ಯಾವುದೇ ಕ್ಷೇತ್ರದ ಪ್ರಗತಿಗೆ ಶೈಕ್ಷಣಿಕ ಅಭಿವೃದ್ಧಿ ಮುಖ್ಯ

| Published : Jan 05 2025, 01:32 AM IST

ಸಾರಾಂಶ

ಬಹುತೇಕ ವಿದ್ಯಾರ್ಥಿಗಳು ಮೊಬೈಲ್ ನೋಡುವುದರಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವುದಕ್ಕೆ ಬೇಸರದ ಸಂಗತಿ. ಮಕ್ಕಳು ಮೊಬೈಲ್ ಬಳಕೆಯಿಂದ ದೂರಸರಿದು ವ್ಯಾಸಂಗದ ಕಡೆ ಹೆಚ್ಚಿನ ಗಮನಹರಿಸಬೇಕು. ಪರೀಕ್ಷೆ ಸಮಯದಲ್ಲಿ ಮನೆಯಲ್ಲಿ ಪೋಷಕರು ಟಿವಿ ನೋಡುವುದು, ಮೊಬೈಲ್ ಬಳಸುವುದನ್ನು ಕಡಿಮೆ ಮಾಡುವ ಮೂಲಕ ಮಕ್ಕಳ ಓದುವುದಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು

ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ

ತಮ್ಮ ಮಕ್ಕಳಿಗೆ ಆಸ್ತಿಯನ್ನು ಮಾಡುವ ಬದಲಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಿ ಮಕ್ಕಳನ್ನೇ ಆಸ್ತಿಯನ್ನಾಗಿಸುವಂತಹ ಕೆಲಸಕ್ಕೆ ಪೋಷಕರು ಮುಂದಾಗಬೇಕು ಎಂದು ಶಾಂತಿನಿಕೇತನ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಹಾಗೂ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಕಿವಿ ಮಾತು ಹೇಳಿದರು.

ಪಟ್ಟಣದ ಶಾಂತಿ ನಿಕೇತನ್ ಶಾಲೆ ಆವರಣದಲ್ಲಿ ಆಯೋಜಿಸಲಾಗಿದ್ದ ಶಾಲೆಯ 25ನೇ ವಾರ್ಷಿಕೋತ್ಸವದ ಬೆಳ್ಳಿ ಹಬ್ಬದಲ್ಲಿ ಶಾಲೆಯ ವಿದ್ಯಾರ್ಥಿಗಳ ಭಾವಚಿತ್ರವುಳ್ಳ ಕ್ಯಾಲೆಂಡರ್‌ ಬಿಡುಗಡೆ ಮಾಡಿ ಮಾತನಾಡಿ, ಯಾವುದೇ ಲಾಭದ ದೃಷ್ಠಿಯಿಂದ ನಾವು ಈ ಶಾಲೆಯನ್ನು ಪ್ರಾರಂಭಿಸಿಲ್ಲ, ಈ ಭಾಗದ ಬಡವರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಏಕೈಕ ಉದ್ದೇಶದಿಂದ ನಡೆಸಲಾಗುತ್ತಿದೆ ಎಂದರು.

ಮೊಬೈಲ್‌ಗೆ ದಾಸರಾಗಬೇಡಿ

ಇತ್ತೀಚಿನ ದಿನಗಳಲ್ಲಿ ಬಹುತೇಕ ವಿದ್ಯಾರ್ಥಿಗಳು ಮೊಬೈಲ್ ನೋಡುವುದರಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವುದಕ್ಕೆ ಬೇಸರದ ಸಂಗತಿ. ಮಕ್ಕಳು ಮೊಬೈಲ್ ಬಳಕೆಯಿಂದ ದೂರಸರಿದು ವ್ಯಾಸಂಗದ ಕಡೆ ಹೆಚ್ಚಿನ ಗಮನಹರಿಸಬೇಕು. ಪರೀಕ್ಷೆ ಸಮಯದಲ್ಲಿ ಮನೆಯಲ್ಲಿ ಪೋಷಕರು ಟಿವಿ ನೋಡುವುದು, ಮೊಬೈಲ್ ಬಳಸುವುದನ್ನು ಕಡಿಮೆ ಮಾಡುವ ಮೂಲಕ ಮಕ್ಕಳ ಓದುವುದಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಶೈಕ್ಷಣಿಕವಾಗಿ ಅಭಿವೃದ್ದಿ ಹೊಂದಿದಾಗ ಮಾತ್ರ ಯಾವುದೇ ಸಮುದಾಯ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ದಿ ಹೊಂದಲು ಸಾಧ್ಯ ಎಂದರು.

ಜಿ.ಪಂ ಮಾಜಿ ಅಧ್ಯಕ್ಷರು ಹಾಗೂ ಶಾಂತಿ ನಿಕೇತನ್ ವಿದ್ಯಾಸಂಸ್ಥೆಯ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ(ಚಿನ್ನಿ) ಮಾತನಾಡಿ, ಕಷ್ಟಪಟ್ಟು ಓದುವುದು ಬೇಡ ಇಷ್ಟಪಟ್ಟು ಓದುವುದನ್ನು ಬಾಲ್ಯದಿಂದಲ್ಲೇ ಅಭ್ಯಾಸ ಮಾಡಿಕೊಳ್ಳುವುದರ ಜೊತೆಗೆ ಸಾಧನೆ ಮಾಡಬೇಕೆನ್ನುವ ಗುರಿ, ಪರಿಶ್ರಮ ಹಾಗೂ ಶಿಸ್ತು, ತಂದೆ ತಾಯಿ, ಗುರು ಹಿರಿಯರನ್ನು ಗೌರವಿಸುವುದನ್ನು ಕಲಿಯುವುದು ಮುಖ್ಯ. ಮಕ್ಕಳ ಶೈಕ್ಷಣಿಕ ವಿಚಾರದಲ್ಲಿ ಶಿಕ್ಷಕರ ಪಾತ್ರ ಎಷ್ಟು ಮುಖ್ಯವೋ ಪೋಷಕರ ಪಾತ್ರವು ಅಷ್ಟೇ ಮುಖ್ಯ ಎಂದರು.

ಸಿಎಂ ಜಂಟಿ ಕಾರ್ಯದರ್ಶಿಗೆ ಸನ್ಮಾನ

ಇದೇ ವೇಳೆ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಜಂಟಿ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸುತ್ತಿರುವ ಪಿ.ಎ.ಗೋಪಾಲ್ ರವರನ್ನು ಶಾಲೆಯ ಆಡಳಿತ ಮಂಡಳಿವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಎ. ಶ್ರೀನಿವಾಸ್, ಪುರಸಭೆ ಸದಸ್ಯ ನಂಜುಂಡಪ್ಪ, ಯಂಗ್ ಇಂಡಿಯಾ ಶಾಲೆ ವ್ಯವಸ್ಥಾಪಕ ಪ್ರೋ.ಡಿ.ಶಿವಣ್ಣ, ಬಿಇಒ ವೆಂಕಟೇಶಪ್ಪ, ಸಿ.ಎಂ ಕಚೇರಿಯಲ್ಲಿ ವಿಷೇಶ ಅಧಿಕಾರಿ ಕೆ.ವೆಂಕಟೇಶ್, ಶಾಂತಿ ನಿಕೇತನ್ ಶಾಲೆಯ ಆಡಳಿತಮಂಡಲಿಯ ಡಿ.ಎನ್.ರಘುನಾಥ್, ಪ್ರಾಂಶುಪಾಲ ಬಿ.ಆರ್.ನವೀನ್ ಕುಮಾರ್ ಇದ್ದರು.