ಹಾಸನಾಂಬೆ ಜಾತ್ರೋತ್ಸವದ ಹುಂಡಿ ಎಣಿಕೆ ಕಾರ್ಯ

| Published : Nov 05 2024, 12:38 AM IST

ಸಾರಾಂಶ

ಶ್ರೀ ಹಾಸನಾಂಬ ದೇವಿ ಮತ್ತು ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ೧೦೦೦ ರು. ಬೆಲೆಯ ಟಿಕೆಟ್ ಆನ್‌ಲೈನ್ ಮೂಲಕ ರು. ೨೫,೬೭,೭೯೦, ಸ್ಥಳದಲ್ಲೇ ಪಡೆದ ಟಿಕೆಟ್ ೭,೧೬,೦೧,೦೦೦ ರು, ಒಟ್ಟು ೭,೪೧,೬೮,೭೯೦ ಹಾಗೂ ೩೦೦ ರು. ಟಿಕೆಟ್ ಆನ್‌ಲೈನ್ ಮೂಲಕ ರು.೬,೮೪,೪೩೮, ಸ್ಥಳದಲ್ಲೇ ಪಡೆದ ಟಿಕೆಟ್ ರು. ೧,೭೪,೪೨,೬೦೦, ಒಟ್ಟು ೧,೮೧,೨೭,೦೩೮ ರುಪಾಯಿ ಆದಾಯ ಬಂದಿದೆ. ೫೧ ಗ್ರಾಂ ಚಿನ್ನ, ೯೧೩ ಗ್ರಾಂ. ಬೆಳ್ಳಿಯನ್ನು ಕಾಣಿಕೆ ಹುಂಡಿಗೆ ಹಾಕಿದ್ದಾರೆ.

ಕನ್ನಡಪ್ರಭ ವಾರ್ತೆ ಹಾಸನ

ಶ್ರೀ ಹಾಸನಾಂಬ ದೇವಿ ಮತ್ತು ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವವು ಅ.೨೪ರಿಂದ ನ.೩ರವರೆಗೆ ನಡೆದಿದ್ದು, ಒಟ್ಟು ೧೨,೬೩,೮೩,೮೦೮ ಕೋಟಿ ರು. ಆದಾಯ ಸಂಗ್ರಹವಾಗಿದೆ ಎಂದು ಶ್ರೀ ಹಾಸನಾಂಬ ದೇವಾಲಯದ ಆಡಳಿತಾಧಿಕಾರಿ ಹಾಗೂ ಉಪವಿಭಾಗಧಿಕಾರಿ ಮಾರುತಿ ಅವರು ತಿಳಿಸಿದ್ದಾರೆ. ವಿವರ: ೧೦೦೦ ರು. ಬೆಲೆಯ ಟಿಕೆಟ್ ಆನ್‌ಲೈನ್ ಮೂಲಕ ರು. ೨೫,೬೭,೭೯೦, ಸ್ಥಳದಲ್ಲೇ ಪಡೆದ ಟಿಕೆಟ್ ೭,೧೬,೦೧,೦೦೦ ರು, ಒಟ್ಟು ೭,೪೧,೬೮,೭೯೦ ಹಾಗೂ ೩೦೦ ರು. ಟಿಕೆಟ್ ಆನ್‌ಲೈನ್ ಮೂಲಕ ರು.೬,೮೪,೪೩೮, ಸ್ಥಳದಲ್ಲೇ ಪಡೆದ ಟಿಕೆಟ್ ರು. ೧,೭೪,೪೨,೬೦೦, ಒಟ್ಟು ೧,೮೧,೨೭,೦೩೮ ರುಪಾಯಿ.ಲಾಡು ಪ್ರಸಾದ ಮಾರಾಟದಿಂದ ಒಟ್ಟು ರು. ೭೬,೭೭,೬೬೦, ಸೀರೆ ಕೌಂಟರ್ ಒಟ್ಟು ರು. ೨,೦೦,೩೦೫, ದೇಣಿಗೆ ಹಣ ಆನ್‌ಲೈನ್ ಮೂಲಕ ರು. ೨೫,೪೦೮, ಸ್ಥಳದಲ್ಲಿ ದೇಣಿಗೆ ನೀಡಿದ ಹಣ ರು. ೧೫,೫೦೦ ಒಟ್ಟು ರು. ೪೦,೯೦೮, ತುಲಾಭಾರ ಹಣ ರು. ೨೧,೫೪೦, ಜಾಹಿರಾತು ಹಣ ಆನ್‌ಲೈನ್ ಮೂಲಕ ರು. ೫,೫೦,೦೦೦, ಹುಂಡಿಗೆ ಆನ್‌ಲೈನ್ ಮೂಲಕ ರು. ೩,೯೮,೮೫೯, ದೇವಸ್ಥಾನದಲ್ಲಿದ್ದ ಹುಂಡಿಗೆ ಹಾಕಿರುವ ಹಣ ರು. ೨,೫೧,೯೮,೭೦೮, ಒಟ್ಟು ರು. ೨,೫೫,೯೭,೫೬೭ ಸೇರಿದಂತೆ ಒಟ್ಟಾರೆಯಾಗಿ ೧೨,೬೩,೮೩,೮೦೮ ಕೋಟಿ ರು. ಸಂಗ್ರಹವಾಗಿರುತ್ತದೆ ಎಂದು ತಿಳಿಸಿದ್ದಾರೆ.

ಹಾಸನಾಂಬೆ ದೇವಿಯ ಬಾಗಿಲು ಅಕ್ಟೋಬರ್‌ ೨೪ಕ್ಕೆ ತೆಗೆದು ನವೆಂಬರ್ ೩ರ ಮಧ್ಯಾಹ್ನ ಬಾಗಿಲು ಮುಚ್ಚಲಾಗಿದೆ. ಈ ಬಾರಿ ೨೦.೪೦ ಲಕ್ಷ ಭಕ್ತರು ದೇವಿ ದರ್ಶನ ಪಡೆದಿದ್ದಾರೆ. ಭಕ್ತರು ಹಾಕಿದ ೨೧ ವಿವಿಧ ಕಾಣಿಕೆ ಹುಂಡಿಯ ಲೆಕ್ಕಚಾರ ಕಾರ್ಯವನ್ನು ಸಿಸಿ ಕ್ಯಾಮೆರಾದ ಕಣ್ಗಾವಲಿನಲ್ಲಿ ನಡೆಸಲಾಯಿತು. ೫೧ ಗ್ರಾಂ ಚಿನ್ನ, ೯೧೩ ಗ್ರಾಂ. ಬೆಳ್ಳಿಯನ್ನು ಕಾಣಿಕೆ ಹುಂಡಿಗೆ ಹಾಕಿದ್ದಾರೆ.

ಸೋಮವಾರದಂದು ಬೆಳಿಗ್ಗೆ ೭ ಗಂಟೆಗೆ ಶುರುವಾದ ಹುಂಡಿಯ ಎಣಿಕೆ ಸಂಜೆ ಸುಮಾರು ೪ ಗಂಟೆಗೆ ಪೂರ್ಣಗೊಂಡಿತು. ಎಣಿಕೆ ಮಾಡುವಾಗ ಹುಂಡಿಯಲ್ಲಿ ವಿದೇಶಿ ನೋಟುಗಳು, ಹಳೆಯ ೫೦೦ ಮುಖ ಬೆಲೆಯ ನೋಟುಗಳು, ಹರಕೆ ರೂಪದಲ್ಲಿ ಕಾಣಿಕೆ ಹುಂಡಿಯಲ್ಲಿ ಕರಿಮಣಿ ಸರ, ತ್ರಿಶೂಲ, ಬೆಳ್ಳಿಯ ತೊಟ್ಟಿಲು, ಚಿನ್ನದ ತಾಳಿ, ದೀಪ, ದೇವಿಯ ಹಸ್ತ, ಬೆಳ್ಳಿಯ ಕಣ್ಣುಗಳು, ಜ್ಯೂವೆಲರಿ ಶಾಪ್‌ನ ನಾಣ್ಯಗಳು, ದೇವಾಲಯಕ್ಕೆ ಹೋಗುವ ಪಾಸುಗಳು ಸೇರಿದಂತೆ ಹಲವಾರು ತರಹದ ವಸ್ತುಗಳನ್ನು ಹಾಕಲಾಗಿತ್ತು. ಇನ್ನು ಭಕ್ತರು ತಮ್ಮ ಹಲವಾರು ಬೇಡಿಕೆಗಳನ್ನು ಈಡೇರಿಸಮ್ಮ ಎಂದು ಕೋರಿ ಈ ವರ್ಷವೂ ಕೂಡ ವಿವಿಧ ಪತ್ರಗಳು ಕಾಣಿಕೆ ಡಬ್ಬಿಯಲ್ಲಿ ಹಾಕಿರುವುದು ಕಂಡುಬಂದಿತು. ದೇವಿಗೆ ಮನವಿ ಸ್ಲಲಿಸಿರುವ ಚೀಟಿಗಳನ್ನು ಬಹಿರಂಗಪಡಿಸದಂತೆ ಎಣಿಕೆ ಅಧಿಕಾರಿಗಳು ಮನವಿ ಮಾಡಿದ್ದರು.

ಭಕ್ತರು ನೀಡಿದ ಕಾಣಿಕೆ ಹುಂಡಿ ಲೆಕ್ಕಚಾರ ಮಾಡಲು ಮೊದಲು ಶ್ರೀ ಸಿದ್ದೇಶ್ವರ ದೇವಾಲಯದ ಆವರಣ ನಿಗಧಿ ಮಾಡಲಾಗಿತ್ತು. ಆದರೆ ಮಳೆ ಬರುತ್ತಿದ್ದರಿಂದ ಶ್ರೀ ಚನ್ನಕೇಶವ ದೇವಸ್ಥಾನಕ್ಕೆ ಸ್ಥಳಾಂತರಿಸಲಾಯಿತು. ಜಿಲ್ಲಾಧಿಕಾರಿ ಸಿ. ಸತ್ಯಭಾಮ, ಉಪವಿಭಾಗಧಿಕಾರಿ ಮಾರುತಿ ಎಣಿಕೆ ಕಾರ್ಯದಲ್ಲಿ ನೇತೃತ್ವ ವಹಿಸಿದ್ದರು. ಬ್ಯಾಂಕ್ ಸಿಬ್ಬಂದಿ, ಸ್ಕೌಟ್ ಅಂಡ್ ಗೈಡ್ಸ್, ಕಂದಾಯ ಇಲಾಖೆ ಸಿಬ್ಬಂದಿ ಸೇರಿ ಒಟ್ಟು ೫೦೦ ಜನರನ್ನು ಎಣಿಕೆ ಕಾರ್ಯಕ್ಕೆ ನಿಯೋಜನೆ ಮಾಡಲಾಗಿತ್ತು.

ಮುಂದಿನ ವರ್ಷ ೨೦೨೫ರ ಅಕ್ಟೋಬರ್ ೯ರಂದು ಹಾಸನಾಂಬ ದೇವಾಲಯದ ಬಾಗಿಲು ತೆರೆದು ಅಕ್ಟೋಬರ್ ೨೩ರಂದು ಬಾಗಿಲು ಮುಚ್ಚಲಾಗುತ್ತದೆ ಎಂದು ಉಪವಿಭಾಗಧಿಕಾರಿ ಮಾರುತಿ ಮಾಹಿತಿ ನೀಡಿದರು.