ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಪ್ರಧಾನಿ ನರೇಂದ್ರ ಮೋದಿ ಬುದ್ದಿವಂತರು, ಜನಪರ ಕಾಳಜಿಯಿಂದ ಜಿಎಸ್ಟಿ ಕಡಿತ ಮಾಡಿದ್ದಾರೆ. ಇದರಿಂದ ನಿತ್ಯ ಬಳಕೆಯ ಹತ್ತು ಹಲವು ಉತ್ಪನ್ನಗಳು, ಸೇವೆಗಳ ಮೇಲಿನ ತೆರಿಗೆ ಪ್ರಮಾಣ ಕಡಿಮೆಯಾಗುತ್ತದೆ. ಗ್ರಾಹಕರಿಗೆ ಈ ಕೊಡುಗೆಯ ಲಾಭ ದೊರೆಯಲಿದೆ ಎಂದು ಸಂಸದ ಡಾ.ಕೆ.ಸುಧಾಕರ್ ತಿಳಿಸಿದರು.ತಾಲೂಕಿನ ಹರಿಹರ ಪುರ ಬಳಿ ಚಿಕ್ಕಪೇಟೆ ಮಾಜಿ ಶಾಸಕ ಪ್ರಕಾಶ್ ರವರು ನೂತನವಾಗಿ ಆರಂಭ ಮಾಡಿರುವ ಪೆಟ್ರೋಲ್ ಬಂಕ್ ಪ್ರಾರಂಭೋತ್ಸವದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಜಿಎಸ್ಟಿ ಇಳಿಕೆ ಮಾಡಿದ್ರೆ ರಾಜ್ಯದ ಆದಾಯ ಕಡಿಮೆ ಆಗುತ್ತೆ ಅಂತಾರೆ. ಹಾಗಾದರೆ ಇವರಿಗೆ ಬಡವರ ಕಾಳಜಿ ಇಲ್ಲವೆ ಎಂದು ಸಚಿವ ಕೃಷ್ಣಬೈರೇಗೌಡರಿಗೆ ತಿರುಗೇಟು ನೀಡಿದರು.
ಎಲ್ಲ ವರ್ಗಗಳಿಗೂ ಅನುಕೂಲಶೇ 28 ಮತ್ತು ಶೇ 18 ರಷ್ಟು ಇದ್ದ ಜಿಎಸ್ಟಿ ತೆರಿಗೆ ಶೇ 5 ಮತ್ತು ಶೂನ್ಯಕ್ಕೆ ಇಳಿಕೆಯಾಗಿರುವುದರಿಂದ ಎಲ್ಲ ವರ್ಗಗಳಿಗೂ ಅನುಕೂಲವಾಗಿದೆ. ಇದನ್ನು ರಾಜ್ಯ ಸರ್ಕಾರ ಸ್ವಾಗತ ಮಾಡಬೇಕಿತ್ತು. ಅದು ಬಿಟ್ಟು ನಮ್ಮ ರಾಜ್ಯ ಸರ್ಕಾರ ಆದಾಯ ಕಡಿಮೆಯಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಅಂದರೆ ಇವರು ಆದಾಯದ ಕಡೆ ನೋಡುತ್ತಿದ್ದಾರಾ ಅಥವಾ ಜನ ಸಾಮಾನ್ಯರಿಗೆ ಬದು ಕಟ್ಟಿಕೊಡುವ ಕೆಲಸ ಮಾಡುತ್ತಿದ್ದಾರಾ ಎಂದು ಪ್ರಶ್ನಿಸಿದರು.
ಜಿಎಸ್‌ಟಿ ಸುಧಾರಣೆಯು ದೇಶಿ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚು ಮಾಡಲಿದೆ. ಬೇಡಿಕೆಯಲ್ಲಿನ ಹೆಚ್ಚಳವು ದೇಶದ ಜಿಡಿಪಿ ಬೆಳವಣಿಗೆ ದರವನ್ನು ಮುಂದಿನ ನಾಲ್ಕರಿಂದ ಆರು ತ್ರೈಮಾಸಿಕಗಳ ಅವಧಿಯಲ್ಲಿ ಶೇ 1.2ರವರೆಗೆ ಹೆಚ್ಚಿಸುವ ಶಕ್ತಿ ಹೊಂದಿದೆ. ಅಮೆರಿಕವು ಭಾರತದ ಸರಕುಗಳ ಮೇಲೆ ಹೇರಿರುವ ಭಾರಿ ಪ್ರಮಾಣದ ತೆರಿಗೆಯಿಂದ ಆಗಿರುವ ಸಮಸ್ಯೆಯನ್ನು ನಿಭಾಯಿಸಲು ಜಿಎಸ್‌ಟಿ ಸುಧಾರಣೆಗಳು ಅವಕಾಶ ಕಲ್ಪಿಸಿಕೊಡಲಿವೆ’ ಎಂದರು.ಜೀವರಕ್ಷಕ ಔಷಧಿಗೆ ತೆರಿಗೆ ಇಲ್ಲ
ಜೀವರಕ್ಷಕ ಹಾಗೂ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುವ ಔಷಧಗಳನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿರಿಸಲಾಗಿದೆ. ಹಲವು ಔಷಧಗಳ ಮೇಲಿನ ತೆರಿಗೆ ಶೇ 12ರಷ್ಟು ಇದ್ದಿದ್ದನ್ನು ಶೇ 5ಕ್ಕೆ ತಗ್ಗಿಸಲಾಗಿದೆ. ಆರೋಗ್ಯ ವಿಮೆ ಹಾಗೂ ಜೀವ ವಿಮೆಯ ಮೇಲೆ ಶೂನ್ಯ ಜಿಎಸ್‌ಟಿ ನಿಗದಿ ಮಾಡಿರುವ ಕ್ರಮವು ಬಹಳ ಒಳ್ಳೆಯದು. ಕೃಷಿ, ತೋಟಗಾರಿಕೆಗೆ ಸಂಬಂಧಿಸಿದ ಯಂತ್ರೋಪಕರಣಗಳು ಹಾಗೂ ಇನ್ನಿತರ ವಸ್ತುಗಳ ಮೇಲಿನ ತೆರಿಗೆಯನ್ನು ಶೇ 18 ಮತ್ತು ಶೇ 12ರಿಂದ ಶೇ 5ಕ್ಕೆ ಇಳಿಸಿರುವುದರಿಂದ ರೈತರಿಗೆ ಅನುಕೂಲವಾಗಲಿದೆ.ಟ್ರ್ಯಾಕ್ಟರ್ ಟೈರ್, ಬಿಡಿ ಭಾಗಗಳ ಮೇಲಿನ ತೆರಿಗೆಯನ್ನು ಶೇ 18ರಿಂದ ಶೇ 5ಕ್ಕೆ ಇಳಿಸಲಾಗಿದೆ. ಟ್ರ್ಯಾಕ್ಟರ್, ಡೀಸೆಲ್ ಎಂಜಿನ್‌ಗಳು ಸೇರಿದಂತೆ ಇತರೆ ಉಪಕರಣಗಳು, ನಿರ್ದಿಷ್ಟ ಜೈವಿಕ–ಕೀಟನಾಶಕಗಳು, ಸೂಕ್ಷ್ಮ ಪೋಷಕಾಂಶಗಳು, ಹನಿ ನೀರಾವರಿ, ತುಂತುರು ನೀರಾವರಿ ವ್ಯವಸ್ಥೆಗೆ ಬಳಸುವ ವಸ್ತುಗಳ ಮೇಲಿನ ಜಿಎಸ್‌ಟಿ ಶೇ 12ರಿಂದ 5ಕ್ಕೆ ಇಳಿದಿದೆ. ರಸಗೊಬ್ಬರ ಬೆಲೆ ಇಳಿಕೆಯಾಗಲಿದೆ ಎಂದರು.
ಸೋನಿಯಾಗೆ ಧರ್ಮಸ್ಥಳದ ಬಗ್ಗೆ ಗೊತ್ತೆ?ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಮಾತನಾಡಿ, ಧರ್ಮಸ್ಥಳ ಪ್ರಕರಣದಲ್ಲಿ ಮಧ್ಯಪ್ರವೇಶಿಸುವಂತೆ ಸೋನಿಯಾ ಗಾಂಧಿ ಅವರಿಗೆ ಮಹಿಳಾ ಸಂಘಟನೆಗಳು ಪತ್ರ ಬರೆದಿದ್ದಾರಂತೆ. ಇದನ್ನು ಆ ಹೆಣ್ಣು ಮಕ್ಕಳಿಗೆ ಯಾರೋ ಹೇಳಿಕೊಟ್ಟು ಮಾಡಿಸಿರಬಹುದು. ಸೋನಿಯಾ ಅವರಿಗೆ ಧರ್ಮಸ್ಥಳದ ಬಗ್ಗೆ ಗೊತ್ತೇ. ಇದು ಸಿದ್ದರಾಮಯ್ಯ ಮತ್ತು ಅವರ ತಂಡದ ಹೊಸ ಕಥೆಯಂತಿದೆ ಎಂದರು.
ಡಿ.ಕೆ.ಶಿವಕುಮಾರ್ ಬುದ್ಧಿವಂತಿಕೆಗೆ ಬೇಸರ ಮಾಡಿಕೊಂಡಿರುವವರು ಹೀಗೆ ಮಾಡಿಸಿರಬಹುದು. ಇಂತಹದ್ದೆಲ್ಲ ಮಾಡುವುದೇ ಕಾಂಗ್ರೆಸ್ ಕುತಂತ್ರ. ಸೋನಿಯಾ ಗಾಂಧಿ ಅವರ ಬಗ್ಗೆ ಅಪಾರ ಗೌರವವಿದೆ. ಅವರು ಒಳ್ಳೆಯವರು. ಅವರ ಮಗ ರಾಹುಲ್ ಗಾಂಧಿ ಪ್ರಧಾನಿ ಆಗಬೇಕು ಎನ್ನುವ ತವಕದಲ್ಲಿ ಜೀವನ ಸಾಗಿಸುತ್ತಿದ್ದಾರೆ ಎಂದು ಹೇಳಿದರು.