‘ಗರಡಿ’ ಚಿತ್ರದ ಟ್ರೇಲರ್ ಬಿಡುಗಡೆ

| Published : Nov 02 2023, 01:00 AM IST

ಸಾರಾಂಶ

ಮಾಜಿ ಸಚಿವ ಬಿ.ಸಿ. ಪಾಟೀಲ ನಿರ್ಮಾಣದ ಕೌರವ ಪ್ರೊಡಕ್ಷನ್ ಆಶ್ರಯದಲ್ಲಿ ತಯಾರಾಗಿರುವ ‘ಗರಡಿ’ ಚಲನಚಿತ್ರದ ಟ್ರೇಲರ್‌ ಅನ್ನು ನಗರದ ನಗರಸಭೆ ಕ್ರೀಡಾಂಗಣದಲ್ಲಿ ಬುಧವಾರ ಕರ್ನಾಟಕ ರಾಜ್ಯೋತ್ಸವದಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆಗೊಳಿಸಿದರು.

ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು

ಮಾಜಿ ಸಚಿವ ಬಿ.ಸಿ. ಪಾಟೀಲ ನಿರ್ಮಾಣದ ಕೌರವ ಪ್ರೊಡಕ್ಷನ್ ಆಶ್ರಯದಲ್ಲಿ ತಯಾರಾಗಿರುವ ‘ಗರಡಿ’ ಚಲನಚಿತ್ರದ ಟ್ರೇಲರ್‌ ಅನ್ನು ನಗರದ ನಗರಸಭೆ ಕ್ರೀಡಾಂಗಣದಲ್ಲಿ ಬುಧವಾರ ಕರ್ನಾಟಕ ರಾಜ್ಯೋತ್ಸವದಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆಗೊಳಿಸಿದರು.

ಬಳಿದ ಮಾತನಾಡಿದ ಚಿತ್ರನಟ ದರ್ಶನ್, ನಿರ್ದೇಶಕ ಯೋಗರಾಜ್ ಭಟ್ ಇದುವರೆಗೂ ಮಾಡಿದ ಸಿನಿಮಾಗಳಿಗಿಂತ ವಿಭಿನ್ನ ಚಿತ್ರ ಇದಾಗಿದೆ. ಯುವ ಕಲಾವಿದರು ಜೀವನದಲ್ಲಿ ತಾಳ್ಮೆ ಇಟ್ಟುಕೊಳ್ಳಬೇಕು. ಎಲ್ಲರಿಗೂ ಟೈಮ್ ಬಂದೇ ಬರುತ್ತದೆ. ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಗರಡಿ ಚಿತ್ರದಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿದಂತೆ ಮುಂದೆಯೂ ಹೊಸ ಪ್ರತಿಭೆಗಳಿಗೆ ಕೌರವ ಪ್ರೊಡಕ್ಷನ್‌ನಲ್ಲಿ ಅವಕಾಶ ಸಿಗಲಿ. ಉತ್ತರ ಕರ್ನಾಟಕ ಜನರು ಕಲಾವಿದರನ್ನು ಪ್ರೋತ್ಸಾಹಿಸಿ, ಬೆಳೆಸಿ ಎಂದು ಮನವಿ ಮಾಡಿದರು.

ಮಾಜಿ ಸಚಿವ ಬಿ.ಸಿ. ಪಾಟೀಲ ಮಾತನಾಡಿ, ಚಿತ್ರನಟ ದರ್ಶನ್ ಆಸೆಯಂತೆ ಟ್ರೈಲರ್ ಬಿಡುಗಡೆ ಸಮಾರಂಭವನ್ನು ಉತ್ತರ ಕರ್ನಾಟಕದ ಹೆಬ್ಬಾಗಿಲು ರಾಣಿಬೆನ್ನೂರಿನಲ್ಲಿ ಆಯೋಜಿಸಲಾಗಿದೆ. ನ.10ರಂದು ರಾಜ್ಯಾದ್ಯಂತ ಬಹು ನಿರೀಕ್ಷಿತ ‘ಗರಡಿ’ ಚಲನಚಿತ್ರವು ಏಕಕಾಲಕ್ಕೆ ಬಿಡುಗಡೆಯಾಗಲಿದ್ದು, ಉತ್ತಮ ಫಲಿತಾಂಶ ಅಭಿಮಾನಿಗಳಿಂದ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚಿತ್ರದ ನಿರ್ದೇಶಕ ಯೋಗರಾಜ ಭಟ್ ಮಾತನಾಡಿ, ಬೆಂಗಳೂರು ಸೇರಿದಂತೆ ಉತ್ತರ ಕರ್ನಾಟಕದ ಬಾದಾಮಿಯಲ್ಲಿ ಚಿತ್ರಿಸಲಾಗಿದೆ. ಕೇವಲ ಒಂದೂವರೇ ವರ್ಷಗಳ ಅವಧಿಯಲ್ಲಿ ಚಿತ್ರೀಕರಣ ಪೂರ್ಣಗೊಳಿಸಲಾಗಿದೆ ಎಂದರು.

ಚಿತ್ರದ ಕಾರ್ಯಕಾರಿ ನಿರ್ಮಾಪಕಿ ಸೃಷ್ಟಿ ಪಾಟೀಲ ಮಾತನಾಡಿ, ಗರಡಿ ಚಿತ್ರದ ನಿಜವಾದ ಬೆನ್ನೆಲುಬು ದರ್ಶನ್. ಅವರನ್ನು ನಾನು ಪ್ರೀತಿಯಿಂದ ಅಣ್ಣ ಎಂದು ಕರೆಯುತ್ತೇನೆ. ಕೌರವ ಪ್ರೊಡಕ್ಷನ್ ಹೌಸ್ ಅಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಗರಡಿ 18ನೇ ಚಲನಚಿತ್ರ. ಸಂಸ್ಥೆ ವತಿಯಿಂದ ಈ ಹಿಂದೆ ನಿರ್ಮಿಸಿದ ಚಿತ್ರಗಳಿಗೆ ಆಶೀರ್ವದಿಸಿದಂತೆ ಈ ಚಿತ್ರವನ್ನು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.

ವಿಶೇಷ ಪಾತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಮಾಜಿ ಸಚಿವ ಬಿ.ಸಿ. ಪಾಟೀಲ ನಟಿಸಿದ್ದಾರೆ. ಯಶಸ್ ಸೂರ್ಯ, ಸುಜಯ್ ಬೇಲೂರು ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ವಿಕಟ ಕವಿ ಯೋಗರಾಜ್ ಭಟ್ ನಿರ್ದೇಶಿಸಿ, ಸಾಹಿತ್ಯ ಮತ್ತು ಸಂಭಾಷಣೆ ಬರೆದಿದ್ದಾರೆ. ವಿ.ಹರಿಕೃಷ್ಣ ಸಂಗೀತ ಚಿತ್ರಕ್ಕಿದ್ದು, ಮೂರು ಹಾಡುಗಳು ಕೇಳುಗರ ಗಮನ ಸೆಳೆಯಲಿವೆ ಎಂದರು.

ಗರಡಿ ಟ್ರೈಲರ್ ಬಿಡುಗಡೆ ಅಂಗವಾಗಿ ಸಾಂಸ್ಕೃತಿಕ ಸಂಜೆ ಮನರಂಜನಾ ಕಾರ್ಯಕ್ರಮ ನಡೆದವು. ರಾಜ್ಯೋತ್ಸವದ ನಿಮಿತ್ತ ಕನ್ನಡಪರ ಗೀತೆಗಳು, ಡಾ. ರಾಜಕುಮಾರ್, ವಿಷ್ಣುವರ್ಧನ್, ''''ಕೌರವ'''' ಬಿ.ಸಿ. ಪಾಟೀಲ, ದರ್ಶನ್ ಅವರ ಚಿತ್ರಗಳ ಗೀತೆಗಳಿಗೆ ಕಲಾವಿದರು ನೃತ್ಯ ಮಾಡಿ ಪ್ರೇಕ್ಷಕರನ್ನು ರಂಜಿಸಿದರು.

ನಾಯಕ ನಟ ಯಶಸ್ ಸೂರ್ಯ ಮತ್ತು ನಾಯಕಿ ಸೋನಲ್ ಮಂಥೆರೊ ಮಾತನಾಡಿ, ನಮ್ಮ ವೃತ್ತಿ ಜೀವನದಲ್ಲಿ ಗರಡಿ ಚಿತ್ರ ದೊಡ್ಡ ತಿರುವು ನೀಡಲಿದೆ ಎಂದು ಸಂತಸ ಹಂಚಿಕೊಂಡರು.

ನಟಿ ನಿಶ್ವಿಕಾ ನಾಯ್ಡು ಮಾತನಾಡಿ, ಚಿತ್ರದಲ್ಲಿ ಒಂದು ಹಾಡಿಗೆ ನೃತ್ಯ ಮಾಡಿದ್ದು, ಆ ಹಾಡು ಪ್ರೇಕ್ಷಕರ ಮನಗೆದ್ದಿರುವುದು ಸಂತಸ ತಂದಿದೆ ಎಂದರು.

ಉತ್ತರ ಕರ್ನಾಟಕದ ಪೈಲ್ವಾನರುಗಳನ್ನು ಬಿ.ಸಿ. ಪಾಟೀಲ ಸನ್ಮಾನಿಸಿದರು.

ಪ್ರೇಕ್ಷಕರಿಂದ ‘ಡಿ ಬಾಸ್’ ಹರ್ಷೋದ್ಘಾರ:

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಕಾಣಲು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರು ‘ಡಿ ಬಾಸ್, ಡಿ ಬಾಸ್’ ಎಂದು ಹರ್ಷೋದ್ಘಾರ ಹಾಕಿದರು.

ಇದೇ ಮೊದಲ ಬಾರಿಗೆ ಚಲನಚಿತ್ರವೊಂದರ ಟ್ರೈಲರ್ ಅನ್ನು ರಾಣಿಬೆನ್ನೂರಲ್ಲಿ ಬಿಡುಗಡೆಗೊಳಿಸಿದ್ದರಿಂದ ಈ ವರ್ಣರಂಜಿತ ಕಾರ್ಯಕ್ರಮವನ್ನು ಪ್ರೇಕ್ಷಕರು ಕಣ್ತುಂಬಿಕೊಂಡರು. ಕಲಾವಿದರ ನೃತ್ಯರೂಪಕಗಳಿಗೆ ಚಪ್ಪಾಳೆ, ಶಿಳ್ಳೆಗಳ ಸುರಿಮಳೆಗೈದರು.