ಸಾರಾಂಶ
ಕನ್ನಡಪ್ರಭವಾರ್ತೆ ಹಾಸನ
ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯ ಪ್ರಥಮ ದರ್ಜೆ ಸಹಾಯಕ ಬಿ.ಎಚ್.ಮಂಜುನಾಥ ವಿರುದ್ಧ ಅಸ್ಪೃಶ್ಯತೆ ದೌರ್ಜನ್ಯ ತಡೆ ಕಾಯಿದೆ ಅನ್ವಯ ದೂರು ದಾಖಲಾಗಿರುವುದರಿಂದ ಇವರನ್ನು ಬಂಧಿಸುವಂತೆ ಹಾಗೂ ಸೇವೆಯಿಂದ ಅಮಾನತು ಮಾಡಬೇಕೆಂದು ದಲಿತ ಜನಪರ ಚಳವಳಿಗಳ ಒಕ್ಕೂಟದ ಧರ್ಮೇಶ್ ಮತ್ತು ಎಚ್. ಕೆ. ಸಂದೇಶ್ ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಅರಕಲಗೂಡಿನ ಎಂ.ಪಿ.ರಂಗಸ್ವಾಮಿಯವರು ಎಂ.ಎಂ.ಆರ್. ವಿದ್ಯಾಸಂಸ್ಥೆಯ ಕಾರ್ಯದರ್ಶಿಯಾಗಿದ್ದು, ಇವರು ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿರುತ್ತಾರೆ. ಈ ವಿದ್ಯಾಸಂಸ್ಥೆಯ ಅಡಿಯಲ್ಲಿ ನ್ಯಾಷನಲ್ ಹೆರೊಡೆಟಸ್ ಆಂಗ್ಲ ಮಾಧ್ಯಮ ಶಾಲೆಯನ್ನು ಅರಕಲಗೂಡು ಪಟ್ಟಣದಲ್ಲಿ ಸ್ಥಾಪಿಸಿದ್ದು ಇದುವರೆಗೂ ನಡೆಯುತ್ತಿದೆ. ಈ ಶಾಲೆಯ ಮಾನ್ಯತೆ ನವೀಕರಣಕ್ಕೆ ಹಾಗೂ ಆರ್.ಟಿ.ಇ. ಅನುದಾನ ಬಿಡುಗಡೆ ಮಾಡುವ ಸಂಬಂಧವಾಗಿ ಜ.9ರಂದು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯ ಪ್ರಥಮ ದರ್ಜೆ ಸಹಾಯಕರಾದ ಬಿ.ಎಚ್. ಮಂಜುನಾಥ ಅವರನ್ನು ಭೇಟಿ ಮಾಡಿ ವಿಚಾರಿಸಿದಾಗ ಬಿ.ಎಚ್. ಮಂಜುನಾಥರವರು ಎಂ.ಪಿ, ರಂಗಸ್ವಾಮಿಯವರನ್ನು ಜಾತಿ ಹೆಸರಿನಡಿ ನಿಂದಿಸಿ, ಹೆದರಿಸಿ, ಕೊಲೆ ಬೆದರಿಕೆ ಹಾಕಿ ಜೀವ ಭಯವನ್ನು ಹುಟ್ಟಿಸಿರುತ್ತಾರೆ ಎಂದರು.
ಬಿ.ಎಚ್. ಮಂಜುನಾಥರವರಿಂದ ದೌರ್ಜನ್ಯಕ್ಕೆ ಒಳಗಾಗಿರುವ ಎಂ.ಪಿ. ರಂಗಸ್ವಾಮಿಯವರು ಹಾಸನ ನಗರ ಠಾಣೆಯಲ್ಲಿ ಅಸ್ಪೃಶ್ಯತೆ ದೌರ್ಜನ್ಯ ತಡೆ ಕಾಯಿದೆ ಪ್ರಕಾರ ದೂರು ದಾಖಲಿಸಿದ್ದು ಬಿ.ಎಚ್. ಮಂಜುನಾಥರವರ ಮೇಲೆ ಎಫ್.ಐ.ಆರ್. ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಕೂಡಲೇ ಬಂಧಿಸಬೇಕೆಂದು ಪೊಲೀಸ್ ಇಲಾಖೆಯನ್ನು ಆಗ್ರಹಿಸುತ್ತೇವೆ. ಹಾಗೂ ಅಸ್ಪೃಶ್ಯತೆ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿರುವ ಕಾರಣ ಬಿ.ಎಚ್. ಮಂಜುನಾಥ ಅವರನ್ನು ಸೇವೆಯಿಂದ ಕೂಡಲೇ ಅಮಾನತು ಮಾಡುವಂತೆ ಜಿಲ್ಲಾಡಳಿತ ಹಾಗೂ ಸರ್ಕಾರವನ್ನು ಹಾಸನ ಜಿಲ್ಲಾ ದಲಿತ ಮತ್ತು ಜನಪರ ಚಳುವಳಿಗಳ ಒಕ್ಕೂಟವು ಆಗ್ರಹಿಸುತ್ತದೆ ಎಂದು ಹೇಳಿದರು.ನ್ಯಾಷನಲ್ ಹೆರೊಡೆಟಸ್ ಆಂಗ್ಲ ಮಾಧ್ಯಮ ಶಾಲೆಯು ಶಿಕ್ಷಣ ಇಲಾಖೆಯಿಂದಲೇ ಅನುಮತಿ ಪಡೆದು ನಡೆಯುತ್ತಿದೆ. ಅರಕಲಗೂಡು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಯ ಮಾನ್ಯತೆ ನವೀಕರಣಕ್ಕೆ ಶಿಫಾರಸು ಮಾಡಿದ್ದರೂ ಸಹ ದಲಿತ ಸಮುದಾಯದ ಶಾಲೆಗೆ ಇಲ್ಲ ಸಲ್ಲದ ಸಬೂಬು ಹೇಳಿ ಬಿ.ಎಚ್. ಮಂಜುನಾಥರವರು ಉದ್ದೇಶಪೂರ್ವಕವಾಗಿ ಕೊಡಬೇಕೆನ್ನುವ ಉದ್ದೇಶದಿಂದ ಮಾನ್ಯತೆ ನವೀಕರಿಸದೇ ಮತ್ತು ಆರ್.ಟಿ.ಇ ಅನುದಾನ ಬಿಡುಗಡೆ ಮಾಡದೇ ತಪ್ಪು ಮಾಹಿತಿ ನೀಡಿ ತೊಂದರೆ ನೀಡುತ್ತಿದ್ದಾರೆ. ನಿನ್ನ ಕೆಲಸ ಮಾಡಿಕೊಡಬೇಕಾದರೆ ನನಗೆ ೫೦ ಸಾವಿರರು. ಕೊಡಬೇಕೆಂದು ಎಂ.ಪಿ. ರಂಗಸ್ವಾಮಿಯವರಿಂದ ಬಲವಂತವಾಗಿ ಹಣವನ್ನು ಪಡೆದರೂ ಸಹ ಕೆಲಸ ಮಾಡಿಕೊಟ್ಟಿರುವುದಿಲ್ಲ. ನಳಂದ ಶಾಲೆಯಲ್ಲಿ ದಲಿತ ಸಮುದಾಯಕ್ಕೆ ಸೇರಿದ ಸಾಲಿ ಎಂಬ ಶಿಕ್ಷಕರನ್ನು ಆಡಳಿತ ಮಂಡಳಿಯು ವಜಾ ಮಾಡಿದ ಸಂದರ್ಭದಲ್ಲಿ ಇದೇ ಮಂಜುನಾಥ ಆಡಳಿತ ಮಂಡಳಿಯ ಬೆಂಬಲಕ್ಕೆ ನಿಂತು ಸಾಲಿ ಕುಟುಂಬವನ್ನು ಬೀದಿಪಾಲು ಮಾಡಲು ಇವರೇ ಕಾರಣರಾಗುತ್ತಾರೆ ಎಂದು ದೂರಿದರು. ಸಾಲಿಯವರಿಗೆ ದ.ಸಂ.ಸ.ದ ಹಿರಿಯ ನಾಯಕರಾದ ಎಚ್.ಕೆ. ಸಂದೇಶ್‌ರವರು ಸರ್ಕಾರದ ಮಟ್ಟದಲ್ಲಿ ಹೋರಾಟ ಮಾಡಿ ನ್ಯಾಯ ದೊರಕಿಸಿ ಕೊಟ್ಟಿದ್ದಾರೆ.ಬಿ.ಎಚ್. ಮಂಜುನಾಥ ಕಳೆದ 22 ವರ್ಷಗಳಿಂದ ಒಂದೇ ಕಚೇರಿಯಲ್ಲಿ ಹಾಗೂ ಖಾಸಗಿ ಶಾಲೆಗಳ ನಿರ್ವಹಣೆ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ವಿರುದ್ಧ ವ್ಯಾಪಕವಾದ ಭ್ರಷ್ಟಾಚಾರದ ದೂರುಗಳು ಇವೆ. ಇವರು ಹೇಳಿದಂತೆ ಕೇಳುವ ಶಾಲೆಗಳಿಗೆ ಧಾರಾಳವಾಗಿ ಅನುದಾನ ಬಿಡುಗಡೆ ಮಾಡಿಸುವ ಈತ ಪ್ರಶ್ನಿಸುವ ಶಾಲೆಗಳಿಗೆ ಇನ್ನಿಲ್ಲದ ಕಿರುಕುಳ ನೀಡುತ್ತಾರೆ. ಈತನಿಗೆ ಪುನಃ ಖಾಸಗಿ ಶಾಲೆಗಳ ನಿರ್ವಹಣೆ ವಿಭಾಗ ಕೊಡಲಿಲ್ಲ ಎಂಬ ಕಾರಣಕ್ಕೆ ಇಲಾಖೆ ಉಪ ನಿರ್ದೇಶಕರು ಮತ್ತು ಅಧೀಕ್ಷಕರ ವಿರುದ್ಧವೇ ಪಿತೂರಿ ನಡೆಸಿದ್ದಾನೆ ಎಂದು ಇಲಾಖೆಯಲ್ಲಿ ನೌಕರರು ಮಾತನಾಡಿಕೊಳ್ಳುತ್ತಿದ್ದಾರೆ. ಬಿ.ಎಚ್. ಮಂಜುನಾಥ ಇಲಾಖೆಯಲ್ಲಿ ಅತಿದೊಡ್ಡ ಭ್ರಷ್ಟನೆಂದು ಕುಖ್ಯಾತಿ ಇದೆ. ಈತನ ವಿರುದ್ಧ ಲಂಚದ ಆರೋಪ ಇದೆ. ದಲಿತರಿಗೆ ಅವಮಾನ ಮಾಡಿದ್ದಾನೆ. ದಲಿತ ವಿರೋಧಿ ಹಾಗೂ ಭ್ರಷ್ಟ ನೌಕರ ಬಿ.ಎಚ್.ಮಂಜುನಾಥ ಇವರನ್ನು ಕೂಡಲೇ ಬಂಧಿಸಿ, ಸೇವೆಯಿಂದ ಅಮಾನತ್ತು ಮಾಡದಿದ್ದರೆ ದಲಿತ ಮತ್ತು ಜನಪರ ಚಳವಳಿಗಳ ಒಕ್ಕೂಟವು ಹೋರಾಟವನ್ನು ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಪತ್ರಿಕಾಗೋಷ್ಠಿಯಲ್ಲಿ ದಲಿತ ಜನಪರ ಚಳವಳಿಗಳ ಒಕ್ಕುಟದ ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಟಿ.ಆರ್. ವಿಜಯಕುಮಾರ್, ಶಾಲೆಯ ಮುಖ್ಯಸ್ಥ ರಂಗಸ್ವಾಮಿ, ಎಂ.ಜಿ. ಪೃಥ್ವಿ, ಇತರರು ಉಪಸ್ಥಿತರಿದ್ದರು.