ತುಂಗೆ.25 ಶ್ರೀ ಚಿತ್ರ 3-

ಶಂಕ್ರಪ್ಪ ಗ್ರಾಮಸ್ಥ