ಮಂಗಳೂರಿನಲ್ಲಿ ಸಂಭ್ರಮದ ‘ಹಲಸು ಮೇಳ-ಆಹಾರೋತ್ಸವ’

| Published : Jun 17 2024, 01:37 AM IST

ಮಂಗಳೂರಿನಲ್ಲಿ ಸಂಭ್ರಮದ ‘ಹಲಸು ಮೇಳ-ಆಹಾರೋತ್ಸವ’
Share this Article
  • FB
  • TW
  • Linkdin
  • Email

ಸಾರಾಂಶ

ನಂತೂರು ಶ್ರೀಭಾರತೀ ಕಾಲೇಜು ಆವರಣದಲ್ಲಿ ಶ್ರೀ ಭಾರತೀ ಸಮೂಹ ಸಂಸ್ಥೆಗಳು, ಹಲಸು ಮೇಳ- ಆಹಾರೋತ್ಸವ ಸಮಿತಿ ಭಾನುವಾರ ಏರ್ಪಡಿಸಿದ ‘ಹಲಸು ಮೇಳ-ಆಹಾರೋತ್ಸವ’ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ತರಹೇವಾರಿ ಹಲಸು, ಹಲಸಿನ ಹಣ್ಣಿನ ವಿವಿಧ ಬಗೆಯ ಉತ್ಪನ್ನ, ಸ್ಥಳದಲ್ಲೇ ತಯಾರಾಗುವ ಹಲಸಿನ ಹಣ್ಣಿನ ವಿವಿಧ ಖಾದ್ಯಗಳು...ನಗರದ ನಂತೂರು ಶ್ರೀಭಾರತೀ ಕಾಲೇಜು ಆವರಣದಲ್ಲಿ ಶ್ರೀ ಭಾರತೀ ಸಮೂಹ ಸಂಸ್ಥೆಗಳು, ಹಲಸು ಮೇಳ- ಆಹಾರೋತ್ಸವ ಸಮಿತಿ ಭಾನುವಾರ ಏರ್ಪಡಿಸಿದ ‘ಹಲಸು ಮೇಳ-ಆಹಾರೋತ್ಸವ’ದ ಸಂಭ್ರಮ ಇದು. ಸ್ಥಳದಲ್ಲೇ ತಯಾರಾಗುವ ಹಲಸಿನ ಹಣ್ಣಿನ ದೋಸೆ, ಗುಜ್ಜೆ ಮಂಚೂರಿ, ಹಲಸಿನ ಬೀಜದ ಚಟ್ಟಂಬಡೆ, ಹಲಸಿನ ಕಾಯಿ ಬೋಂಡ, ಗುಜ್ಜೆ ಪಲಾವ್‌, ಅಂಬಡೆ, ಹಲಸಿನ ಬೀಜದ ಹೋಳಿಗೆ ಹಲಸು ಪ್ರಿಯರನ್ನು ಆಕರ್ಷಿಸುತ್ತಿತ್ತು.

ವಿವಿಧ ತಳಿಯ ಹಲಸಿನ ಹಣ್ಣಿನ ಮಾರಾಟ ಭರ್ಜರಿಯಾಗಿ ನಡೆಯಿತು. ಬೆರಟಿ ಪಾಯಸ, ಹಲಸಿನ ಬೀಜದ ಪಾಯಸ, ಸೊಳೆ ರೊಟ್ಟಿಘಿ, ಹಪ್ಪಳ, ಹಲಸಿನ ಹಣ್ಣಿನ ಕೊಟ್ಟಿಗೆ, ಬನ್ಸ್‌, ಅಪ್ಪ, ಹಲಸಿನಕಾಯಿ ಕಟ್ಲೆಟ್‌, ಐಸ್‌ಕ್ರೀಂ ಹೀಗೆ ಹಲಸಿನ ವಿವಿಧ ಉತ್ಪನ್ನಗಳನ್ನು ಗ್ರಾಹಕರು ಮುಗಿಬಿದ್ದು ಖರೀದಿಸಿದರು.ಜತೆಗೆ ಬಾಳೆಕಾಯಿ ಚಿಫ್ಸ್‌ಘಿ, ಬಾಳೆಹಣ್ಣಿನ ಹಲ್ವ, ಸಕ್ಕರೆ ಬೆರಟಿ, ಮಾವಿನ ಹಣ್ಣಿನ ರಸಾಯನ, ಜ್ಯೂಸ್‌, ಮಸಾಲೆ ಮಜ್ಜಿಗೆ, ಸಾವಯವ ಉತ್ಪನ್ನಗಳು, ವನಸ್ಪತಿ, ಕೃಷಿಕರು ಬೆಳೆದ ತರಕಾರಿ, ಕೃಷಿ ಉತ್ಪನ್ನಗಳು, ಹೂವಿನ ಗಿಡಗಳ ಮಾರಾಟ ನಡೆಯಿತು.ಮೇಳದಲ್ಲಿ ಒಟ್ಟು 60 ಸ್ಟಾಲ್‌ಗಳಿದ್ದವು. ಸ್ಥಳೀಯ ತಳಿಯ 600, ತಿಪಟೂರಿನ 300 ಹಲಸಿನ ಹಣ್ಣುಗಳನ್ನು ಮಾರಾಟಕ್ಕೆ ತರಲಾಗಿತ್ತು. ಕೋಲಾರದಿಂದ ಒಂದು ಸಾವಿರ ಮಾವಿನ ಹಣ್ಣು ಬಂದಿತ್ತು. ಸುಮಾರು 20 ಸಾವಿರಕ್ಕೂ ಅಧಿಕ ಮಂದಿ ಹಲಸಿನ ಮೇಳಕ್ಕೆ ಭೇಟಿ ನೀಡಿದ್ದಾರೆ.

ಸ್ಪರ್ಧಾ ವಿಜೇತರಿಗೆ ಬಹುಮಾನ: ವಕೀಲ ಕೃಷ್ಣಮೂರ್ತಿ ಕೊಲ್ಲರಮಜಲು ಹಲಸು ಮೇಳಕ್ಕೆ ಚಾಲನೆ ನೀಡಿದರು. ಪಾಲಿಕೆ ಸದಸ್ಯೆ ಶಕೀಲಾ ಕಾವ ಅವರು ತಿಂಡಿಗಳ ಕೌಂಟರ್‌ ಉದ್ಘಾಟಿಸಿದರು. ಹಲಸು ಮೇಳಕ್ಕೆ ಸಂಬಂಧಿಸಿದ ಸ್ಪರ್ಧೆ ವಿಜೇತರಿಗೆ ಕರ್ಣಾಟಕ ಬ್ಯಾಂಕ್‌ ಜನರಲ್‌ ಮೆನೇಜರ್‌ ಬಿ.ಎಸ್‌. ರಾಜಾ ಬಹುಮಾನ ವಿತರಿಸಿದರು. ವಿವಿವಿ ಕೇಂದ್ರ ಸಮಿತಿ ಉಪಾಧ್ಯಕ್ಷ ಗಣೇಶ ಮೋಹನ ಕಾಶಿಮಠ, ಸಮಿತಿ ಸಂಚಾಲಕ ಸುಬ್ರಹ್ಮಣ್ಯ ಭಟ್‌ ಕಾಶಿಮಠ, ಬಾಲಸುಬ್ರಹ್ಮಣ್ಯ ಭಟ್‌, ಮಹಿಳಾ ಪ್ರಧಾನರಾದ ಮಲ್ಲಿಕಾ ಜಿ.ಕೆ. ಭಟ್‌, ಜ್ಯೋತಿಲಕ್ಷ್ಮಿ ಅಮೈ, ಗೀತಾದೇವಿ ಇದ್ದರು.

ಸ್ವಾಗತ ಸಮಿತಿ ಅಧ್ಯಕ್ಷ ಉದಯಶಂಕರ ನೀರ್ಪಾಜೆ ಸ್ವಾಗತಿಸಿದರು. ಭಾರತೀ ಸಮೂಹ ಸಂಸ್ಥೆ ಕಾರ್ಯದರ್ಶಿ ಶ್ರೀಕೃಷ್ಣ ಭಟ್‌ ನೀರಮೂಲೆ ವಂದಿಸಿದರು.