ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯ ಸರ್ಕಾರದ ಜಾತಿ ಗಣತಿಗೆ ರಾಜ್ಯ ಒಕ್ಕಲಿಗರ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಅವೈಜ್ಞಾನಿಕವಾಗಿ ನಡೆಸಲಾಗಿರುವ ಸಮೀಕ್ಷೆಯ ಬದಲಾಗಿ ಹೊಸದಾಗಿ ಸಮೀಕ್ಷೆ ನಡೆಸಬೇಕು. ಒಂದು ವೇಳೆ ಜಾತಿ ಗಣತಿ ಜಾರಿಗೆ ಸರ್ಕಾರ ಮುಂದಾದರೆ ಲಿಂಗಾಯತ, ಬ್ರಾಹ್ಮಣ ಸಮುದಾಯಗಳನ್ನು ಜತೆ ಸೇರಿಸಿಕೊಂಡು ರಾಜ್ಯವೇ ಸ್ಥಬ್ಧವಾಗುವಂತಹ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದೆ.ಮಂಗಳವಾರ ಈ ಸಂಬಂಧ ಸುದ್ದಿಗೋಷ್ಠಿ ನಡೆಸಿದ ಸಂಘದ ಅಧ್ಯಕ್ಷ ಬಿ.ಕೆಂಚಪ್ಪಗೌಡ, ಜಾತಿ ಗಣತಿ ಜಾರಿಗೆ ಸರ್ಕಾರ ಹಠಕ್ಕೆ ಬಿದ್ದರೆ ಈ ಸರ್ಕಾರವನ್ನೇ ಬೀಳಿಸುವ ಶಕ್ತಿಯೂ ಒಕ್ಕಲಿಗ ಸಮುದಾಯಕ್ಕಿದೆ ಎಂದೂ ಎಚ್ಚರಿಸಿದರು.
ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ಅವೈಜ್ಞಾನಿಕವಾಗಿದೆ. ಏ.17 ರಂದು ನಡೆಯಲಿರುವ ಸಚಿವ ಸಂಪುಟ ಸಭೆಯ ನಿರ್ಧಾರದ ಬಗ್ಗೆ ನಾವು ಕಾದು ನೋಡುತ್ತೇವೆ. ಒಂದೊಮ್ಮೆ ವರದಿ ಜಾರಿಗೆ ಸರ್ಕಾರ ಮುಂದಾದರೆ ಲಿಂಗಾಯತರು, ಬ್ರಾಹ್ಮಣರು ಸೇರಿ ಇತರೆ ಸಮುದಾಯಗಳ ಜೊತೆ ಸೇರಿ ರಾಜ್ಯವೇ ಬಂದ್ ಆಗುವಂಥ ಹೋರಾಟ ನಡೆಸುತ್ತೇವೆ. ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಹೇಳಿದರುಹಿಂದಿನ ಹೋರಾಟ ನೆನಪಿರಲಿ:ಈ ಹಿಂದೆ ಚಿನ್ನಪ್ಪರೆಡ್ಡಿ ಆಯೋಗ, ವೆಂಕಟಸ್ವಾಮಿ ಆಯೋಗಗಳು ವರದಿ ನೀಡಿದಾಗ ಹೋರಾಟ ನಡೆಸಿದ್ದು ಆಗ ಉಂಟಾಗಿದ್ದ ಪರಿಸ್ಥಿತಿಯನ್ನು ಸರ್ಕಾರ ನೆನಪಿಸಿಕೊಳ್ಳಲಿ. ವರದಿ ಜಾರಿಯಾದರೆ ಸರ್ಕಾರ ಉರುಳಿಸುವ ಶಕ್ತಿ ಒಕ್ಕಲಿಗ ಸಮುದಾಯಕ್ಕಿದೆ ಎಂಬುದನ್ನು ಗಮನದಲ್ಲಿ ಇಟ್ಟುಕೊಂಡಿರಲಿ. ಸಮುದಾಯಕ್ಕೆ ಅನ್ಯಾಯವಾದರೆ ನಾವು ಸಹಿಸುವುದಿಲ್ಲ. ಸಂಘದ ಪದಾಧಿಕಾರಿಗಳು ರಾಜೀನಾಮೆ ನೀಡಿ ಬೀದಿಗಿಳಿದು ಹೋರಾಟ ನಡೆಸುತ್ತೇವೆ ಎಂದು ವಿವರಿಸಿದರು.
ಹಳಸಿದ ವರದಿ:ಇದು ಕಾಂತರಾಜು ಅವರು ನೀಡಿರುವ ವರದಿಯಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರದಿ. 10 ವರ್ಷದ ಹಿಂದಿನ ವರದಿಯನ್ನು ರಾಜಕೀಯ ಉದ್ದೇಶಕ್ಕೆ ಇದೀಗ ಬಹಿರಂಗಗೊಳಿಸಿದ್ದು, ಹಳಸಿದ ವರದಿಯಾಗಿದೆ. ಒಕ್ಕಲಿಗರಲ್ಲಿ ನೂರಕ್ಕೂ ಅಧಿಕ ಉಪ ಪಂಗಡಗಳಿವೆ. ಇದರಲ್ಲಿ ಕೆಲವನ್ನು ಹೊರಗಿಟ್ಟು ನಮ್ಮಲ್ಲೇ ವೈರತ್ವ ಉಂಟು ಮಾಡುವ ಕೆಲಸ ಆಗಿದೆ. ‘ಸಮೀಕ್ಷೆಯವರು ನಮ್ಮ ಮನೆಗೆ ಬಂದಿಲ್ಲ’ ಎಂದು ಸಂಘಕ್ಕೆ ಸಾವಿರಾರು ದೂರವಾಣಿ ಕರೆಗಳು ಬಂದಿವೆ. ಆದ್ದರಿಂದ ಹೊಸದಾಗಿ ಆಧಾರ್ ಆಧಾರಿತ ಸಮೀಕ್ಷೆ ನಡೆಸಲಿ ಎಂದು ಆಗ್ರಹಿಸಿದರು.ಸಂಘದ ಉಪಾಧ್ಯಕ್ಷರಾದ ಡಾ। ಕೆ.ವಿ.ರೇಣುಕಾಪ್ರಸಾದ್, ಎಲ್.ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಟಿ.ಕೋನಪ್ಪರೆಡ್ಡಿ, ಖಜಾಂಚಿ ಎನ್.ಬಾಲಕೃಷ್ಣ(ನಲ್ಲಿಗೆರೆ ಬಾಲು), ನಿರ್ದೇಶಕರಾದ ಸಿ.ಎಂ.ಮಾರೇಗೌಡ, ಎಚ್.ಸಿ.ಜಯಮುತ್ತು, ಗಂಗಾಧರ್, ಕೆ.ಎಸ್. ಸುರೇಶ್, ಆಂಜನಪ್ಪ, ಸಹಾಯಕ ಕಾರ್ಯದರ್ಶಿ ಆರ್.ಹನುಮಂತರಾಯಪ್ಪ ಉಪಸ್ಥಿತರಿದ್ದರು.