ಕನ್ನಡಪ್ರಭ ವಾರ್ತೆ ಬೆಂಗಳೂರು
ತಾತ ತನ್ನ ಜೀವಿತಾವಧಿಯಲ್ಲಿ ಸ್ವಂತವಾಗಿ ಸಂಪಾದಿಸಿದ ಆಸ್ತಿಯು, ವಿಭಜನೆ ನಂತರ ತಂದೆಯ ಕೈಸೇರಿದರೂ ಅದು ತಂದೆಯ ವೈಯಕ್ತಿಕ ಆಸ್ತಿಯಾಗುತ್ತದೆಯೇ ಹೊರತು ಹಿಂದೂ ಅವಿಭಕ್ತ ಕುಟುಂಬದ ಆಸ್ತಿಯಾಗುವುದಿಲ್ಲ, ಈ ರೀತಿ ವಿಭಜನೆಯಾದ ಆಸ್ತಿಯಲ್ಲಿ ಪಾಲು ಕೇಳಲು ಮೊಮ್ಮಗಳಿಗೆ ಅವಕಾಶವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.ಅಮೆರಿಕದಲ್ಲಿ ನೆಲೆಸಿರುವ ಉಷಾ ಎನ್.ಸ್ವಾಮಿ ಎಂಬುವರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ಕೆ.ಸಿಂಗ್ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಉಷಾ ಅವರು ಉಲ್ಲೇಖಿಸಿರುವ ಆಸ್ತಿಗಳನ್ನು ಆಕೆಯ ತಾತ, ಅಂದರೆ ತಂದೆಯ ತಂದೆ ಸ್ವಂತವಾಗಿ ಸಂಪಾದಿಸಿದ್ದರು ಎಂಬುದು ದಾಖಲೆಗಳಿಂದ ಗೊತ್ತಾಗಲಿದೆ. ಈ ಆಸ್ತಿಯನ್ನು ಅವರ ತಾತ, ಅವರ ಮಕ್ಕಳಿಗೆ ಕೌಟುಂಬಿಕ ಒಪ್ಪಂದದ ಮೂಲಕ ಆಸ್ತಿ ಹಂಚಿಕೆ ಮಾಡಿದ್ದಾರೆ. ತಾತನ ಸ್ವಯಾರ್ಜಿತ ಆಸ್ತಿ ಭಾಗವಾಗಿ ತಂದೆಗೆ ಬಂದಾಗ, ಅದು ಆ ತಂದೆಯ ವೈಯಕ್ತಿಕ ಆಸ್ತಿಯಾಗುತ್ತದೆ. ಆದರೆ, ಪಿತ್ರಾರ್ಜಿತ ಆಸ್ತಿಯಾಗುವುದಿಲ್ಲ ಎಂದು ಪೀಠ ಹೇಳಿದೆ.ತಂದೆಗೆ ತನ್ನ ಸ್ವಯಾರ್ಜಿತ ಆಸ್ತಿಯನ್ನು ಯಾರಿಗಾದರೂ ವಿಲೇವಾರಿ ಮಾಡುವ ಸಂಪೂರ್ಣ ಹಕ್ಕಿರುತ್ತದೆ. ಈ ಆಸ್ತಿಗಳು ಹಿಂದೂ ಅವಿಭಕ್ತ ಕುಟುಂಬದ ಆಸ್ತಿಗಳಾಗಿದ್ದವು ಎಂಬುದನ್ನು ಸಾಬೀತುಪಡಿಸಲು ಮೇಲ್ಮನವಿದಾರೆ ಉಷಾ ಅವರು ಅಗತ್ಯ ಸಾಕ್ಷ್ಯಗಳನ್ನು ಒದಗಿಸಿಲ್ಲ. ತಾತನ ಸ್ವಯಂ ಸಂಪಾದಿತ ಆಸ್ತಿಗಳನ್ನು ಜಂಟಿ ಕುಟುಂಬದ ಆಸ್ತಿಗಳೆಂದು ಹೇಳಿ, ತಾನು ಭಾಗ ಪಡೆಯಬಹುದು ಎಂದು ವಾದಿಸಲು ಸಾಧ್ಯವಿಲ್ಲ. ಆದ್ದರಿಂದ ಅವರಿಗೆ ಈ ಆಸ್ತಿಗಳಲ್ಲಿ ಯಾವುದೇ ಕಾನೂನಾತ್ಮಕ ಹಕ್ಕು ಇರುವುದಿಲ್ಲ ಎಂದು ಎಂದು ನ್ಯಾಯಪೀಠ ತಿಳಿಸಿದೆ.
ಪ್ರಕರಣದ ವಿವರ:
ಉಷಾ ಎನ್. ಸ್ವಾಮಿ ಅವರು 1979ರಲ್ಲಿ ವೈದ್ಯರಾಗಿರುವ ಜವರಯ್ಯ ಎನ್ .ಸ್ವಾಮಿ ಎಂಬುವರನ್ನು ವಿವಾಹವಾಗಿದ್ದರು. ವಿವಾಹದ ಬಳಿಕ ತನ್ನ ಪತಿಯೊಂದಿಗೆ ಅಮೆರಿಕದಲ್ಲಿ ವಾಸಿಸುತ್ತಿದ್ದರು. ಈ ನಡುವೆ ಅವರ ಗಮನಕ್ಕೆ ಬಾರದೆ ಕುಟುಂಬಕ್ಕೆ ಸೇರಿದ 10 ಎಕರೆ ಜಮೀನನ್ನು ಪೋಷಕರು ಮಾರಾಟ ಮಾಡಿದ್ದಾರೆ. ತಂದೆಗೆ ಸೇರಿದ ಪಿತ್ರಾರ್ಜಿತ ಆಸ್ತಿಯಲ್ಲಿ ಕಲ್ಲುಗಣಿಗಾರಿಕೆ ನಡೆಸಿ ಲಾಭ ಗಳಿಸಿದ್ದಾರೆ. ಈ ಲಾಭಾಂಶದ ಹಣದಲ್ಲಿ ಇತರೆ ಆಸ್ತಿಗಳನ್ನು ಗಳಿಸಿದ್ದಾರೆ. ಈ ಮೂಲ ಆಸ್ತಿಗಳು ಪೂರ್ವಜರಿಂದ ಬಂದ ಜಂಟಿ ಕುಟುಂಬದ ಆಸ್ತಿಗಳಾಗಿದ್ದು, ತಮಗೆ ಪಾಲು ಸಿಗಬೇಕು. ಈ ಎಲ್ಲ ಆಸ್ತಿಗಳು ಮತ್ತು ಬ್ಯಾಂಕ್ ಠೇವಣಿಯಲ್ಲಿಯೂ ತಾನೂ ಭಾಗ ಪಡೆಯುವುದಕ್ಕೆ ಅಧಿಕಾರವಿದೆ. ಆದ್ದರಿಂದ ಆಸ್ತಿಯಲ್ಲಿ ತನಗೆ ಭಾಗ ನೀಡಲು ನಿರ್ದೇಶನ ನೀಡಬೇಕು ಎಂದು ಅಧೀನ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ್ದ ಅಧೀನ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಉಷಾ ಅವರು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿಗೆ ಅಕ್ಷೇಪಿಸಿದ್ದ ಪೋಷಕರು, ಅರ್ಜಿದಾರರು ತಿಳಿಸಿರುವ ಆಸ್ತಿಗಳು ಪೂರ್ವಜರಿಂದ ಬಂದಿಲ್ಲ. ಅಲ್ಲದೆ, ಹಿಂದೂ ಅವಿಭಜಿತ ಕುಟುಂಬಕ್ಕೆ ಸೇರಿದ ಆಸ್ತಿಯಲ್ಲ. ಆದ್ದರಿಂದ ಮೇಲ್ಮನವಿ ವಜಾಗೊಳಿಸಬೇಕು ಎಂದು ಕೋರಿದ್ದರು