ಬಡವರಾಗಿ ಹುಟ್ಟಿದರೆ ಸಾಧಿಸುವ ಛಲ ಬರುತ್ತದೆ

| Published : Feb 26 2024, 01:30 AM IST

ಸಾರಾಂಶ

ಸಾಧನೆಗೆ ಬಡತನ ಅಡ್ಡಿಯಾಗಲ್ಲ. ಬಡವರಾಗಿ ಹುಟ್ಟಿದ್ದರೆ ಬದುಕಿನಲ್ಲಿ ಸಾಧಿಸುವ ಛಲ ಬರುತ್ತದೆ ಎಂದು ಜಿಲ್ಲಾಧಿಕಾರಿ ಡಾ. ಕುಮಾರ ಹೇಳಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಸಾಧನೆಗೆ ಬಡತನ ಅಡ್ಡಿಯಾಗಲ್ಲ. ಬಡವರಾಗಿ ಹುಟ್ಟಿದ್ದರೆ ಬದುಕಿನಲ್ಲಿ ಸಾಧಿಸುವ ಛಲ ಬರುತ್ತದೆ ಎಂದು ಜಿಲ್ಲಾಧಿಕಾರಿ ಡಾ. ಕುಮಾರ ಹೇಳಿದರು. ನಗರದ ಕೃಷಿಕ್ ಸರ್ವೋದಯ ಟ್ರಸ್ಟ್ ಸಭಾಂಗಣದಲ್ಲಿ ನಡೆದ ಕೆಎಎಸ್ ಮತ್ತು ಗ್ರೂಪ್ ಸಿ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿ ಮಾರ್ಗದರ್ಶನ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ಕೀಳರಮೆ, ನಕಾರಾತ್ಮಕ ಚಿಂತಿನೆಯಿಂದ ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ. ಗುರಿ ಇಟ್ಟುಕೊಂಡು ಸಾಧನೆ ಮಾಡಿದಾಗ ಯಶಸ್ಸು ಸಾಧ್ಯ ಎಂದರು.ಬಡವರಾಗಿ ಹುಟ್ಟಿರುವುದು ತಪ್ಪಲ್ಲ, ಬಡವರಾಗಿ ಬದುಕುವುದು ಸರಿಯಲ್ಲ. ಸಾಧನೆ ಮಾಡಿ ಮೇಲೆ ಬರಬೇಕು. ನಿಮ್ಮೊಳಗೆ ಯಾವ ಶಕ್ತಿ ಎಂಬುದು ತೋರಿಸಿಕೊಳ್ಳಬೇಕು ಎಂದರೆ ಅದು ಬಡರಾಗಿ ಹುಟ್ಟಿದರೆ ಮಾತ್ರ ಸಾಧ್ಯ. ಬಡವರಾಗಿ ಹುಟ್ಟಿದವರು ನಿಜವಾಗಲೂ ನಮ್ಮ ಶಕ್ತಿ ಏನೆಂಬುದನ್ನು ತೋರಿಸುವಷ್ಟು ಬೆಳೆಸಿಕೊಳ್ಳಬಹುದು ಎಂದು ತಿಳಿಸಿದರು.

ನಾನೂ ಕೂಡ ಆಂಗ್ಲ ಮಾಧ್ಯಮದಲ್ಲಿ ಓದಿದವನಲ್ಲ. ಸರ್ಕಾರಿ ಶಾಲೆ, ಕಾಲೇಜುಗಳಲ್ಲೇ ಓದಿದ್ದು. ಇಡೀ ಜೀವನವನ್ನು ಬಿಸಿಎಂ ಹಾಸ್ಟೆಲ್‌ನಲ್ಲೇ ಕಳೆದಿದ್ದೇನೆ. ಛಲದೊಂದಿಗೆ ಓದಿನಲ್ಲಿ ತೊಡಗಿದ್ದರಿಂದ ಐಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯವಾಯಿತು ಎಂದು ಹೇಳಿದರು..

ಓದುವಾಗ ಗುರಿ ಎಷ್ಟು ಮುಖ್ಯವೋ ದಾರಿಯೂ ಅಷ್ಟೆ ಮುಖ್ಯ. ಒಳ್ಳೆಯ ಸಮಯದಲ್ಲಿ ಒಳ್ಳೆಯ ಗುರಿ ಹಾಕಿಕೊಳ್ಳಬೇಕು. ಐಎಎಸ್, ಕೆಎಎಸ್ ಮಾಡುತ್ತೇನೆಂಬ ಗುರಿ ಹೊಂದಿದ್ದರೆ ಮಾತ್ರ ಅದನ್ನು ಸುಲಭವಾಗಿ ಸಾಧಿಸಲು ಸಾಧ್ಯ. ಇಲ್ಲದಿದ್ದರೆ ಏನನ್ನೂ ಮಾಡಲಾಗದು ಎಂದರು.

ಕಾಲ ಎಲ್ಲದ್ದಕ್ಕೂ ಕಾಯುವುದಿಲ್ಲ. ಕಾಲಕ್ಕೆ ತಕ್ಕಂತೆ ನಾವು ಸಾಗಬೇಕು. ಕೆಟ್ಟ ದಾರಿಯಲ್ಲಿ ಹೋಗಲು ನೂರು ದಾರಿಗಳಿರುತ್ತವೆ. ಆದರೆ, ಸರಿ ದಾರಿಯಲ್ಲಿ ನಡೆಯಲು ಇರುವುದು ಒಂದೇ ಮಾರ್ಗ. ಆದ್ದರಿಂದ ಎಲ್ಲವನ್ನೂ ಗಮನದ ಲ್ಲಿಟ್ಟುಕೊಂಡು ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಕೃಷಿಕ್ ಸರ್ವೋದಯ ಟ್ರಸ್ಟ್ ಅಧ್ಯಕ್ಷ ಟಿ. ತಿಮ್ಮೇಗೌಡ, ಜಂಟಿ ಕಾರ್ಯದರ್ಶಿ ಡಾ.ಎಸ್.ಟಿ. ರಾಮಚಂದ್ರು, ಖಜಾಂಚಿ ಡಾ. ಕೆ.ಬಿ. ಬೋರಯ್ಯ, ಸಂಪನ್ಮೂಲ ವ್ಯಕ್ತಿಗಳಾದ ಡಾ. ಹೇಮಚಂದ್ರ, ಎಚ್.ಡಿ. ವಿಶ್ವನಾಥ್, ಮುಖ್ಯ ಸಂಚಾಲಕರುಗಳಾದ ಎಸ್.ಲೋಕೇಶ್, ಸಿ.ಎಲ್. ನಂಜರಾಜು, ವ್ಯವಸ್ಥಾಪಕರಾದ ಲಕ್ಷ್ಮಣ್, ಸಹಾಯಕ ವ್ಯವಸ್ಥಾಪಕ ಶಿವಲಿಂಗಯ್ಯ ಭಾಗವಹಿಸಿದ್ದರು.