ಜಿಲ್ಲೆಯ ಕಾಂಗ್ರೆಸ್‌ನಲ್ಲಿ ಎದ್ದಿರುವ ಬಿರುಗಾಳಿ, ಬಿರುಕಿನ ಕುರಿತಂತೆ ಜಿಲ್ಲೆಗೆ ರಾಜ್ಯ ಕಾಂಗ್ರೆಸ್‌ ನಾಯಕರ ವಿಶೇಷ ತಂಡ ಕಳುಹಿಸಿ ಸತ್ಯಾಸತ್ಯತೆ ತನಿಖೆ ನಡೆಸುವ ಭರವಸೆಯನ್ನು ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನೀಡಿದ್ದಾರಂತೆ.

ಸಚಿವ ಖಂಡ್ರೆ, ರಹೀಮ್‌, ಜಿಲ್ಲಾಧ್ಯಕ್ಷ ಜಾಬಶೆಟ್ಟಿ ವಿರುದ್ಧ ದೂರು

ಕನ್ನಡಪ್ರಭ ವಾರ್ತೆ ಬೀದರ್‌

ಜಿಲ್ಲೆಯ ಕಾಂಗ್ರೆಸ್‌ನಲ್ಲಿ ಎದ್ದಿರುವ ಬಿರುಗಾಳಿ, ಬಿರುಕಿನ ಕುರಿತಂತೆ ಜಿಲ್ಲೆಗೆ ರಾಜ್ಯ ಕಾಂಗ್ರೆಸ್‌ ನಾಯಕರ ವಿಶೇಷ ತಂಡ ಕಳುಹಿಸಿ ಸತ್ಯಾಸತ್ಯತೆ ತನಿಖೆ ನಡೆಸುವ ಭರವಸೆಯನ್ನು ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನೀಡಿದ್ದಾರಂತೆ.

ಈ ಕುರಿತಂತೆ ರೆಬೆಲ್‌ ನಾಯಕರ ತಂಡದ ಸದಸ್ಯರೊಬ್ಬರು ‘ಕನ್ನಡಪ್ರಭ’ಕ್ಕೆ ಮಾತನಾಡಿ ತಿಳಿಸಿದ್ದು, ಬುಧವಾರ ಬೆಂಗಳೂರಿನಲ್ಲಿ ಡಿ.ಕೆ.ಶಿವಕುಮಾರ ಅವರನ್ನು ಭೇಟಿ ಮಾಡಿರುವ ಜಿಲ್ಲೆಯ ಕೆಲ ಕಾಂಗ್ರೆಸ್‌ ಮುಖಂಡರುಗಳು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಸಂಸದ ಸಾಗರ ಖಂಡ್ರೆ ಹಾಗೂ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಇದನ್ನು ವಿರೋಧಿಸದೇ ಮೂಕಪ್ರೇಕ್ಷಕನಂತೆ ಪೌರಾಡಳಿತ ಸಚಿವ ರಹೀಮ್‌ ಖಾನ್‌ ಮೌನವಹಿಸಿದ್ದಾರೆ. ಭವಿಷ್ಯದಲ್ಲಿ ಇದು ಜಿಲ್ಲೆಯ ಕಾಂಗ್ರೆಸ್‌ ಪಕ್ಷಕ್ಕೆ ಹಾನಿಯುಂಟು ಮಾಡುವ ಸಾಧ್ಯತೆಗಳಿವೆ ಎಂಬಿತ್ಯಾದಿ ಆರೋಪಗಳಿಗೆ ಸ್ಪಂದಿಸಿದ ಡಿಕೆಶಿ, ಜಿಲ್ಲೆಗೆ ವಿಶೇಷ ತಂಡ ಕಳುಹಿಸಿ ಕೊಡುವ ಭರವಸೆ ನೀಡಿದ್ದು, ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿ ಸಮಸ್ಯೆಗಳನ್ನು ಆಲಿಸಿದ್ದಾರೆ ಎಂದು ತಿಳಿಸಿದ್ದಾರೆ.

ಬೀದರ್‌ ಜಿಲ್ಲೆಯಲ್ಲಿ ಕಾಂಗ್ರೆಸ್‌ ಪರಾಜಿತ ಅಭ್ಯರ್ಥಿಗಳಿಗೆ ಯಾವುದೇ ಕಿಮ್ಮತ್ತು ಕೊಡುತ್ತಿಲ್ಲ. ಕಾಂಗ್ರೆಸ್‌ ನಾಯಕರ ಬದಲಿಗೆ ಬಿಜೆಪಿ ಶಾಸಕರ ಕೆಲಸಗಳು ಮಾಡಿಕೊಡುತ್ತಿದ್ದಾರೆ. ಬಿಜೆಪಿ ಶಾಸಕರೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆಂದು, ಹಿರಿಯ ಕಾಂಗ್ರೆಸ್ ನಾಯಕರಿಗೂ ಕಡೆಗಣಿಸಲಾಗುತ್ತಿದೆ ಎಂದು ಸಚಿವ ಈಶ್ವರ ಖಂಡ್ರೆ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ.

ಈಗಾಗಲೇ ಸಚಿವರ ವರ್ತನೆ ವಿರುದ್ಧ ಹಲವು ಬಾರಿ ಸಭೆ ಸೇರಿದ್ದ ರೆಬೆಲ್‌ ನಾಯಕರು, ಕಳೆದ ಸಭೆಯಲ್ಲಿ ಡಿ.ಕೆ.ಶಿವಕುಮಾರ ಅವರನ್ನು ಭೇಟಿ ಮಾಡಿ ಸಮಸ್ಯೆ ಹೇಳಿಕೊಳ್ಳಲು ನಿರ್ಧರಿಸಿದಂತೆ, ಬುಧವಾರ ಡಿಸಿಎಂ ಡಿಕೆಶಿ ಅವರನ್ನು ಭೇಟಿ ಮಾಡಿ ದೂರು ಕೊಟ್ಟಿದ್ದಾರೆ.

ಮಾಜಿ ಸಚಿವ ರಾಜಶೇಖರ ಪಾಟೀಲ್‌ ಅವರ ನೇತೃತ್ವದಲ್ಲಿ ಡಿ.ಕೆ.ಶಿವಕುಮಾರ ಅವರನ್ನು ಭೇಟಿ ಮಾಡಿದ ತಂಡದಲ್ಲಿ ವಿಧಾನ ಪರಿಷತ್‌ ಮಾಜಿ ಸದಸ್ಯ ಅರವಿಂದ ಕುಮಾರ ಅರಳಿ, ಮುಖಂಡರಾದ ಧನರಾಜ ತಾಳಂಪಳ್ಳಿ, ಅಬ್ದುಲ್‌ ಮನ್ನಾನ್‌ ಸೇಠ್‌, ಪಂಡಿತ್‌ ಚಿದ್ರಿ ಸೇರಿದಂತೆ ಮತ್ತಿತರರಿದ್ದರು.