ಸಾರಾಂಶ
ಸಮಾಜದಲ್ಲಿ ಇನ್ನೂ ಅನೇಕ ಸಮುದಾಯಗಳು ಹೊರಗಿಡುವಿಕೆಯಂತಹ ಪರಕೀಯವಾದ ವಿಚಾರವನ್ನು ಅನುಭವಿಸುತ್ತಲೇ ಬರುತ್ತಿವೆ ಎಂದು ಸಾಹಿತಿ ಡಾ। ಭಾರತೀದೇವಿ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಸಮಾಜದಲ್ಲಿ ಇನ್ನೂ ಅನೇಕ ಸಮುದಾಯಗಳು ಹೊರಗಿಡುವಿಕೆಯಂತಹ ಪರಕೀಯವಾದ ವಿಚಾರವನ್ನು ಅನುಭವಿಸುತ್ತಲೇ ಬರುತ್ತಿವೆ ಎಂದು ಸಾಹಿತಿ ಡಾ। ಭಾರತೀದೇವಿ ಅಭಿಪ್ರಾಯಪಟ್ಟರು.ನಗರದ ಆರ್.ಸಿ.ಕಾಲೇಜಿನಲ್ಲಿ ಆಯೋಜಿಸಿದ್ದ ಉಪನ್ಯಾಸಕ ಡಾ। ರಿಯಾಜ್ ಪಾಷಾ ಅವರ ‘ನಿಮ್ಮೊಡನಿದ್ದೂ...’ ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಇಂದು ಎಲ್ಲರನ್ನೂ ಸಮಾನವಾಗಿ ಕಾಣುತ್ತಿಲ್ಲ. ಭೇದ-ಭಾವದಿಂದ ನೋಡಲಾಗುತ್ತಿದೆ. ಬುಡಕಟ್ಟು ಜನರು, ತಳ ಸಮುದಾಯ, ದಲಿತರು, ಅಲ್ಪಸಂಖ್ಯಾತರು ಇದನ್ನು ಅನುಭವಿಸುತ್ತಲೇ ಬರುತ್ತಿದ್ದಾರೆ. ಈ ಸಂಗತಿ ಡಾ.ರಿಯಾಜ್ ಅವರನ್ನು ಮತ್ತೆ ಕಾಡಿರುದರಿಂದಲೇ ಕೃತಿ ಹೊರಬಂದಿದೆ ಎಂದರು.
‘ನಿಮ್ಮೊಡನಿದ್ದೂ’ ಎಂಬುದು ಕವಿ ಡಾ.ನಿಸಾರ್ ಅಹಮದ್ ಅವರ ಕಾವ್ಯವೊಂದರ ಮೊದಲ ಸಾಲಾಗಿದೆ. ಇದು ಒಂದು ರೂಪಕವಾಗಿ ನಮ್ಮನ್ನು ಮತ್ತೆ ಮತ್ತೆ ಕಾಡುತ್ತಾ ವಿಚಿತ್ರ ಅಪರಾಧಿ ಪ್ರಜ್ಞೆಯನ್ನು ಹುಟ್ಟಿಸುತ್ತಾ ಇಂದಿನವರೆಗೂ ಬೆಳೆದುಕೊಂಡು ಬಂದಿದೆ. ಸಮಾನತೆ ಎಂಬುದು ಸಮಾಜದಲ್ಲಿ ಕಾಣದಂತಾಗಿದೆ. ಜಾತಿ ಆಧರಿಸಿ ಹೊರಗಿಡುವ ವಿಚಾರ ಇನ್ನೂ ಮುಂದುವರೆದಿದೆ ಎಂದು ವಿಷಾದಿಸಿದರು.ಅಧ್ಯಕ್ಷತೆ ವಹಿಸಿದ್ದ ವಿಮರ್ಶಕ ಡಾ.ಬಸವರಾಜ ಕಲ್ಗುಡಿ ಮಾತನಾಡಿ, ರಿಯಾಜ್ ಎಂದರೆ ಸಂಗೀತ ಕ್ಷೇತ್ರದಲ್ಲಿ ಅಭ್ಯಾಸ ಎಂದಷ್ಟೇ ಅಲ್ಲ, ಪರ್ಷಿಯನ್ ಭಾಷೆಯಲ್ಲಿ ಉದ್ಯಾನವನ ಎನ್ನುವ ಅರ್ಥವೂ ಇದೆ. ರಿಯಾಜ್ ಅವರು ಈ ಕೃತಿಯ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಬಗೆಯ ಚಿಂತನೆ, ಅಧ್ಯಯನ ನಡೆಸಿದ್ದಾರೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಕಾರ್ಯದರ್ಶಿ ಡಾ.ವೆಂಕಟೇಶ್ ನೆಲ್ಲುಕುಂಟೆ, ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಡಾ.ಎಸ್.ಬಾಲಾಜಿ, ಅನ್ನಪೂರ್ಣ ಪಬ್ಲಿಷಿಂಗ್ ಹೌಸ್‌ನ ಸುರೇಶ್ ಉಪಸ್ಥಿತರಿದ್ದರು.