ಸಾರಾಂಶ
ಚಾಮರಾಜನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಚಾಮರಾಜನಗರ ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ್ ಸುದ್ದಿಗೋಷ್ಠಿ ನಡೆಸಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಜನರೇ ಸ್ವಯಂಪ್ರೇರಿತವಾಗಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಬೇಕು. ಪಾರ್ಸಲ್ ಮೂಲಕ ತರುವ ವಸ್ತುಗಳಿಗೆ ಪರಿಸರಕ್ಕೆ ಪೂರಕವಾದ ಬಟ್ಟೆ ಬ್ಯಾಗ್ ಬಳಸಬೇಕು ಎಂದು ಚಾಮರಾಜನಗರ ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ್ ಹೇಳಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2021ರಿಂದ ಜು.3 ಅನ್ನು ಅಂತಾರಾಷ್ಟ್ರೀಯ ಪ್ಲಾಸ್ಟಿಕ್ ಮುಕ್ತ ದಿನವನ್ನು ಆಚರಿಸಲಾಗುತ್ತಿದೆ. ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಅನ್ನು ನಿಷೇಧಿಸಿ ಪರಿಸರಕ್ಕೆ ಪೂರಕವಾದ ಬಟ್ಟೆ ಬ್ಯಾಗ್ ಬಳಸಬೇಕು. ಸಾರ್ವಜನಿಕರಿಗೆ ಅರಿವು ಮೂಡಿಸುವುದೇ‘ಪ್ಲಾಸ್ಟಿಕ್ ಬ್ಯಾಗ್ ಮುಕ್ತದಿನ’ದ ಉದ್ದೇಶವಾಗಿದೆ ಎಂದರು.
ಪ್ಲಾಸ್ಟಿಕ್ ಪೆಟ್ರೋಲಿಯಂನಿಂದ ತಯಾರಾದ ಉತ್ಪನ್ನವಾಗಿದೆ. ಇದನ್ನುಎಲ್ಲೆಂದರಲ್ಲಿ ಬಿಸಾಡುವುದರಿಂದ ಗಾಳಿ, ಭೂಮಿ, ಮಣ್ಣು ಕಲುಷಿತಗೊಳ್ಳಲಿದೆ. ಇದರಿಂದ ಚರ್ಮರೋಗ, ಉಸಿರಾಟ ಸಮಸ್ಯೆಗಳು ಕಾಣಿಸಿಕೊಳ್ಳಲಿವೆ ಎಂದರು. ಸಂಜೀವಿನಿ ಟ್ರಸ್ಟ್ ನ ಸತೀಶ್‌ಕುಮಾರ್ ಮಾತನಾಡಿ, ನಗರವನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ನ್ಯಾಯಾಧೀಶರು ನಗರಸಭೆ ಅಧಿಕಾರಿಗಳ ಸಭೆ ಕರೆದು, ಚರ್ಚಿಸಿ, ಪ್ಲಾಸ್ಟಿಕ್ ಬಳಸದಂತೆ ಅರಿವು ಮೂಡಿಸಬೇಕು. ಏಕಮುಖ ಬಳಕೆಯ ಪ್ಲಾಸ್ಟಿಕ್ ನಿಷೇಧ ಮಾಡುವುದು ನಮ್ಮ ಆಗ್ರಹ ಎಂದರು.ಸಂಜೀವಿನಿ ಟ್ರಸ್ಟ್‌ನ ಅಕ್ಷತಾ ಜೈನ್, ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾನಿಲಯದ ಜಿಲ್ಲಾಸಂಚಾಲಕಿ ಬಿ.ಕೆ.ದಾನೇಶ್ವರಿ, ಶಿವು ವಿರಾಟ್, ಸುರೇಶ್‌ಗೌಡ ಹಾಜರಿದ್ದರು.