ನಾವು ಮನುಸ್ಮೃತಿ ಓದಿದರೆ ದಿನವೂ ಸುಡಬೇಕು ಎನಿಸುತ್ತದೆ: ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ಮೀನಾಕ್ಷಿ ಬಾಳಿ ಹೇಳಿಕೆ

| Published : May 16 2025, 02:02 AM IST

ನಾವು ಮನುಸ್ಮೃತಿ ಓದಿದರೆ ದಿನವೂ ಸುಡಬೇಕು ಎನಿಸುತ್ತದೆ: ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ಮೀನಾಕ್ಷಿ ಬಾಳಿ ಹೇಳಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಯುವತಿಯರು, ಹುಡುಗಿಯರು ಅದ್ಧೂರಿ ಮದುವೆಯನ್ನು ವಿರೋಧಿಸುತ್ತಾರೆಯೇ? ಪ್ರತಿಯೊಬ್ಬರೂ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ಜೀವನದಲ್ಲಿ ಮದುವೆ ಆಗುವುದು ಒಂದೇ ಸಾರಿ ಎನ್ನುತ್ತಾರೆ. ಅಲ್ಲಿಗೆ ಯಾವ ಆದರ್ಶವೂ ಇಲ್ಲದಂತಾಯಿತು .

ಕನ್ನಡಪ್ರಭ ವಾರ್ತೆ ಮೈಸೂರು

ಅಂಬೇಡ್ಕರ್‌ ಅವರು ಒಮ್ಮೆ ಮನುಸ್ಮೃತಿಯನ್ನು ಸುಟ್ಟರು, ನಾವು ಅದರ 9ನೇ ಅಧ್ಯಾಯ ಓದಿದರೆ ದಿನವೂ ಸುಡಬೇಕು ಎನಿಸುತ್ತದೆ ಎಂದು ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ಮೀನಾಕ್ಷಿ ಬಾಳಿ ಹೇಳಿದರು.

ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಂಶೋಧನಾ ವಿದ್ಯಾರ್ಥಿ ವೇದಿಕೆಯು ಗುರುವಾರ ಆಯೋಜಿಸಿದ್ದ ಬಾಬಾಸಾಹೇಬ್‌ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ 134ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ''''''''ಪ್ರಜಾಪ್ರಭುತ್ವ ಸದೃಢತೆಯಲ್ಲಿ ಮಹಿಳಾ ಸಮುದಾಯದ ಜವಾಬ್ದಾರಿ’ ವಿಷಯ ಮಂಡಿಸಿ ಮಾತನಾಡಿದರು.

ಮಹಿಳೆಯರಿಗೆ ಸಂವಿಧಾನ ಬದ್ಧ ಹಕ್ಕುಗಳಿದ್ದರೂ ಎಷ್ಟರ ಮಟ್ಟಿಗೆ ಹಕ್ಕುಗಳನ್ನು ಪಡೆದುಕೊಳ್ಳುತ್ತಿದ್ದೇವೆ ಎಂಬುದನ್ನು ಗಮನಿಸಬೇಕು. ಮಹಿಳಾ ಪರವಾದ ಕೂಗು, ಹೋರಾಟ ಆಗಾಗ ಮುನ್ನೆಲೆಗೆ ಬರುತ್ತಿರುತ್ತದೆ. ಆದರೆ ಇಂದಿನ ಜಾಗತೀಕರಣ, ಉದಾರೀಕರಣದ ಸಂದರ್ಭದಲ್ಲಿ ಮಹಿಳೆಯರು ತಮ್ಮ ವಿರೋಧಿ ಮೌಲ್ಯಗಳನ್ನೇ ಸುಖಿಸುತ್ತಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಸಂಸ್ಕೃತಿ, ಧರ್ಮದ ಹೆಸರಿನಲ್ಲಿ ಮುನ್ನೆಲೆ ಬರುವ ಮಹಿಳಾ ವಿರೋಧಿ ಮೌಲ್ಯವನ್ನು ಮಹಿಳೆಯರು ಸುಖಿಸುತ್ತಿದ್ದಾರೆ. ಇಡೀ ಶೂದ್ರ ಸಮುದಾಯವನ್ನು ನುಂಗುತ್ತಿರುವುದು ಸನಾತನ ಧರ್ಮ. ಅದರ ಅಪಸವ್ಯಗಳು, ಕೆಟ್ಟ ವಿಷಯ ಕುರಿತು ಮಾತನಾಡಿದಾಗಲೆಲ್ಲಾ ನಮ್ಮನ್ನು ಟ್ರೋಲ್‌ ಮಾಡುವುದೂ ಕೂಡ ಶೂದ್ರರೇ ಆಗಿರುತ್ತಾರೆ. ಅಯ್ಯಪ್ಪ ಸ್ವಾಮಿ ದೇವಸ್ಥಾನದ ಒಳಗೆ ಮಹಿಳೆಯರಿಗೆ ಪ್ರವೇಶವಿಲ್ಲ. ಏಕೆಂದರೆ ಅಯ್ಯಪ್ಪ ಸ್ವಾಮಿ ಗಂಡು ಹೆಣ್ಣಿನ ಸಂಯೋಗದಿಂದ ಹುಟ್ಟಿಲ್ಲ, ಶಿವ ಮತ್ತು ವಿಷ್ಣುವಿನಿಂದ ಹುಟ್ಟಿರುವುದು ಎಂದು ಹೇಳಲಾಗುತ್ತದೆ. ಹೀಗೆ ಹುಟ್ಟಲು ಸಾಧ್ಯವೇ? ನಾವು ನಂಬಿದ್ದೇವೆ ಎಂದರು.

ಸನಾತನ ಧರ್ಮದ ಮೌಲ್ಯಗಳ ವಿರುದ್ಧ ವಚನಕಾರರು ನೇರವಾಗಿ ದಾಳಿ ನಡೆಸಿದ್ದಾರೆ. ವೇದಾಗಮನಗಳನ್ನು ಸರಿಯಾಗಿ ಅಳಿದಿದ್ದಾರೆ. ಸಮಾನತೆ, ಲಿಂಗ ಅಸಮಾನತೆಯ ಬಗ್ಗೆ ವಚನಕಾರರು ಮಾತನಾಡಿದರು. ಮಹಿಳೆಯರಿಗೆ ಧಾರ್ಮಿಕ ಸ್ವಾತಂತ್ರ್ಯ ಎಲ್ಲಿದೆ? ಯಜ್ಞೋಪವೀತ ಧಾರಣೆಗೆ ಅವಕಾಶವಿಲ್ಲ, ವೇದ ಪಠಣಕ್ಕೆ ಅವಕಾಶ ಎಲ್ಲಿದೆ? ಉಪನಿಷತ್ತು ಹೆಣ್ಣು ಮಕ್ಕಳಿಗೆ ಕೊಡುವಂತಿಲ್ಲ. ದಲಿತರಿಗೆ ಕೊಡುವುದಿಲ್ಲ, ಇದೆಲ್ಲವನ್ನೂ ನೋಡಿದರೆ ಹೆಣ್ಣು ಸಿಟ್ಟು ಬರಬೇಕು, ಹೆಣ್ಣನ್ನು ಗುಲಾಮರಾನ್ನಾಗಿ ಮಾಡಿಕೊಂಡಿರುವುದು ಇದೇ ಸನಾತನ ವ್ಯವಸ್ಥೆ ಎಂದು ಅವರು ಕಟುವಾಗಿ ಟೀಕಿಸಿದರು.

ಹೆಣ್ಣನ್ನು ಮಾಯೆ, ಮೈಲಿಗೆ ಎಂದು ಕರೆಯುತ್ತಾರೆ. ಅದೇ 9 ತಿಂಗಳ ರಕ್ತದಿಂದಲೇ ಎಲ್ಲರೂ ಹುಟ್ಟುವುದು ಎಂಬುದು ಗೊತ್ತಿಲ್ಲವೇ? ಈ ವ್ಯವಸ್ಥೆ ಹೆಣ್ಣನ್ನು ಗುಲಾಮಳನ್ನಾಗಿ ಮಾಡಿಕೊಂಡಿದೆ. ಮಹಿಳೆಯರ ಬಗ್ಗೆ ಕೀಳಾಗಿ ಕಾಣಲಾಗುತ್ತಿದೆ. ಮಹಿಳೆಯರಿಗೆ ಶೇ. 60ರಷ್ಟು ಮೀಸಲಾತಿ ನೀಡಲಾಗುತ್ತಿದೆ. ಇದ್ದ ಕಾನೂನು ಬಳಸಿಕೊಂಡಿದ್ದೇವೆಯೇ ಇಲ್ಲ. ಇಂದಿಗೂ ವರದಕ್ಷಿಣೆ ತೆಗೆದುಕೊಳ್ಳದವರು ಇದ್ದಾರೆಯೇ? ವರದಕ್ಷಿಣೆ ತೆಗೆದುಕೊಳ್ಳುವವರು ಬೇಡ ಎಂದು ಯುವತಿಯರು ತೀರ್ಮಾನಿಸಲಿ. ಆಗ ಹುಡುಗರು ಎಲ್ಲಿ ಹೋಗುತ್ತಾರೆ. ಮಠದ ಸ್ವಾಮೀಜಿ ಆಗುತ್ತಾರೆಯೇ?, ಋಷಿಗಳಾಗುತ್ತಾರೆಯೇ? ತಪಸ್ವಿಯಾಗುತ್ತಾರೆಯೇ? ಈಗ ಸ್ವಾಮಿಗಳೇ ನೇರವಾಗಿಲ್ಲ ಎಂದು ಅವರು ಕಿಡಿಕಾರಿದರು.

ಯುವತಿಯರು, ಹುಡುಗಿಯರು ಅದ್ಧೂರಿ ಮದುವೆಯನ್ನು ವಿರೋಧಿಸುತ್ತಾರೆಯೇ? ಪ್ರತಿಯೊಬ್ಬರೂ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ಜೀವನದಲ್ಲಿ ಮದುವೆ ಆಗುವುದು ಒಂದೇ ಸಾರಿ ಎನ್ನುತ್ತಾರೆ. ಅಲ್ಲಿಗೆ ಯಾವ ಆದರ್ಶವೂ ಇಲ್ಲದಂತಾಯಿತು ಎಂದರು.

ಚಲನಚಿತ್ರ ನಟ ಪ್ರಕಾಶ್‌ರಾಜ್‌ ಕಾರ್ಯಕ್ರಮ ಉದ್ಘಾಟಿಸಿದರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕಿ ಪ್ರೊ.ಎನ್‌.ಕೆ. ಲೋಲಾಕ್ಷಿ ಅಧ್ಯಕ್ಷತೆ ವಹಿಸಿದ್ದರು. ಪ್ರಜಾಪ್ರಭುತ್ವದ ಸದೃಢತೆಯಲ್ಲಿ ಯುವ ಸಮುದಾಯದ ಜವಾಬ್ದಾರಿ ಕುರಿತು ಅಜೀಂ ಪ್ರೇಮ್‌ಜೀ ವಿವಿಯ ಪ್ರಾಧ್ಯಾಪಕ ಎ. ನಾರಾಯಣ ಮಾತನಾಡಿದರು. ಪ್ರಾಧ್ಯಾಪಕಿ ವಿಜಯಕುಮಾರಿ ಎಸ್‌. ಕರಿಕಲ್, ಪ್ರಸಾರಾಂಗದ ನಿರ್ದೇಶಕ ಪ್ರೊ.ಎಂ. ನಂಜಯ್ಯ ಹೊಂಗನೂರು, ಜೈನಶಾಸ್ತ್ರ ವಿಭಾಗದ ಅಧ್ಯಕ್ಷ ಪ್ರೊ.ಎಸ್‌.ಡಿ. ಶಶಿಕಲಾ ಇದ್ದರು.