ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ನಗರದಲ್ಲಿ ಹಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಶೀಘ್ರ ಕಾರ್ಯಾರಂಭ ಮತ್ತು ಜಿಲ್ಲೆಯ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಸಬಲೀಕರಣಕ್ಕೆ ಒತ್ತಾಯಿಸಿ ಮಹಿಳಾ ಪರ ಸಂಘಟನೆಗಳು ಮತ್ತು ಕಾರ್ಯಕರ್ತೆಯರ ನಿಯೋಗದಿಂದ ಜಿಲ್ಲಾ ಜನಪರ ಚಳವಳಿಗಳ ಒಕ್ಕೂಟದಿಂದ ಗುರುವಾರ ಜಿಲ್ಲಾಧಿಕಾರಿ ಲತಾ ಕುಮಾರಿಗೆ ಮನವಿ ಸಲ್ಲಿಸಲಾಯಿತು.ಇದೇ ವೇಳೆ ಸಾಹಿತಿ ಮತ್ತು ಸಾಮಾಜಿಕ ಹೋರಾಟಗಾರ್ತಿ ರೂಪ ಹಾಸನ್ ಮಾಧ್ಯಮದೊಂದಿಗೆ ಮಾತನಾಡಿ, ಹಾಸನ ನಗರದಲ್ಲಿ ಹಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಕೂಡಲೇ ಆರಂಭಿಸುವಂತೆ ಹಾಗೂ ಹಾಸನ ಜಿಲ್ಲೆಯ ಆರೋಗ್ಯ ವ್ಯವಸ್ಥೆಯನ್ನು ಭಾರತೀಯ ಸಾರ್ವಜನಿಕ ಆರೋಗ್ಯ ಮಾನದಂಡಗಳಿಗೆ (ಐ.ಪಿ.ಎಚ್.ಎಸ್) ಅನುಗುಣವಾಗಿ ಸೌಲಭ್ಯಗಳನ್ನು ನೀಡಿ ಉನ್ನತೀಕರಿಸಿ ಸಬಲೀಕರಿಸುವಂತೆ ಆಗ್ರಹಿಸಿ ಹಾಸನ ಜಿಲ್ಲಾ ಜನಪರ ಚಳವಳಿಗಳ ಒಕ್ಕೂಟದ ನೇತೃತ್ವದಲ್ಲಿ ಜನಾರೋಗ್ಯಕ್ಕಾಗಿ ಜನಾಂದೋಲನ ಆರಂಭಿಸಲಾಗಿದೆ. ಇದರ ಭಾಗವಾಗಿ ಆಗಸ್ಟ್ ೧೫ರ ಸ್ವಾತಂತ್ರ್ಯ ದಿನದಂದು ಹಾಸನದ ಹಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡದ ಮುಂದೆ ’ಜನಾರೋಗ್ಯದ ಸ್ವಾತಂತ್ರ್ಯಕ್ಕಾಗಿ ಸಾಮೂಹಿಕ ಧರಣಿ ಸತ್ಯಾಗ್ರಹ’ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಜಿಲ್ಲೆಯ ವಿವಿಧ ಜನಪರ ಸಂಘಟನೆಗಳು, ಸಂಘಸಂಸ್ಥೆಗಳು ಮತ್ತು ನಾಗರಿಕರಿಂದ ನಿರಂತರ ಸರಣಿ ಪ್ರತಿಭಟನೆಗಳನ್ನು ನಡೆಸಲಾಗುವುದು. ಅದರ ಭಾಗವಾಗಿ ಇಂದು ಮಹಿಳೆ ಮತ್ತು ಮಹಿಳಾ ಪರ ಸಂಘಟನೆಗಳ ವತಿಯಿಂದ ಈ ಹಕ್ಕೊತ್ತಾಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಆಗಸ್ಟ್ ೧೪ರಂದು ಜಿಲ್ಲೆಯ ಜನರ ಪರವಾಗಿ ಜನಾರೋಗ್ಯದ ಹಕ್ಕೊತ್ತಾಯಗಳನ್ನು ತಮಗೆ ಸಲ್ಲಿಸಲಾಗುವುದು. ಆಗಸ್ಟ್ ೧೫ರಂದು ನಡೆಯುವ ಜನಾರೋಗ್ಯದ ಸ್ವಾತಂತ್ರ್ಯಕ್ಕಾಗಿ ಸಾಮೂಹಿಕ ಧರಣಿ ಸತ್ಯಾಗ್ರಹದ ಸ್ಥಳಕ್ಕೆ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಹಾಗೂ ಜಿಲ್ಲಾಧಿಕಾರಿಯವರಾದ ತಾವು ಸ್ಥಳಕ್ಕೆ ಆಗಮಿಸಿ ಜನಾರೋಗ್ಯದ ಹಕ್ಕೊತ್ತಾಯಗಳನ್ನು ಈಡೇರಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಈ ಮೂಲಕ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆ ಎಂದು ಹೇಳಿದರು.ಜಿಲ್ಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಿ ಅವುಗಳಿಗೆ ಐ.ಪಿ.ಎಚ್.ಎಸ್. ಮಾನದಂಡಗಳ ಅನುಸಾರ ಪ್ರಾಥಮಿಕ ಸೌಲಭ್ಯಗಳಾದ ಸುಸಜ್ಜಿತ ವೈದ್ಯಕೀಯ ಪ್ರಯೋಗಾಲಯ, ಇಸಿಜಿ, ಎಕೋ, ಎಕ್ಸ್‌ರೇ, ತುರ್ತು ಚಿಕಿತ್ಸಾ ಘಟಕ ಮತ್ತು ಆ್ಯಂಬುಲೆನ್ಸ್ ಹಾಗೂ ತಜ್ಞ ವೈದ್ಯರು ಮತ್ತು ಸಿಬ್ಬಂದಿಯನ್ನು ಒದಗಿಸಬೇಕು. ತಾಲೂಕು ಆಸ್ಪತ್ರೆಗಳನ್ನು ಐ.ಪಿ.ಎಚ್.ಎಸ್. ಮಾನದಂಡಗಳಿಗೆ ಅನುಗುಣವಾಗಿ ಮೇಲ್ದರ್ಜೆಗೇರಿಸಿ ಹೃದಯ ಮತ್ತು ಮೂತ್ರಪಿಂಡ ಸಂಬಂಧಿ ಹಾಗೂ ಇನ್ನಿತರೆ ಮಾರಣಾಂತಿಕ ಕಾಯಿಲೆಗಳ ತುರ್ತು ಚಿಕಿತ್ಸಾ ಘಟಕಗಳನ್ನು ತೆರೆಯಬೇಕು ಎಂದರು. ಯಾವುದೇ ಹಾನಿಕಾರಕ ರಾಸಾಯನಿಕ, ಕೃತಕ ಹಾಗೂ ಕಲುಷಿತ ಎಣ್ಣೆ ಮತ್ತು ಕೃತಕ ಬಣ್ಣಗಳು ಬಳಕೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಕೃಷಿಯಲ್ಲಿ ಅಪಾಯಕಾರಿ ಕ್ರಿಮಿ, ಕೀಟನಾಶಕಗಳು ಮತ್ತು ರಾಸಾಯನಿಕಗಳ ಉತ್ಪಾದನೆ, ಮಾರಾಟ ಮತ್ತು ಬಳಕೆಯ ಮೇಲೆ ನಿಯಂತ್ರಣ ಹೇರಬೇಕು ಎಂಧು ಹೇಳಿದರು. ಈ ಬೇಡಿಕೆಗಳು ಈಡೇರುವವರೆಗೂ, ಹಾಸನ ಜಿಲ್ಲೆಯ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವವರೆಗೂ- ಹಾಸನ ಜಿಲ್ಲೆಯ ಎಲ್ಲಾ ಜನಪರ ಸಂಘಟನೆಗಳು, ಸಂಘ ಸಂಸ್ಥೆಗಳು ಮತ್ತು ನಾಗರಿಕರು ನಿರಂತರವಾದ ಪ್ರತಿಭಟನೆ ನಡೆಸಿ ಆಗಸ್ಟ್ ೧೫ರ ಸ್ವಾತಂತ್ರ್ಯ ದಿನದಂದು ನಡೆಯುತ್ತಿರುವ ಜನಾರೋಗ್ಯದ ಸ್ವಾತಂತ್ರ್ಯಕ್ಕಾಗಿ ಸಾಮೂಹಿಕ ಸತ್ಯಾಗ್ರಹದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗಿಳಿಸಬೇಕೆಂದು ಮನವಿ ಮಾಡಿದರು.ಇದೇ ವೇಳೆ ಹಿರಿಯ ಮಹಿಳಾಮುಖಂಡರಾದ ಜಯಲಕ್ಷ್ಮಿ ರಾಜಣ್ಣಗೌಡ, ಬಿಜಿವಿಎಸ್‌ನ ಸಮತಾ ಸಂಚಾಲಕಿ, ಮಮತಾ ಶಿವು, ಜನನಿ ಫೌಂಡೇಶನ್ ಅಧ್ಯಕ್ಷೆ ಭಾನುಮತಿ., ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಪೃಥ್ವಿ ಎಂ.ಜಿ., ಜೀವನಾಧಾರ ಸೇವಾ ಕೇಂದ್ರದ ಹೇಮಾ, ಮುನೀರಾ ಬೇಗಮ್, ಮಹಿಳಾ ಮುಖಂಡರಾದ ಶೋಭಾ, ಹರಿಣಿ ಕುಮಾರಿ, ಲೇಖಕಿ ಸಿ. ಸುವರ್ಣ, ಪ್ರೇರಣಾ ಖಾನಾವಳಿಯ ಧರಣಿ, ಬಿಜಿವಿಎಸ್‌ನ ಸ್ವಾಮಿ ಚಿನ್ನೇನಹಳ್ಳಿ ಸೇರಿದಂತೆ ಪೌಲೋಸ್, ತೇಜಸ್, ಪ್ರಜ್ವಲ್ ಇತರರು ಉಪಸ್ಥಿತರಿದ್ದರು.