ನವೆಂಬರ್‌ನಲ್ಲಿ ‘ಗ್ಯಾರಂಟಿ ಅನುಷ್ಠಾನ ಜಾಗೃತಿ ಸಪ್ತಾಹ’: ಡಾ.ಪುಷ್ಪಾ ಅಮರನಾಥ್

| Published : Sep 27 2024, 01:19 AM IST

ನವೆಂಬರ್‌ನಲ್ಲಿ ‘ಗ್ಯಾರಂಟಿ ಅನುಷ್ಠಾನ ಜಾಗೃತಿ ಸಪ್ತಾಹ’: ಡಾ.ಪುಷ್ಪಾ ಅಮರನಾಥ್
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರು ವಿಭಾಗದ ಎಲ್ಲಾ ಜಿಲ್ಲೆಗಳಲ್ಲಿ ನವೆಂಬರ್ ತಿಂಗಳಲ್ಲಿ ‘ಗ್ಯಾರಂಟಿ ಅನುಷ್ಠಾನ ಜಾಗೃತಿ ಸಪ್ತಾಹ’ ಆಯೋಜಿಸಲಾಗುವುದು ಎಂದು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಮೈಸೂರು ವಿಭಾಗದ ಉಪಾಧ್ಯಕ್ಷ ಡಾ.ಪುಷ್ಪಾ ಅಮರನಾಥ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಸರ್ಕಾರದ ಪ್ರಮುಖ ಕಾರ್ಯಕ್ರಮಗಳಾದ ಗ್ಯಾರಂಟಿ ಯೋಜನೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಮೈಸೂರು ವಿಭಾಗದ ಎಲ್ಲಾ ಜಿಲ್ಲೆಗಳಲ್ಲಿ ನವೆಂಬರ್ ತಿಂಗಳಲ್ಲಿ ‘ಗ್ಯಾರಂಟಿ ಅನುಷ್ಠಾನ ಜಾಗೃತಿ ಸಪ್ತಾಹ’ ಆಯೋಜಿಸಲಾಗುವುದು ಎಂದು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಮೈಸೂರು ವಿಭಾಗದ ಉಪಾಧ್ಯಕ್ಷ ಡಾ.ಪುಷ್ಪಾ ಅಮರನಾಥ್ ತಿಳಿಸಿದ್ದಾರೆ.

ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಬಗ್ಗೆ ಮಾಹಿತಿ ಪಡೆದು ಅವರು ಮಾತನಾಡಿದರು.

ಸರ್ಕಾರ ಗೃಹ ಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ ಹಾಗೂ ಯುವನಿಧಿ ಕಾರ್ಯಕ್ರಮವನ್ನು ಜಾರಿಗೊಳಿಸಿದೆ. ಈ ಗ್ಯಾರಂಟಿ ಯೋಜನೆಗಳಿಂದ ಬಿಪಿಎಲ್ ಕುಟುಂಬದವರು ಯಾವುದೇ ಕಾರಣಕ್ಕೂ ವಂಚಿತರಾಗಬಾರದು, ಅರ್ಹರೆಲ್ಲರಿಗೂ ಗ್ಯಾರಂಟಿ ಯೋಜನೆಗಳು ತಲುಪಬೇಕು. ಶೇ.100 ರಷ್ಟು ಪ್ರಗತಿ ಸಾಧಿಸಬೇಕು. ಆ ನಿಟ್ಟಿನಲ್ಲಿ ಗ್ಯಾರಂಟಿ ಅನುಷ್ಠಾನ ಸಪ್ತಾಹ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ತಾ.ಪಂ.ಇಒಗಳು, ಪಿಡಿಒಗಳು ಗ್ರಾಮ ಆಡಳಿತ ಅಧಿಕಾರಿಗಳು, ಸೇರಿದಂತೆ ಹಲವು ಇಲಾಖೆಗಳ ಜೊತೆಗೂಡಿ ಮನೆ ಮನೆ ಸಮೀಕ್ಷೆ ಮಾಡಿ ಗ್ಯಾರಂಟಿ ಯೋಜನೆಯಿಂದ ಯಾರು ದೂರವಿದ್ದಾರೆ. ಗ್ಯಾರಂಟಿ ಯೋಜನೆ ಇದುವರೆಗೆ ಪಡೆಯದಿರಲು ಕಾರಣವೇನು, ಮತ್ತಿತರ ಬಗ್ಗೆ ಮಾಹಿತಿ ಪಡೆಯಬೇಕು. ಜೊತೆಗೆ ಅಗತ್ಯ ದಾಖಲೆಗಳು ಇಲ್ಲದಿರುವವರು ಸಹ ಇದ್ದು, ಅಂತಹ ಕುಟುಂಬಗಳಿಂದ ಮಾಹಿತಿ ತಿಳಿದು, ಅಗತ್ಯ ದಾಖಲೆಗಳನ್ನು ಒದಗಿಸುವ ಮೂಲಕ ಗ್ಯಾರಂಟಿ ಯೋಜನೆ ಪ್ರಗತಿ ಸಾಧಿಸಬೇಕು ಎಂದು ನಿರ್ದೇಶನ ನೀಡಿದರು.

ನವೆಂಬರ ತಿಂಗಳ ಮೊದಲ ವಾರದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಂಬಂಧ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡು, ನಂತರ ಸಪ್ತಾಹ ಹಮ್ಮಿಕೊಳ್ಳಬೇಕು ಎಂದರು.

ಗೃಹಲಕ್ಷ್ಮೀ ಯೋಜನೆ ಸಂಬಂಧಿಸಿದಂತೆ ಮಾಹಿತಿ ಪಡೆದ ಪುಷ್ಪಾ ಅಮರನಾಥ್ ಅವರು ಜಿಲ್ಲೆಯಲ್ಲಿ ಶೇ.98.99 ರಷ್ಟು ಸಾಧನೆ ಮಾಡಲಾಗಿದ್ದು, ಬಾಕಿ ಇರುವ 1089 ಮಂದಿಗೆ ಫಲಾನುಭವಿಗಳಿಗೆ ಯೋಜನೆ ತಲುಪಿಸುವಂತೆ ನಿರ್ದೇಶನ ನೀಡಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಎಲ್ಲಾ ಕುಟುಂಬಗಳಿಗೆ ಗ್ಯಾರಂಟಿ ಯೋಜನೆ ತಲುಪಬೇಕು.ಆದಿವಾಸಿ ಜನರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದು, ಅಂತಹ ಆದಿವಾಸಿ ಕುಟುಂಬಗಳಿಗೆ ಅಗತ್ಯ ದಾಖಲೆಗಳನ್ನು ಒದಗಿಸಿ ಗ್ಯಾರಂಟಿ ಯೋಜನೆ ಕಡ್ಡಾಯವಾಗಿ ತಲುಪಿಸುವಂತಾಗಬೇಕು ಎಂದು ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದರು.

ಸಾರ್ವಜನಿಕರೊಬ್ಬರು ಮಾತನಾಡಿ ದಿಡ್ಡಳ್ಳಿ ಜನರನ್ನು ಸ್ಥಳಾಂತರಿಸಲಾಗಿದ್ದು, ಇವರಿಗೆ ಪಡಿತರ ಚೀಟಿ, ಆಧಾರ್ ಕಾರ್ಡ್, ಆದಾಯ ಹಾಗೂ ಜಾತಿ ಪ್ರಮಾಣ ಪತ್ರ ಇಲ್ಲದೆ ಸರ್ಕಾರದ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡರು.

ಐಟಿಡಿಪಿ ಇಲಾಖಾ ಅಧಿಕಾರಿ ಹೊನ್ನೇಗೌಡ ಅವರು ಆದಿವಾಸಿ ಜೇನುಕುರುಬ, ಕಾಡುಕುರುಬ, ಬೆಟ್ಟಕುರುಬ, ಸೋಲಿಗ, ಯರವ ಮತ್ತಿತರ ಆದಿವಾಸಿ ಜನರಿಗೆ ಅಗತ್ಯ ದಾಖಲಾತಿ ಕಲ್ಪಿಸುವ ನಿಟ್ಟಿನಲ್ಲಿ ‘ದಾಖಲಾತಿ ಆಂದೋಲನ’ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಗೃಹಲಕ್ಷ್ಮಿ ಯೋಜನೆ ಬಗ್ಗೆ ಮಾಹಿತಿ ನೀಡಿದ ನಟರಾಜು, ಜಿಲ್ಲೆಯಲ್ಲಿ 1,16,594 ಜನರು ನೋಂದಣಿಯಾಗಿದ್ದು, 1,15,425 ಮಂದಿ ಫಲಾನುಭವಿಗಳಿಗೆ ನೇರ ನಗದು ಪಾವತಿಯಾಗುತ್ತದೆ. ಇದುವರೆಗೆ 23.08 ಕೋಟಿ ರು. ಪಾವತಿಯಾಗಿದೆ ಎಂದು ಮಾಹಿತಿ ನೀಡಿದರು.

ಗೃಹಜ್ಯೋತಿ ಯೋಜನೆಯಡಿ 1,56,622 ಮಂದಿಯಲ್ಲಿ 1,55,508 ಮಂದಿ ಹೆಸರು ನೋಂದಾಯಿಸಿದ್ದು, 1,114 ಮಂದಿ ಬಾಕಿ ಇದ್ದಾರೆ. ಒಟ್ಟಾರೆ ಗೃಹಜ್ಯೋತಿ ಯೋಜನೆಯಡಿ ಶೇ.99.29 ರಷ್ಟು ಪ್ರಗತಿ ಸಾಧಿಸಲಾಗಿದ್ದು, 7,959 ಲಕ್ಷ ರೂ. ಸಹಾಯಧನ ಕಲ್ಪಿಸಲಾಗಿದೆ ಎಂದು ಸೆಸ್ಕ್ ಇಇ ಅನಿತಾ ಬಾಯಿ ಅವರು ಮಾಹಿತಿ ನೀಡಿದರು.

ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ 99,168 ಅರ್ಹ ಪಡಿತರ ಚೀಟಿದಾರರಲ್ಲಿ 97,570 ಪಡಿತರ ಚೀಟಿದಾರರಿಗೆ ಡಿಬಿಟಿ ಮೂಲಕ ಹಣ ವರ್ಗಾವಣೆಯಾಗಿದೆ. 1598 ಮಂದಿಗೆ ನಗದು ವರ್ಗಾವಣೆಗೆ ಬಾಕಿ ಇದ್ದು, ಶೇ.98.39 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಆಹಾರ ಇಲಾಖೆಯ ಜಂಟಿ ನಿರ್ದೇಶಕರಾದ ಕುಮುದಾ ಶರತ್ ಅವರು ಮಾಹಿತಿ ನೀಡಿದರು.

ಶಕ್ತಿ ಯೋಜನೆಗೆ ಸಂಬಂಧಿಸಿದಂತೆ ಒಟ್ಟು 71,12,191 ವಯಸ್ಕ ಮಹಿಳಾ ಪ್ರಯಾಣಿಕರು ಮತ್ತು 1,49,740 ಹೆಣ್ಣು ಮಕ್ಕಳು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿನಿಯರು ಸಂಸ್ಥೆಯ ವಾಹನದಲ್ಲಿ ಪ್ರಯಾಣಿಸಿ ಯೋಜನೆಯ ಪ್ರಯೋಜನ ಪಡೆದಿದ್ದಾರೆ. ಸರಾಸರಿ 15,098 ಪ್ರಯಾಣಿಕರು ಒಂದು ದಿನಕ್ಕೆ ಸಂಸ್ಥೆಯ ವಾಹನದಲ್ಲಿ ಪ್ರಯಾಣಿಸಿರುತ್ತಾರೆ. ಸೆ.24 ರವರೆಗೆ ಒಟ್ಟು ಮೊತ್ತ ರು.28,58,64,957 ರಷ್ಟು ಸಂಸ್ಥೆಗೆ ಆದಾಯ ಬಂದಿರುತ್ತದೆ. ಸರಾಸರಿ ಒಂದು ದಿನದ ಆದಾಯ ರು. 5,94,314 ಆಗಿದೆ ಎಂದು ಕೆಎಸ್‌ಆರ್‌ಟಿಸಿ ಮಡಿಕೇರಿ ಘಟಕದ ವ್ಯವಸ್ಥಾಪಕ ಮಹಮದ್ ಅಲಿ ಮಾಹಿತಿ ನೀಡಿದರು.

ಯುವನಿಧಿ ಯೋಜನೆ ಸಂಬಂಧಿಸಿದಂತೆ ಮಾಹಿತಿ ನೀಡಿದ ರೇಖಾ ಗಣಪತಿ ಅವರು ಜಿಲ್ಲೆಯಲ್ಲಿ 1,189 ಮಂದಿ ಹೆಸರು ನೋಂದಾಯಿಸಿದ್ದು, 1,015 ಮಂದಿಗೆ ಡಿಬಿಟಿ ಮೂಲಕ ಸೌಲಭ್ಯ ಕಲ್ಪಿಸಲಾಗುತ್ತಿದ್ದು, ಶೇ.85 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದರು.

ಗ್ಯಾರಂಟಿ ಯೋಜನೆ ಪ್ರಮುಖರಾದ ಪ್ರಶಾಂತ್, ಶರಿ ಗಿರೀಶ, ಕೆ.ಸಿ.ಭೀಮಯ್ಯ, ನಾಸೀರ್, ಅಣ್ಣಯ್ಯ, ಕೆ.ಎಂ.ಬಸೀರ್, ಮುಸ್ತಫ, ಧನ್ಯ, ಕೆ.ಜಿ.ಫೀಟರ್, ಕಾಂತರಾಜು, ಮಂದ್ರೀರ ಮೋಹನ್ ದಾಸ್, ಜಾನ್ಸನ್ ಹಲವು ವಿಚಾರಗಳ ಕುರಿತು ಪ್ರಸ್ತಾಪಿಸಿದರು.