ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಸಮಾಜದಲ್ಲಿ ಸಾಮಾಜಿಕ ಮೌಲ್ಯಗಳು ಕಡಿಮೆಯಾಗುತ್ತಿದ್ದು, ಭ್ರಷ್ಟಾಚಾರ, ಕೊಲೆ, ಸುಲಿಗೆ ಹಾಗೂ ಅತ್ಯಾಚಾರದಂತಹ ಅಪರಾಧಕ್ಕೆ ಕಾನೂನಿನಲ್ಲಿ ಶಿಕ್ಷೆ ಇದೆ. ಆದರೆ ನಮ್ಮಲಿನ ಸಾಮಾಜಿಕ ಮೌಲ್ಯಗಳು ಹಾಗೂ ಸಾಮಾಜಿಕ ಕಳಕಳಿ ಕಡಿಮೆಯಾಗಿದ್ದು, ಸಾಮಾಜಿಕ ನ್ಯಾಯಕ್ಕಾಗಿ ಎಲ್ಲರೂ ಹೋರಾಟ ಮಾಡುವ ನಿಟ್ಟಿನಲ್ಲಿ ಸಾಗಬೇಕಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ನಿವೇದಿತಾ ಮಹಾಂತೇಶ್ ಮುನವಳ್ಳಿಮಠ್ ಕರೆಕೊಟ್ಟರು.ಪಟ್ಟಣದ ಸರ್ಕಾರಿ ಮಹಿಳಾ ಗೃಹ ವಿಜ್ಞಾನ ಕಾಲೇಜು ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಸಾಮಾಜಿಕ ನ್ಯಾಯ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸಂವಿಧಾನದ ಪೀಠಿಕೆಯಲ್ಲಿ ತಿಳಿಸಿರುವಂತೆ ಸಮಾನತೆ, ಸ್ವಾತಂತ್ರ್ಯ ಹಾಗೂ ಸಾಮಾಜಿಕ ನ್ಯಾಯದ ತಳಹದಿಯಲ್ಲಿ ದೇಶದ ಕಾನೂನು ರೂಪಗೊಂಡಿದ್ದರೂ ಸಾಮಾಜಿಕ ನ್ಯಾಯದ ಬಗ್ಗೆ ಅನಿವಾರ್ಯವಾಗಿ ನಾವು ಮಾತನಾಡಬೇಕಿದೆ. ಆದ್ದರಿಂದ ಪ್ರತಿಯೊಬ್ಬರೂ ಸಾಮಾಜಿಕ ಮೌಲ್ಯಗಳು ಹಾಗೂ ಸಾಮಾಜಿಕ ಕಳಕಳಿಯನ್ನು ರೂಢಿಸಿಕೊಂಡು ಮುನ್ನಡೆಯೋಣ ಎಂದರು.
ಸಿವಿಲ್ ನ್ಯಾಯಾಧೀಶರಾದ ಚೇತನ ಅವರು ಮಾತನಾಡಿ, ರೋಗ ಬದಲಾಗುವುದು ನೀ ಬದಲಾದರೆ, ಸಮಾಜ ಬದಲಾಗುವುದು ನೀ ಮೊದಲಾದರೇ ಎಂಬ ಮಾತಿನ ಅರ್ಥ ತಿಳಿಯಲು ಸಾಗಿದಲ್ಲಿ ಮೊದಲಿಗೆ ನಮ್ಮ ನ್ಯೂನತೆಗಳನ್ನು ಬದಲಿಸಿಕೊಂಡ ನಂತರ ಸಮಾಜದ ಬದಲಾವಣೆಗೆ ಸಾಗಬೇಕು. ನಾವು ನೈತಿಕತೆ ಅಥವಾ ದಿನನಿತ್ಯದ ಜೀವನ ಸರಿ ಇಲ್ಲದ ಸಮಯದಲ್ಲಿ ಸಾಮಾಜಿಕ ನ್ಯಾಯಕ್ಕೆ ಶ್ರಮಿಸುತ್ತೇವೆ ಎಂಬುದು ಅರ್ಥಹೀನವಾಗುತ್ತದೆ. ಸಂವಿಧಾನದ ಅಡಿಯಲ್ಲಿ ಆಡಳಿತ ವ್ಯವಸ್ಥೆ ರೂಪಗೊಂಡು ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಸಾಗುತ್ತಿದೆ. ಆದರೂ ತಾರತಮ್ಯ ಇವತ್ತೂ ಕೂಡ ಯಾರು ಮಾತನಾಡುತ್ತಿಲ್ಲ ಅಥವಾ ಕಂಡಬಂದಿಲ್ಲವೆಂದರೂ, ಎಲ್ಲಾ ರಂಗದಲ್ಲೂ ತಾರತಮ್ಯ ಇದ್ದೇ ಇದೆ. ಶೈಕ್ಷಣಿಕ, ಧಾರ್ಮಿಕ, ಲಿಂಗ, ಜಾತಿ ಎಲ್ಲಾ ಕಡೇ ಇದ್ದೇ ಇದೆ. ಆದ್ದರಿಂದ ತಾರತಮ್ಯ ಹೋಗಲಾಡಿಸುವ ನಿಟ್ಟಿನಲ್ಲಿ ನಾವುಗಳು ಶಿಸ್ತುಬದ್ಧ ಜೀವನ ರೂಢಿಸಿಕೊಂಡು, ನಂತರ ಹಂತಹಂತವಾಗಿ ಸುತ್ತಮುತ್ತಲಿನ ಪರಿಸರದಲ್ಲಿ ಕಾಣುವ ತಾರತಮ್ಯಗಳಿಗೆ ಸ್ಪಂದಿಸುವ ಜತೆಗೆ ಸಾಮಾಜಿಕ ನ್ಯಾಯದ ಅಡಿಯಲ್ಲಿ ಸಣ್ಣಪುಟ್ಟ ತೊಂದರೆಗಳಿಗೆ ಸ್ಪಂದಿಸುವ ಕೆಲಸ ಮಾಡೋಣವೆಂದು ಸಲಹೆ ನೀಡಿದರು.ಹಿರಿಯ ವಕೀಲ ಎಚ್.ಎಸ್.ಅರುಣ್ ಕುಮಾರ್ ಪ್ರಧಾನ ಭಾಷಣ ಮಾಡುತ್ತಾ, ಸಾಮಾಜಿಕ ನ್ಯಾಯ ಹಾಗೂ ಬಾಂಧವ್ಯದಡಿ ಮನೆಯಿಂದ ಸಾಮಾಜಿಕ ನ್ಯಾಯ ಪ್ರಾರಂಭವಾಗಬೇಕು, ಕುಟುಂಬದಲ್ಲಿ ನಾಲ್ಕು ಸೋದರರ ನಡುವೆ ತಂದೆ ತೋರುವ ಪ್ರೀತಿ, ಸಾಮಾಜಿಕ ನ್ಯಾಯಕ್ಕೆ ಸಾಕ್ಷಿಯಾಗಿದೆ ಅದೇ ರೀತಿ ದಾಯಾಧಿ ಸಹೋದರರ ಬಾಂಧವ್ಯಕ್ಕೆ ಸಾಕ್ಷಿಯಾಗಿ ರಾಮಾಯಣ ಹಾಗೂ ದಾಯಾದಿ ಸಹೋದರರ ಕಲಹಕ್ಕೆ ಮಹಾಭಾರತ ನಡೆಯಿತು ಎಂದು ತಿಳಿಸಿ, ಆ ಎರಡು ಮಹಾನ್ ಗ್ರಂಥಗಳಿನ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡಿ, ಸಮಾಜದಲ್ಲಿನ ಸಾಮಾಜಿಕ ನ್ಯಾಯದ ಕೊರತೆ ಹಾಗೂ ಹೋಗಲಾಡಿಸುವ ನಿಟ್ಟಿನಲ್ಲಿ ಯುವ ಜನತೆಯ ಪಾತ್ರ ಕುರಿತು ಸುದೀರ್ಘವಾಗಿ ವಿವರಿಸಿದರು.
ಸರ್ಕಾರಿ ಮಹಿಳಾ ಗೃಹ ವಿಜ್ಞಾನ ಕಾಲೇಜು ಪ್ರಾಂಶುಪಾಲೆ ಆಶಾ ಜ್ಯೋತಿ, ತಾ. ವಕೀಲರ ಸಂಘದ ಅಧ್ಯಕ್ಷ ಎಂ.ವಿ.ಶಿವಶಂಕರ್, ಪ್ರಾಧ್ಯಪಕ ಡಾ. ಕೃಷ್ಣಮೂರ್ತಿ, ಡಾ. ಗಣೇಶ್, ಡಾ. ಅಶೋಕ್, ಫರೀರಮ್ಮ ಪಿ.ಮುರುಗೊಡ್, ಶ್ವೇತನಾಯಕ್, ಜಯಚಂದ್ರ, ಸಹ ಪ್ರಾಧ್ಯಾಪಕರಾದ ಸುನೀಲ್, ಜಗದೀಶ್, ನಾಗೇಂದ್ರ, ಉಮೇಶ್, ರಾಘವೇಂದ್ರ ಇತರರು ಇದ್ದರು.===================
ಫೋಟೋ: ಹೊಳೆನರಸೀಪುರದ ಸರ್ಕಾರಿ ಮಹಿಳಾ ಗೃಹ ವಿಜ್ಞಾನ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ವಿಶ್ವ ಸಾಮಾಜಿಕ ನ್ಯಾಯ ದಿನ ಕಾರ್ಯಕ್ರಮವಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶರಾದ ನಿವೇದಿತಾ ಮಹಾಂತೇಶ್ ಮುನವಳ್ಳಿಮಠ್ ಚಾಲನೆ ನೀಡಿದರು. ನ್ಯಾಯಾಧೀಶರಾದ ಚೇತನ, ಆಶಾ ಜ್ಯೋತಿ, ಎಂ.ವಿ.ಶಿವಶಂಕರ್, ಎಚ್.ಎಸ್.ಅರುಣ್ ಕುಮಾರ್ ಇದ್ದರು.