ಕೆಲಸದ ಜೊತೆ ನೌಕರರಿಗೆ ಆರೋಗ್ಯದತ್ತ ಗಮನವಿರಲಿ

| Published : Apr 08 2025, 12:35 AM IST

ಸಾರಾಂಶ

ರಾಜಕಾರಣಿಗಳು ಐದು ವರ್ಷಗಳ ಕಾಲ ಒತ್ತಡದಿಂದ ಇದ್ದರೆ ನೌಕರರು ತಮ್ಮ ಸೇವಾ ಅವಧಿ ಮುಗಿಯುವವರೆಗೂ ಒತ್ತಡದಲ್ಲಿ ಇರುತ್ತಾರೆ. ನಾವು ಕೆಲಸ ಮಾಡಿಸೋದು, ನೌಕರರು ಕೆಲಸ ಮಾಡುವುದು ಒಂದು ರೀತಿ ಸಾರ್ವಜನಿಕರ ಒತ್ತಡ ಹೆಚ್ಚು ಇರುತ್ತದೆ ಎಂದು ಕಿವಿಮಾತು ಹೇಳಿದರು. ಕೋಪಕ್ಕೆ ಒಂದು ಮದ್ದು ಇದ್ದರೇ ಧ್ಯಾನ. ಎಲ್ಲಾ ನೌಕರರು ಕೆಲ ಸಮಯ ಮೀಸಲಿಡಿ. ನೌಕರರ ಕ್ಷೇಮಾಭಿವೃದ್ಧಿಗೆ ಖಂಡಿತ ದುಡಿಯುವ ಕೆಲಸ ಮಾಡಲಾಗುವುದು. ಆಡಳಿತ ಮತ್ತು ನೌಕರರ ಸ್ನೇಹಿಯಾಗಿ ನಾನು ಖಂಡಿತವಾಗಿ ಇರುತ್ತೇನೆ ಎಂದು ಸಂಸದ ಶ್ರೇಯಸ್‌ ಪಟೇಲ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಹಾಸನ

ರಾಜಕಾರಣಿಗಳು ಐದು ವರ್ಷಗಳ ಕಾಲ ಒತ್ತಡದಿಂದ ಇದ್ದರೆ ನೌಕರರು ತಮ್ಮ ಸೇವಾ ಅವಧಿ ಮುಗಿಯುವವರೆಗೂ ಒತ್ತಡದಲ್ಲಿ ಇರುತ್ತಾರೆ. ಹಾಗಾಗಿ ತಮ್ಮ ಆರೋಗ್ಯದ ಕಡೆ ಗಮನ ಕೊಡಬೇಕು. ಆಡಳಿತ ಮತ್ತು ನೌಕರರ ಸ್ನೇಹಿಯಾಗಿ ನಾನು ಖಂಡಿತವಾಗಿ ಇರುತ್ತೇನೆ ಎಂದು ಸಂಸದ ಶ್ರೇಯಸ್ ಎಂ. ಪಟೇಲ್ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ಕ್ರೀಡಾಂಗಣದ ಬಳಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘ, ಜಿಲ್ಲಾ ಶಾಖೆ ಇವರ ಸಂಯುಕ್ತಾಶ್ರಯದಲ್ಲಿ ಸೋಮವಾರ ಮಧ್ಯಾಹ್ನ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮದಲ್ಲಿ ಜ್ಯೋತಿ ಬರಮಾಡಿಕೊಂಡು ಮಾತನಾಡಿದ ಅವರು, ಸರ್ಕಾರದ ಕಾರ್ಯಾಂಗವಾಗಿ ಸರ್ಕಾರಿ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನೌಕರರ ಕ್ರೀಡಾಕೂಟವನ್ನು ಜಿಲ್ಲಾಧ್ಯಕ್ಷ ಬಿ.ಪಿ. ಕೃಷ್ಣೇಗೌಡರು ಆಯೋಜನೆ ಮಾಡಿದ್ದು, ಜಿಲ್ಲಾಧ್ಯಕ್ಷರಾದ ಮೇಲೆ ಮೊದಲ ಕೆಲಸ ನೌಕರರ ಸಂಘದ ಕಟ್ಟಡದ ದುರಸ್ತಿ ಕಾರ್ಯ ಮಾಡುತ್ತಿರುವುದು ಉತ್ತಮವಾಗಿದೆ ಎಂದರು.

ಕೋಪಕ್ಕೆ ಮದ್ದು ಧ್ಯಾನ:

ರಾಜಕಾರಣಿಗಳಿಗೆ ಎಷ್ಟು ಒತ್ತಡ ಇರುತ್ತದೆ ಅದರ ಎರಡರಷ್ಟು ಒತ್ತಡ ನೌಕರರಿಗೆ ಇರುತ್ತದೆ. ನಾವು ಐದು ವರ್ಷ ನಾವು ಈ ಒತ್ತಡ ಅನುಭವಿಸುತ್ತೇವೆ. ಆದರೆ ನೀವು ಅವಧಿ ಮುಗಿಯುವವರೆಗೂ ಒತ್ತಡ ಇರುವುದು ಒಂದು ಕಡೆ ಬೇಸರದ ವಿಚಾರ ಎಂದರು. ದಿನದ ಒಂದುವರೆ ಗಂಟೆಗಳ ಕಾಲವಾದರೂ ತಮ್ಮ ಕುಟುಂಬ ಆರೋಗ್ಯದ ಕಡೆ ನೀವು ಗಮನಹರಿಸಬೇಕು. ಆರೋಗ್ಯ ಚೆನ್ನಾಗಿದ್ದರೇ ನಮ್ಮ ಕುಟುಂಬ ಚೆನ್ನಾಗಿರುತ್ತದೆ. ಎಲ್ಲರೂ ಆರೋಗ್ಯದ ಕಡೆ ಗಮನಕೊಡಬೇಕು. ನಾವು ಕೆಲಸ ಮಾಡಿಸೋದು, ನೌಕರರು ಕೆಲಸ ಮಾಡುವುದು ಒಂದು ರೀತಿ ಸಾರ್ವಜನಿಕರ ಒತ್ತಡ ಹೆಚ್ಚು ಇರುತ್ತದೆ ಎಂದು ಕಿವಿಮಾತು ಹೇಳಿದರು. ಕೋಪಕ್ಕೆ ಒಂದು ಮದ್ದು ಇದ್ದರೇ ಧ್ಯಾನ. ಎಲ್ಲಾ ನೌಕರರು ಕೆಲ ಸಮಯ ಮೀಸಲಿಡಿ. ನೌಕರರ ಕ್ಷೇಮಾಭಿವೃದ್ಧಿಗೆ ಖಂಡಿತ ದುಡಿಯುವ ಕೆಲಸ ಮಾಡಲಾಗುವುದು. ಶಾಸಕರಾದ ಸ್ವರೂಪ್ ಮತ್ತು ನಾನು ಒಟ್ಟಿಗೆ ಸೇರಿ ನಿಮ್ಮ ಜೊತೆ ಇರುತ್ತೇವೆ. ಯಾವುದೇ ರೀತಿ ಒತ್ತಡಕ್ಕೆ ಒಳಗಾಗಿ ಖಿನ್ನತೆಗೆ ಒಳಗಾಗಬೇಡಿ. ಆರೋಗ್ಯವಾಗಿ ಕೆಲಸ ಮಾಡಿ ಎಂದು ಸಲಹೆ ನೀಡಿದರು. ಆಡಳಿತ ಮತ್ತು ನೌಕರರ ಸ್ನೇಹಿಯಾಗಿ ನಾನು ಖಂಡಿತವಾಗಿ ಇರುತ್ತೇನೆ ಎಂದು ಹೇಳಿದರು.

ಕುಟುಂಬಕ್ಕೆ ಸಮಯ ಕೊಡಿ:

ಶಾಸಕ ಎಚ್.ಪಿ. ಸ್ವರೂಪ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರು ಎಂದರೆ ಕ್ರಿಯಾಶೀಲ ಅಧ್ಯಕ್ಷರು. ಸಂಘವನ್ನು ಒಗ್ಗಟ್ಟಿನಿಂದ ಕೊಂಡೊಯ್ಯುತ್ತಿದ್ದಾರೆ. ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ ಇರಲಿ ಕಾರ್ಯಾಂಗ ಒತ್ತಡದಿಂದ ಕೆಲಸ ಮಾಡಬೇಕು. ಪ್ರತಿನಿತ್ಯ ಕೆಲಸದ ಒತ್ತಡ ಇದ್ದರೂ ಕುಟುಂಬಕ್ಕೆ ಕೆಲ ಸಮಯ ಕೊಡಬೇಕು. ಸುಖ, ಶಾಂತಿ ಜೊತೆ ನೆಮ್ಮದಿ ಇರಬೇಕು. ದೊಡ್ಡ ಮಟ್ಟದ ಕ್ರೀಡಾಕೂಡ ಹಮ್ಮಿಕೊಳ್ಳಲಾಗಿದ್ದು, ಸಂಜೆಯ ರಸಮಂಜರಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.

ಜಿಲ್ಲಾಧಿಕಾರಿ ಸಿ. ಸತ್ಯಭಾಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರಿ ನೌಕರರು ಎಂದರೇ ಅತ್ಯುತ್ತಮ ನೌಕರರೆಂದು ಪ್ರಶಸ್ತಿ ಕೊಡುತ್ತೇವೆ. ಕ್ರೀಡೆ ಮುಖ್ಯ ಏಕೆ ಎಂದರೇ ನಮ್ಮ ಆರೋಗ್ಯ ಸ್ವಾಸ್ಥ್ಯತೆ ಇರಬೇಕು. ನಾವು ಎಷ್ಟು ಆರೋಗ್ಯವಾಗಿದ್ದೇವೆ ಎಂಬುದನ್ನು ತಮ್ಮ ಹೊಟ್ಟೆ ನೋಡಿಕೊಂಡು ಹೇಳಬೇಕು ಎಂದರು. ನೌಕರರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಮುಖ್ಯ. ಸರಿಯಾದ ಸಮಯಕ್ಕೆ ಊಟ ಮಾಡಿ, ಜೊತೆಗೆ ಯೋಗಾಸನ ಮಾಡಬೇಕು. ಸರ್ಕಾರಿ ನೌಕರರು ಸೂಕ್ಷ್ಮವಂತರಾಗಬೇಕು. ಯಾರೆ ನಿಮ್ಮ ಕಚೇರಿಗೆ ಬಂದರೂ ನೀವು ಶ್ರದ್ಧೆಯಿಂದ ಕೆಲಸ ನಿರ್ವಹಿಸಿ, ಮನಸ್ಸನ್ನು ಕಠಿಣ ಮಾಡಿಕೊಳ್ಳಬಾರದು ಎಂದರು.

ಬಿ.ಆರ್‌. ಪೂರ್ಣಿಮಾ ಮಾತನಾಡಿ, ಇಂತಹ ಕ್ರೀಡೆ ಒಂದೆರಡು ದಿನಕ್ಕೆ ಸೀಮಿತವಾಗದೇ ಪ್ರತಿನಿತ್ಯ ದಿನದ ೨ ಗಂಟೆಗಳನ್ನು ವ್ಯಾಯಾಮ, ಧ್ಯಾನಕ್ಕೆ ನೀಡಿ. ಅನುಕಂಪ ಆಧಾರದ ಮೇಲೆ ನಿಮ್ಮ ಕಚೇರಿಗೆ ಬರುವುದನ್ನು ತಪ್ಪಿಸಿ ನಿಮ್ಮ ಕುಟುಂಬಕ್ಕೆ ಆಧಾರವಾಗಿ ಆರೋಗ್ಯದಿಂದ ನಿವೃತ್ತಿಯಾಗಿ ಎಂದು ಕಿವಿಮಾತು ಹೇಳಿದರು. ಎಲ್ಲಾರ ಆರೋಗ್ಯ ಚೆನ್ನಾಗಿರಲಿ ಎಂದು ಹಾರೈಸಿದರು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ. ಕೃಷ್ಣೇಗೌಡ ಪ್ರಾಸ್ತಾವಿಕ ನುಡಿಯಲ್ಲಿ ಮಾತನಾಡಿ, ಕೆಲಸದ ಜೊತೆ ದೇಹದ ಆರೋಗ್ಯದ ಸ್ಥಿತಿ ಬಗ್ಗೆ ಗಮನಹರಿಸುವ ಕೆಲಸ ಕೂಡ ಆಗಬೇಕು. ಎಲ್ಲಾ ಕ್ರೀಡೆಯಲ್ಲೂ ಭಾಗವಹಿಸಿ ಸಮತೋಲನದಲ್ಲಿ ದೇಹ ಇಟ್ಟುಕೊಳ್ಳಬೇಕು. ಯಾವ ಗೊಂದಲವಿಲ್ಲದೇ ಕ್ರೀಡೆಯಲ್ಲಿ ಪಾಲ್ಗೊಂಡು ಶಿಸ್ತುಬದ್ಧವಾಗಿ ನಡೆದುಕೊಂಡು ಹೋಗುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವೆಂಕಟೇಶ್ ನಾಯ್ಡು, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ. ಕೃಷ್ಣೇಗೌಡ, ಉಪಾಧ್ಯಕ್ಷ ಕೆ.ವಿ. ಪಾರ್ಥೇಶ್, ಎಚ್.ವಿ. ಪಲ್ಲವಿ. ಕ್ರೀಡಾ ಕಾರ್ಯದರ್ಶಿ ಆರ್. ಆಶಾ, ಖಜಾಂಚಿ ಕೆ.ಆರ್. ಹೇಮಂತ್, ಜಿಲ್ಲಾ ಕಾರ್ಯದರ್ಶಿ ಬಿ.ಎಂ. ಲಕ್ಷ್ಮೀಕಾಂತ್, ಕ್ರೀಡಾ ಕಾರ್ಯದರ್ಶಿ ಬಿ.ಕೆ. ರವೀಂದ್ರ, ಈ ಕೃಷ್ಣೇಗೌಡ, ನಾಯಕರಹಳ್ಳಿ ಮಂಜೇಗೌಡ ಇತರರು ಉಪಸ್ಥಿತರಿದ್ದರು.