ಜನ್ನಾಪುರ ಚಿಕ್ಕಕಣಗಾಲು ಶಾಲೆಗಳಿಗೆ ಆರ್ಥಿಕ ನೆರವು

| Published : Sep 24 2024, 01:54 AM IST

ಸಾರಾಂಶ

ಚಿಕ್ಕಕಣಗಾಲು ಹಾಲಿನ ಡೇರಿ ಅಧ್ಯಕ್ಷ ಶಿವಣ್ಣ ಮಾತನಾಡಿ, ನಮ್ಮ ಹಾಲು ಉತ್ಪಾದಕರ ಸಂಘದ ಆಡಳಿತ ಮಂಡಳಿ ರೈತರ ಸಹಕಾರದಿಂದ 2023-24ನೇ ಸಾಲಿನಲ್ಲಿ 1.40 ಕೋಟಿ ವ್ಯವಹಾರ ನಡೆದು, 2.83 ಲಕ್ಷ ಲಾಭಾಂಶ ಬಂದಿದೆ. ಎಲ್ಲಾ ನಿರ್ದೇಶಕರ ಸಹಮತದೊಂದಿಗೆ ಜನ್ನಾಪುರ ಹಾಗೂ ಚಿಕ್ಕಕಣಗಾಲು ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತಲಾ 5,000 ಗಳಂತೆ 10,000ಗಳನ್ನು ಆರ್ಥಿಕ ಸಹಾಯ ನೀಡಲಾಗಿದೆ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಆಲೂರು

ತಾಲೂಕಿನ ಪಾಳ್ಯ ಹೋಬಳಿಯ ಚಿಕ್ಕಕಣಗಾಲು ಹಾಲು ಉತ್ಪಾದಕರ ಸಹಕಾರ ಸಂಘದ 2023-2024ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಸಂಘದ ಅಧ್ಯಕ್ಷ ಟಿ.ಕೆ ಶಿವಣ್ಣ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.

ಚಿಕ್ಕಕಣಗಾಲು ಹಾಲಿನ ಡೇರಿ ಅಧ್ಯಕ್ಷ ಶಿವಣ್ಣ ಮಾತನಾಡಿ, ನಮ್ಮ ಹಾಲು ಉತ್ಪಾದಕರ ಸಂಘದ ಆಡಳಿತ ಮಂಡಳಿ ರೈತರ ಸಹಕಾರದಿಂದ 2023-24ನೇ ಸಾಲಿನಲ್ಲಿ 1.40 ಕೋಟಿ ವ್ಯವಹಾರ ನಡೆದು, 2.83 ಲಕ್ಷ ಲಾಭಾಂಶ ಬಂದಿದೆ. ಎಲ್ಲಾ ನಿರ್ದೇಶಕರ ಸಹಮತದೊಂದಿಗೆ ಜನ್ನಾಪುರ ಹಾಗೂ ಚಿಕ್ಕಕಣಗಾಲು ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತಲಾ 5,000 ಗಳಂತೆ 10,000ಗಳನ್ನು ಆರ್ಥಿಕ ಸಹಾಯ ನೀಡಲಾಗಿದೆ ಎಂದು ತಿಳಿಸಿದರು.

ಹಾಸನ ಹಾಲು ಉತ್ಪಾದಕರ ಸಹಕಾರ ಸಂಘದ ಜಿಲ್ಲಾ ನಿರ್ದೇಶಕ ಪಿ.ಎಲ್ ಲಿಂಗರಾಜು ಮಾತನಾಡಿ, ಹಾಲು ಉತ್ಪಾದನೆಯಲ್ಲಿ ನಮ್ಮ ದೇಶ ಪ್ರಪಂಚದಲ್ಲಿಯೇ ಮೊದಲ ಸ್ಥಾನದಲ್ಲಿದ್ದರೂ, ಹಾಲಿನ ಗುಣಮಟ್ಟ ಕಾಪಾಡಿಕೊಳ್ಳುವಲ್ಲಿ ಹಿಂದೆ ಬಿದ್ದಿದೆ. ಆದ್ದರಿಂದ ಹಾಲಿನ ಗುಣಮಟ್ಟವನ್ನು ಕಾಯ್ದುಕೊಳ್ಳುವಲ್ಲಿ ಎಲ್ಲಾ ಸದಸ್ಯರ ಸಹಕಾರ ಅಗತ್ಯವಿದೆ ಎಂದ ಅವರು, ಚಿಕ್ಕಕಣಗಾಲು ಹಾಲು ಉತ್ಪಾದಕರ ಸಂಘವು ವರ್ಷದಿಂದ ವರ್ಷಕ್ಕೆ ಸದಸ್ಯರ ಸಹಕಾರದಿಂದ ಅಭಿವೃದ್ಧಿಯಲ್ಲಿ ಸಾಗುತ್ತಿರುವುದು ಸಂತೋಷದಾಯಕ ವಿಚಾರವಾಗಿದೆ. ಮುಂದಿನ ದಿನಗಳಲ್ಲಿ ಸಂಘದ ಏಳಿಗೆಗಾಗಿ ಮತ್ತು ಹಾಲು ಉತ್ಪಾದನೆಯಲ್ಲಿ ಗಣನೀಯ ಪ್ರಮಾಣದ ಸಾಧನೆಯನ್ನು ಮಾಡಲು ಪ್ರೋತ್ಸಾಹ ನೀಡುತ್ತೇನೆ ಎಂದು ತಿಳಿಸಿದರು.

ಹಾಸನ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಪುಟ್ಟರಾಜು ಮಾತನಾಡಿ, ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ನಡೆದಿರುವ ಲಾಭ, ನಷ್ಟಗಳನ್ನು ಸಂಘದ ಸದಸ್ಯರಿಗೆ ತಿಳಿಸಲು ಪ್ರತಿ ವರ್ಷ ಸದಸ್ಯರ ಸಭೆ ನಡೆಸಲಾಗುತ್ತದೆ. ಸಂಘವು ಪ್ರಸಕ್ತ ಸಾಲಿನಲ್ಲಿ ಒಂದು ಕೋಟಿ ರುಪಾಯಿಗೂ ಹೆಚ್ಚು ವ್ಯವಹಾರ ನಡೆಸಿರುವುದು ಆಡಿಟ್ ವರದಿಯಲ್ಲಿ ತಿಳಿದು ಬಂದಿದೆ. ಇದಕ್ಕೆ ಮುಖ್ಯ ಕಾರಣ ಎಲ್ಲರ ಸಹಕಾರ ಎಂದು ತಿಳಿಸಿದ ಅವರು, ಉತ್ತಮ ಗುಣಮಟ್ಟದ ಹಾಲಿಗೆ ಸದ್ಯದಲ್ಲೇ ಅತಿ ಹೆಚ್ಚು ಬೆಲೆ ಸಿಗಲಿದೆ ಇದು ಜಿಲ್ಲೆಯ ಎಲ್ಲಾ ಡೇರಿಗಳಲ್ಲೂ ಮುಂದುವರಿಯಲಿದೆ, ಉತ್ತಮ ಗುಣಮಟ್ಟದ ಹಾಲನ್ನು ಪೂರೈಕೆ ಮಾಡುವುದರಿಂದ ಬಂದ ಲಾಭಾಂಶವನ್ನು ಪಡೆಯಬಹುದು ಎಂದು ತಿಳಿಸಿದರು.

ಸಭೆಯಲ್ಲಿ ನಿರ್ದೇಶಕರುಗಳಾದ ಸುಧಾ ಬಸವರಾಜು, ಜ್ಞಾನ ಪ್ರಕಾಶ್, ರಾಯಪ್ಪ, ಫ್ರಾನ್ಸಿಸ್, ಮಹೇಶ್ವರಯ್ಯ, ಪರಮೇಶ್, ನಾಗೇಶ್, ಧರ್ಮ, ರವಿಪ್ರಕಾಶ್, ಮಾಜಿ ಅಧ್ಯಕ್ಷ ಅಣ್ಣಪ್ಪ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಚಂದ್ರ, ಮುಖಂಡ ಮರಿಯಪ್ಪ, ಚಿಕ್ಕಕಣಗಾಲು ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ನಾಗರಾಜ್, ಹಾಲು ಪರೀಕ್ಷಕರಾದ ರಾಜಶೇಖರ್‌, ಚಂದನ್ ಹಾಗೂ ಮುಂತಾದವರು ಹಾಜರಿದ್ದರು.