ಎ.ನಾರಾಯಣಸ್ವಾಮಿ, ಕಾರಜೋಳ ವಿರುದ್ಧ ಗೋ ಬ್ಯಾಕ್ ಚಳವಳಿ

| Published : Mar 24 2024, 01:37 AM IST

ಸಾರಾಂಶ

ಚಿತ್ರದುರ್ಗದಲ್ಲಿ ಎ.ನಾರಾಯಣಸ್ವಾಮಿ, ಗೋವಿಂದ ಕಾರಜೋಳ ಅವರಗಳ ವಿರುದ್ಧ ಗೋ ಬ್ಯಾಕ್ ಚಳವಳಿ ನಡೆಸಿದ ರಘುಚಂದನ್ ಬೆಂಬಲಿಗರು ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭವಾರ್ತೆ, ಚಿತ್ರದುರ್ಗ

ಚಿಕ್ಕಮಗಳೂರಿನಲ್ಲಿ ಸಚಿವ ಶೋಭಾ ಕರಂದ್ಲಾಜೆ ವಿರುದ್ಧ ನಡೆಸಿದ ಗೋ ಬ್ಯಾಕ್ ಚಳವಳಿ ಮಾದರಿಯಲ್ಲಿ ಶನಿವಾರ ಚಿತ್ರದುರ್ಗದಲ್ಲಿ ಪ್ರತಿಭಟನೆಗಳು ನಡೆದಿದ್ದು, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹಾಗೂ ಬಿಜೆಪಿ ಟಿಕೆಟ್ ಆಕಾಂಕ್ಷಿ ಮಾಜಿ ಸಚಿವ ಗೋವಿಂದ ಕಾರಜೋಳ ವಿರುದ್ಧ ಬಿಜೆಪಿ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದರು. ಹೊರಗಿನವರಿಗೆ ಮಣೆ ಹಾಕಿದ್ದು ಸಾಕು, ಸ್ಥಳೀಯರಿಗೆ ಟಿಕೆಟ್ ಕೊಡಿ ಎಂದು ಪ್ರತಿಭಟನಾಕಾರರು ಹಕ್ಕೊತ್ತಾಯ ಮಂಡಿಸಿದರು.

ನಮಗೆ ಸ್ಥಳೀಯರು ಬೇಕು ಹೊರಗಿನವರು ಬೇಡ, ನಮ್ಮ ಕಷ್ಟ ಕೇಳುವವರು ನಮ್ಮನ್ನು ಪ್ರತಿನಿಧಿಸಬೇಕು. ಎಲ್ಲಿಂದಲೋ ಬಂದವರ ಗೆಲ್ಲಿಸಿ ಕಳಿಸಲು ಚಿತ್ರದುರ್ಗ ಕ್ಷೇತ್ರ ಗುಲಾಮಗಿರಿಗೆ ಒಳಪಟ್ಟಿಲ್ಲ. ಕಳೆದ ಎಲ್ಲಾ ಚುನಾವಣೆಗಳಲ್ಲಿ ಬೇರೆ ಜಿಲ್ಲೆಗಳಿಂದ ಬಂದ ಅಭ್ಯರ್ಥಿಗಳನ್ನು ನಮ್ಮ ಮನೆಯ ಮಕ್ಕಳಂತೆ ಹೋರಾಟ ಮಾಡಿ ಗೆಲ್ಲಿಸಿದ್ದೇವೆ. ಅವರಿಂದ ನಮ್ಮ ಜಿಲ್ಲೆಗೆ ಯಾವುದೇ ಕೊಡುಗೆಯೂ ಇಲ್ಲ. ನಮ್ಮ ಕಾರ್ಯಕರ್ತರಿಗೂ ಬೆಲೆಯೂ ಇಲ್ಲ. ಗೆಲ್ಲುವವರೆಗೂ ನಮ್ಮನ್ನು ಬಳಸಿಕೊಂಡು ನಂತರ ಜಿಲ್ಲೆಯನ್ನು, ಜಿಲ್ಲೆಯ ಜನರನ್ನು ಕಡೆಗಣಿಸುತ್ತಾರೆ. ಈ ಹಿನ್ನೆಲೆಯಲ್ಲಿ ನಮ್ಮ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುವ ಹಾಗೂ ಕಾರ್ಯಕರ್ತರ ಬಗ್ಗೆ ಕಾಳಜಿ ಹೊಂದಿರುವ ಸ್ವಾಭಿಮಾನದ ಅಭ್ಯರ್ಥಿ ಎಂ.ಸಿ.ರಘುಚಂದನ್‍ರವರಿಗೆ ಟಿಕೇಟ್ ನೀಡಬೇಕೆಂದು ಒತ್ತಾಯಿಸಿದರು.

ಐತಿಹಾಸಿಕ ಹಿನ್ನೆಲೆಯುಳ್ಳ ಚಿತ್ರದುರ್ಗ ಸುತ್ತಮುತ್ತಲಿನ ಹೊಸ ಜಿಲ್ಲೆಗಳಿಗಿಂತ ತುಂಬ ಹಿಂದುಳಿದಿದೆ. ಜಿಲ್ಲೆಯಲ್ಲಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ನಿರುದ್ಯೋಗದ ಸಮಸ್ಯೆ, ನೀರಾವರಿ ಸಮಸ್ಯೆಯಿದ್ದು, ರೈತರು ಮಳೆ ಮತ್ತು ಬೋರವೆಲ್‍ಗಳನ್ನು ನಂಬಿ ಬೆಳೆ ಬೆಳೆಯುವ ಪರಿಸ್ಥಿತಿ ಇದೆ. ಮಳೆಯ ಅಭಾವದ ಕಾರಣದಿಂದ ರೈತರು ಕೃಷಿಗಾಗಿ ಸಾಲ ಸೂಲ ಮಾಡಿ ಸಂಕಷ್ಟಕ್ಕೆ ಗುರಿಯಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಒದಗಿದೆ. ಚಿತ್ರದುರ್ಗ ಜಿಲ್ಲೆಯನ್ನು ಹಲವು ವರ್ಷಗಳಿಂದ ಲೂ ಹೊರಗಿನವರು ಬಂದು ಆಳ್ವಿಕೆ ಮಾಡುತ್ತಿರುವುದರಿಂದ ಜಿಲ್ಲೆ ಅತ್ಯಂತ ಹಿಂದುಳಿಯಲೂ ಕಾರಣವಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ಜಿಲ್ಲೆಯ ಸಮಸ್ಯೆ ಅರ್ಥಮಾಡಿಕೊಂಡು ಬಗೆಹರಿಸಲು ಶ್ರಮಪಡುವ ಸ್ಥಳೀಯ ನಾಯಕರಿಗೆ ಟಿಕೇಟ್ ಕೊಟ್ಟರೆ ಚಿತ್ರದುರ್ಗ ಇತರೆ ಜಿಲ್ಲೆಗಳಿಗಿಂತ ಹೆಚ್ಚಿನ ಅಭಿವೃದ್ಧಿ ಹೊಂದುವುದರಲ್ಲಿ ಸಂದೇಹವಿಲ್ಲ. ನಮ್ಮ ಕೂಗು ನಮ್ಮ ಜಿಲ್ಲೆಯ ಉಳಿವಿಗಾಗಿ, ಸ್ವಾಭಿಮಾನಕ್ಕಾಗಿಯೇ ಹೊರತು ಪಕ್ಷ ಅಥವ ವ್ಯಕ್ತಿ ವಿರುದ್ಧ ಅಲ್ಲ. ಯುವ ಮುಖಂಡ ಎಂ.ಸಿ ರಘುಚಂದನ್‍ರವರಿಗೆ ಟಿಕೆಟ್ ನೀಡಿದರೆ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಸ್ಥಳಿಯರು ಪಕ್ಷ ಕಟ್ಟೋಕ್ಕಷ್ಟೇನಾ?: ಚಿತ್ರದುರ್ಗ ಕ್ಷೇತ್ರದಿಂದ ಗೋವಿಂದ ಕಾರಜೋಳ ಅವರಿಗೆ ಟಿಕೆಟ್ ನೀಡಲಾಗುತ್ತಿದೆ ಎಂಬ ಸುದ್ದಿ ಗ್ರಹಿಸಿದ ಮತ್ತೋರ್ವ ಟಿಕೆಟ್ ಆಕಾಂಕ್ಷಿ ರಘುಚಂದನ್ ಬೆಂಬಲಿಗರು ಮಧ್ಯಾಹ್ನ ಒನಕೆ ಓಬವ್ವ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಗೋಬ್ಯಾಕ್ ನಾರಾಯಣಸ್ವಾಮಿ, ಗೋ ಬ್ಯಾಕ್ ಕಾರಜೋಳ ಘೋಷಣೆಯ ಪ್ಲೇ ಕಾರ್ಡ್ ಹಿಡಿದ್ದ ಪ್ರತಿಭಟನಾಕಾರರು ನಂತರ ಬಿಜೆಪಿ ಕಚೇರಿಗೆ ತೆರಳಿ ಮುತ್ತಿಗೆ ಹಾಕಿದರು. ಪಕ್ಷ ಕಟ್ಟೋಕೆ ನಾವು ಬೇಕು, ಟಿಕೆಟ್ ನೀಡಿ ಪಾರ್ಲಿಮೆಂಟ್‌ಗೆ ಕಳಿಸಲು ಬೇರೆಯವರು ಬೇಕಾ? ಎಂದು ಅಸಮಾಧಾನ ಹೊರ ಹಾಕಿದರು.