ಸಂಸ್ಕಾರ, ದೃಢಸಂಕಲ್ಪವಿದ್ದರೆ ಗುರಿ ಮುಟ್ಟಲು ಸಾಧ್ಯ

| Published : Aug 29 2024, 12:47 AM IST

ಸಾರಾಂಶ

ಸಂಸ್ಕಾರ ಮೈಗೂಡಿಸಿಕೊಂಡರೆ ಖಂಡಿತಾ ತಾನಾಗಿಯೇ ಹಿರಿಯರ ಕುರಿತ ಗೌರವ ಬರುತ್ತದೆ. ಸುಮಾರು ೧೦ ಸಾವಿರ ವರ್ಷಗಳ ಹಿಂದಿನ ಹರಪ್ಪ ಮಹೇಂಜದಾರೋ ನಾಗರೀಕತೆಯಲ್ಲಿ ಸಿಕ್ಕಿರುವ ಸಾಕ್ಷಿಗಳು ಅಂದು ಜನತೆ ಪ್ರಕೃತಿ ಪೂಜೆ ಮಾಡುತ್ತಿದ್ದುದನ್ನು ದೃಢಪಡಿಸಿವೆ

ಕನ್ನಡಪ್ರಭ ವಾರ್ತೆ ಕೋಲಾರಸಂಸ್ಕಾರ ಮತ್ತು ಸಾಧನೆ ಮಾಡುವ ದೃಢ ಸಂಕಲ್ಪವಿದ್ದರೆ ಖಂಡಿತಾ ನೀವು ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂದು ವಿದ್ಯಾರ್ಥಿಗಳಿಗೆ ಬೆಂಗಳೂರು ಪೂರ್ವ ವಲಯ ಡಿಸಿಪಿ ದೇವರಾಜ್ ಕಿವಿಮಾತು ಹೇಳಿದರು.ತಾಲೂಕಿನ ಪಾರ್ಶ್ವಗಾನಹಳ್ಳಿಯ ಸರಸ್ವತಿ ವಿದ್ಯಾಮಂದಿರದ ಆವರಣದಲ್ಲಿ ಶಾಲಾ ಶಿಕ್ಷಣ ಇಲಾಖೆಯಿಂದ ವಕ್ಕಲೇರಿ ಹೋಬಳಿ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಿ ಹಾಗೂ ಕಬಡ್ಡಿ ಫೈನಲ್ ಪಂದ್ಯದಲ್ಲಿ ಜಯಗಳಿಸಿದ ತಂಡಗಳಿಗೆ ನಗದು ಬಹುಮಾನ ವಿತರಿಸಿ ಮಾತನಾಡಿದರು.ತಾಯಿ ಆಶೀರ್ವಾದ ಮುಖ್ಯ

ತಂದೆತಾಯಿ ಹೇಳಿದಂತೆ ಕೇಳಿ, ತಾಯಿಯ ಆಶೀರ್ವಾದ ಇಲ್ಲದವರು ಜೀವನದಲ್ಲಿ ಯಾವುದೇ ಸಾಧನೆಯನ್ನೂ ಮಾಡಲಾರರು, ದೇವರ ಮುಂದೆ ತಲೆತಗ್ಗಿಸಿ ನಂತರ ನಿಮ್ಮ ಕೆಲಸ ಆರಭಿಸಿ. ಸಂಸ್ಕಾರ ಮೈಗೂಡಿಸಿಕೊಂಡರೆ ಖಂಡಿತಾ ತಾನಾಗಿಯೇ ಹಿರಿಯರ ಕುರಿತ ಗೌರವ ಬರುತ್ತದೆ. ಸುಮಾರು ೧೦ ಸಾವಿರ ವರ್ಷಗಳ ಹಿಂದಿನ ಹರಪ್ಪ ಮಹೇಂಜದಾರೋ ನಾಗರೀಕತೆಯಲ್ಲಿ ಸಿಕ್ಕಿರುವ ಸಾಕ್ಷಿಗಳು ಅಂದು ಜನತೆ ಪ್ರಕೃತಿ ಪೂಜೆ ಮಾಡುತ್ತಿದ್ದುದನ್ನು ದೃಢಪಡಿಸಿವೆ ಎಂದರು.

ತಾವು ಓದಿದ ಸರಸ್ವತಿ ವಿದ್ಯಾಮಂದಿರ ಈ ಶಾಲೆಯಲ್ಲಿ ಕಲಿತ ಶಿಸ್ತು ನಿಜಕ್ಕೂ ತಮ್ಮ ಜೀವನವನ್ನೇ ಬದಲಿಸಿತು, ತಮ್ಮನ್ನು ತಿದ್ದಿದ ಇಲ್ಲಿನ ಶಿಕ್ಷಕರಾದ ಮಲ್ನಾಡಹಳ್ಳಿ ರಾಘವೇಂದ್ರ, ರಾಜಶೇಖರ್‌ರನ್ನು ಸ್ಮರಿಸಿದರು. ಜೀವನದಲ್ಲಿ ಒಳ್ಳೆಯದು, ಕೆಟ್ಟದು ಈ ಎರಡು ಕಟು ಸತ್ಯಗಳು, ಒಳ್ಳೆಯ ಕೆಲಸ ಮಾಡುವ, ಒಳ್ಳೆಯ ಮನಸ್ಸು ಇರುವವರಿಗೆ ದೇವರು ಒಲಿಯುತ್ತಾನೆ ಆದ್ದರಿಂದ ಒಳ್ಳೆತನ ಮೈಗೂಡಿಸಿಕೊಳ್ಳಿ ಎಂದರು.

ಎಲ್ಲವನ್ನೂ ಮೀರಿದ್ದು ಪ್ರಕೃತಿ

ದೇವರು ಇರುವುದು ಸತ್ಯ ಏಕೆಂದರೆ ಬಹಳಷ್ಟು ಘಟನೆಗಳು ನಮ್ಮ ಮುಂದೆ ಸಾಕ್ಷಿಯಾಗಿವೆ, ವಿಜ್ಞಾನ ಏನೇ ಹೇಳಲಿ ಪ್ರಕೃತಿ ಎಲ್ಲವನ್ನು ಮೀರಿದೆ, ವಿಶ್ವವನ್ನು ಒಬ್ಬ ಸಲುವುತ್ತಿದ್ದಾನೆ, ಅತಿವೃಷ್ಟಿ, ಅನಾವೃಷ್ಟಿ, ಬಿರುಗಾಳಿ ಇವೆಲ್ಲಾ ನಮ್ಮ ಕಣ್ಣ ಮುಂದೆ ಬಂದು ಹೋಗುತ್ತವೆ. ಹಳ್ಳಿ ಮಕ್ಕಳಲ್ಲಿ ಇರುವ ಶಕ್ತಿ ನಿಜಕ್ಕೂ ದೇವರು ನೀಡಿರುವ ವರ ಎಂದ ಅವರು, ಹಳ್ಳಿ ಸಂಸ್ಕೃತಿ, ಸೊಗಡಿಗೆ ಹೊಂದಿಕೊಂಡು ಮುನ್ನಡೆಯಿರಿ ಸೋಲು ಶಾಸ್ವತವಲ್ಲ, ಗೆಲುವು ಸನ್ಮಾನ ಕೊಟ್ಟರೆ ಸೋಲು ಅನುಭವ ಹೇಳಿಕೊಡುತ್ತದೆ, ಗೆದ್ದವರ ಬಗ್ಗೆ ಅಸೂಯೆ ಬೇಡ ಸ್ನೇಹದೊಂದಿಗಿರಿ ಎಂದು ಸಲಹೆ ನೀಡಿದರು.

ವಿಜೇತರಿಗೆ ಬಹುಮಾನ ವಿತರಣೆ

ಕ್ರೀಡಾಕೂಟದಲ್ಲಿ ಕಬಡ್ಡಿ ಫೈನಲ್ ವೀಕ್ಷಿಸಿದ ಅವರು, ಗೆದ್ದ ತಂಡಕ್ಕೆ ೫ ಸಾವಿರ ಹಾಗೂ ರನ್ನರ್ ತಂಡಕ್ಕೆ ೨ ಸಾವಿರ ರೂ ಘೋಷಿಸಿದ ಅವರು, ನಗದು ಬಹುಮಾನ ವಿತರಿಸಿದರು.ಮುದುವತ್ತಿ ಗ್ರಾ.ಪಂ ಅಧ್ಯಕ್ಷೆ ರತ್ನಮ್ಮ, ವಕ್ಕಲೇರಿ ಎಸ್‌ಎಫ್‌ಸಿಎಸ್ ಅಧ್ಯಕ್ಷ ಪಾಲಾಕ್ಷಗೌಡ, ವಕ್ಕಲೇರಿ ಗ್ರಾ.ಪಂ ಅಧ್ಯಕ್ಷ ಮಂಜುನಾಥ್, ಗ್ರಾ.ಪಂ ಸದಸ್ಯರಾದ ಅಶ್ವಥ್ಥರಾಮ, ಚಲಪತಿ, ಪ್ರೇಮ, ಕಾಂತಮ್ಮ, ಜಂಗಾಲಹಳ್ಳಿ ನಾರಾಯಣಸ್ವಾಮಿ, ನಿವೃತ್ತ ಶಿಕ್ಷಕ ನಾರಾಯಣಸ್ವಾಮಿ, ಖಾಸಗಿ ಶಾಲೆಗಳ ಸಂಘದ ಜಗದೀಶ್, ಸಂಗಮೇಶ್, ಮುಖ್ಯಶಿಕ್ಷಕ ಮರಿಜೋಗಿ, ಪಿಡಿಒ ರವಿ, ಇಸಿಒ ಕೆ.ಶ್ರೀನಿವಾಸ್, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ನಾರಾಯಣಸ್ವಾಮಿ, ಕಾರ್ಯದರ್ಶಿ ಚಂದ್ರಪ್ಪ, ನಿವೃತ್ತ ಇಸಿಒ ಆರ್.ಶ್ರೀನಿವಾಸನ್, ಮುನಿಯಪ್ಪಿ ರಾಮಣ್ಣ, ಸಿಆರ್‌ಪಿ ಬಸವರಾಜ್ ಇದ್ದರು. ಶಿಕ್ಷಕರ ಸಂಘದ ಪ್ರತಿನಿಧಿ ಮಂಗಸಂದ್ರ ಸೋಮಶೇಖರ್ ಸ್ವಾಗತಿಸಿ, ಶಿಕ್ಷಕ ಗೆಳೆಯರ ಬಳಗದ ವೆಂಕಟಾಚಲಪತಿಗೌಡ ನಿರೂಪಿಸಿದರು.