ಸಾರಾಂಶ
ನಗರದ ತಾಲೂಕು ಕಚೇರಿಗೆ ತಾಲೂಕು ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸಮರ್ಪಕ ಬೆಳೆ ಪರಿಹಾರ, ಬರ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಹಿರಿಯೂರು
ಬರ ಪರಿಹಾರ, ಬೆಳೆ ವಿಮೆ ನೀಡಿ, ಬಿತ್ತನೆ ಬೀಜ, ರಸಗೊಬ್ಬರದ ಮೇಲಿನ ಬೆಲೆ ಇಳಿಕೆ ಮಾಡುವಂತೆ ಹಸಿರು ಸೇನೆ ಹಾಗೂ ರೈತ ಸಂಘದ ವತಿಯಿಂದ ತಹಸೀಲ್ದಾರ್ ಕಚೇರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.ಈ ವೇಳೆ ರೈತ ಸಂಘದ ತಾಲೂಕು ಅಧ್ಯಕ್ಷ ಕೆಟಿ ತಿಪ್ಪೇಸ್ವಾಮಿ ಮಾತನಾಡಿ, ತಾಲೂಕು ತೀವ್ರ ಬರಗಾಲಕ್ಕೆ ತುತ್ತಾಗಿ ಅಂತರ್ಜಲ ಮಟ್ಟ ಕುಸಿದಿದೆ. ಹನಿ ನೀರು ಸಿಗದ ಪರಿಸ್ಥಿತಿಯಲ್ಲಿ ಟ್ಯಾಂಕರ್ ಮೂಲಕ ನೀರು ಹಾಯಿಸಿ ಅಡಕೆ ತೋಟ ಹಾಗೂ ಇತರೆ ಬೆಳೆಗಳನ್ನು ಉಳಿಸಲು ರೈತರು ಪರದಾಡುವಂತಾಗಿದೆ. ರೈತರ ಇಂತಹ ಕಷ್ಟ ಕಾಲದಲ್ಲಿ ಸರ್ಕಾರ ಬರ ಪರಿಹಾರ ವಿತರಣೆಯಲ್ಲಿಯೂ ತಾರತಮ್ಯ ಮಾಡಿದೆ ಎಂದರು.
ಕೇಂದ್ರ ಸರ್ಕಾರದಿಂದ ಎನ್‌ಡಿಆರ್‌ಎಫ್ ಮೂಲಕ ಹಣ ಬಿಡುಗಡೆ ಮಾಡಿದರೂ ಸಹ ರಾಜ್ಯ ಸರ್ಕಾರ ಬಿಡುಗಡೆ ವಿಳಂಬ ಮಾಡಿದೆ. ಕೆಲವು ಗ್ರಾಮಗಳಲ್ಲಿ ಕೇವಲ ಏಳೆಂಟು ಜನರಿಗೆ ಮಾತ್ರ ಪರಿಹಾರ ಬಂದಿದ್ದು, ಉಳಿದವರು ಪರಿಹಾರಕ್ಕಾಗಿ ಇನ್ನೂ ಕಾಯುತ್ತಿದ್ದಾರೆ. ಈಗಾಗಲೇ ಬಿತ್ತನೆ ಕಾರ್ಯ ಆರಂಭವಾಗಿದ್ದು, ಕೃಷಿ ಇಲಾಖೆಯಿಂದ ವಿತರಿಸುತ್ತಿರುವ ಬೀಜಗಳ ಬೆಲೆ ದುಬಾರಿಯಾಗಿದ್ದು, ಸರ್ಕಾರ ಮಧ್ಯ ಪ್ರವೇಶಿಸಿ ರೈತರಿಗೆ ಸಬ್ಸಿಡಿಯಲ್ಲಿ ಕಡಿಮೆ ಬೆಲೆಗೆ ಬಿತ್ತನೆ ಬೀಜ ನೀಡಬೇಕೆಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ರೈತ ಮುಖಂಡರಾದ ತಿಮ್ಮಾರೆಡ್ಡಿ, ರಂಗಸ್ವಾಮಿ, ಮೀಸೆ ರಾಮಣ್ಣ, ಕೆಂಚಪ್ಪ, ರಾಜಪ್ಪ, ರಾಮಕೃಷ್ಣ, ಶಿವಣ್ಣ, ಜಯಣ್ಣ, ಜಗದೀಶ್, ಈರಣ್ಣ, ಬಿ ಆರ್ ರಂಗಸ್ವಾಮಿ, ಮೀಸೆ ಗೌಡಪ್ಪ, ತಿಮ್ಮಜ್ಜ, ದೇವೇಂದ್ರಪ್ಪ, ದಾಸಪ್ಪ, ನಾರಾಯಣಪ್ಪ, ವೆಂಕಟೇಶ್ ಮುಂತಾದವರು ಹಾಜರಿದ್ದರು.