ಸಾರಾಂಶ
ಕೋಲಾರ ಲೋಕಸಭಾ ಕ್ಷೇತ್ರದ ಬಿಜೆಪಿ ಹಾಗೂ ಜೆಡಿಎಸ್ ನ ಮೈತ್ರಿ ಅಭ್ಯರ್ಥಿ ಎಂ ಮಲ್ಲೇಶ್ ಬಾಬು ಕಾಂಗ್ರೆಸ್ ಪಕ್ಷದ ಕೆ.ವಿ.ಗೌತಮ್ ವಿರುದ್ಧ ಗೆಲುವು ಸಾಧಿಸುತ್ತಿದ್ದಂತೆಯೇ ಅಭಿಮಾನಿಗಳು ಹಾಗೂ ಪಕ್ಷಗಳ ಮುಖಂಡರು ಪಟಾಕಿ ಹೊಡೆದು, ಸಿಹಿ ಹಂಚುತ್ತಾ ವಿಜಯೋತ್ಸವ ಆಚರಿಸಿದರು.
ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ
ಲೋಕಸಭಾ ಕ್ಷೇತ್ರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವಲ್ಲಿ ಕೈಹಿಡಿದಿಲ್ಲ ಎಂಬುದು ಈ ಚುನಾವಣಾ ಫಲಿತಾಂಶದಿಂದ ಸಾಬೀತಾಗಿದೆ ಎಂದು ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ಟೀಕಿಸಿದರು.ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಲ್ಲೇಶ ಬಾಬು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪಕ್ಷದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 8 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ರಾಜ್ಯ ಸರ್ಕಾರದ ಸಚಿವ ಡಾ.ಎಂ. ಸಿ. ಸುಧಾಕರ್ ಹಾಗೂ ಕಾಂಗ್ರೆಸ್ ನ 4 ಶಾಸಕರಿದ್ದರೂ ಕಾಂಗ್ರೆಸ್ ಅಭ್ಯರ್ಥಿ ಕೆ.ವಿ. ಗೌತಮ್ ರನ್ನು ಗೆಲ್ಲಿಸುವಲ್ಲಿ ವಿಫಲರಾಗಿದ್ದಾರೆಂದು ಟೀಕಿಸಿದರು.
ಅವಳಿ ಜಿಲ್ಲೆಗಳಾದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳಾದ ಡಾ. ಕೆ ಸುಧಾಕರ್ ಹಾಗೂ ಎಮ್. ಮಲ್ಲೇಶ್ ಬಾಬು ಅವರು ಅತ್ಯಧಿಕ ಮತಗಳಿಂದ ಜಯಶೀಲರಾಗಿ ವಿಜಯಪತಾಕೆಯನ್ನು ಹಾರಿಸಿದ್ದಾರೆ. ಕೋಲಾರ ಲೋಕಸಭಾ ಕ್ಷೇತ್ರದ ಮೀಸಲು ಅಭ್ಯರ್ಥಿ ಎಂ. ಮಲ್ಲೇಶ್ ಬಾಬು ಅವರು ಸುಮಾರು ೭೧ ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಕೆ. ವಿ. ಗೌತಮ್ ವಿರುದ್ಧ ಜಯಗಳಿಸಿದರೆ, ಇನ್ನು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಡಾ. ಕೆ. ಸುಧಾಕರ್ ಅವರು ಕಾಂಗ್ರೆಸ್ ಅಭ್ಯರ್ಥಿ ರಕ್ಷಾರಾಮಯ್ಯ ವಿರುದ್ಧ ಸುಮಾರು ಒಂದೂವರೆ ಲಕ್ಷಕ್ಕೂ ಅಧಿಕ ಮತಗಳಿಂದ ಜಯಗಳಿಸಿ ವಿಜಯಪತಾಕೆ ಹಾರಿಸಿದ್ದಾರೆ ಎಂದು ಹೇಳಿದರು.ಇನ್ನೂ ಕೋಲಾರ ಲೋಕಸಭಾ ಕ್ಷೇತ್ರದ ಬಿಜೆಪಿ ಹಾಗೂ ಜೆಡಿಎಸ್ ನ ಮೈತ್ರಿ ಅಭ್ಯರ್ಥಿ ಎಂ ಮಲ್ಲೇಶ್ ಬಾಬು ಕಾಂಗ್ರೆಸ್ ಪಕ್ಷದ ಕೆ.ವಿ.ಗೌತಮ್ ವಿರುದ್ಧ ಗೆಲುವು ಸಾಧಿಸುತ್ತಿದ್ದಂತೆಯೇ ಅಭಿಮಾನಿಗಳು ಹಾಗೂ ಪಕ್ಷಗಳ ಮುಖಂಡರು ಪಟಾಕಿ ಹೊಡೆದು, ಸಿಹಿ ಹಂಚುತ್ತಾ ವಿಜಯೋತ್ಸವ ಆಚರಿಸಿದರು.
ಮಾಜಿ ಶಾಸಕ ಎಂ.ರಾಜಣ್ಣ, ಗ್ರಾಮಾಂತರ ಮಂಡಲ ಅಧ್ಯಕ್ಷ ಆನಂದ್ ಗೌಡ, ಸುರೇಂದ್ರ ಗೌಡ, ನಗರ ಮಂಡಲ ಅಧ್ಯಕ್ಷ ನರೇಶ್ ಕುಮಾರ್ ಕೆ, ತ್ರಿವೇಣಿ, ನಾಗೇಶ್, ದೇವರಾಜ್, ಮುಂತಾದವರು ಉಪಸ್ಥಿತರಿದ್ದರು.