ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿತಮ್ಮ ಅಧಿಕಾರ ಅವಧಿಯಲ್ಲಿ ಶಾಶ್ವತವಾಗಿ ಉಳಿದುಕೊಳ್ಳುವಂತಹ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸದಸ್ಯರು ಶ್ರಮಿಸಬೇಕು ಎಂದು ಪುರಸಭೆ ಮಾಜಿ ಅಧ್ಯಕ್ಷರು ಸಲಹೆ ನೀಡಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ನಡೆದ ಬಜೆಟ್‌ನ ಪೂರ್ವಭಾವಿ ಸಭೆಯಲ್ಲಿ ಪುರಸಭೆ ಮಾಜಿ ಅಧ್ಯಕ್ಷ, ವಿವಿಧ ಪಕ್ಷಗಳ ಹಾಗೂ ಸಂಘಟನೆಗಳ ಮುಖಂಡರು ಪಟ್ಟಣದ ಅಭಿವೃದ್ಧಿಗಾಗಿ ಹಲವು ಸಲಹೆ ನೀಡಿ ಮಾದರಿ ಬಜೆಟ್ ಮಂಡಿಸುವಂತೆ ಒತ್ತಾಯಿಸಿದರು.ಪುರಸಭೆ ಮಾಜಿ ಅಧ್ಯಕ್ಷರಾದ ದೊಡ್ಡಯ್ಯ, ಚಿಕ್ಕರಾಜು, ಮಹೇಶ್‌ಕುಮಾರ್, ದಯಾಶಂಕರ್ ಮಾತನಾಡಿ, ನಾವು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಒಳಚರಂಡಿ, ಪುರಸಭೆ ಕಚೇರಿ, ಕುಡಿಯುವ ನೀರಿನ ಸೌಲಭ್ಯ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ನೂತನ ಸದಸ್ಯರು ಹೆಸರು ಉಳಿಯುವಂತಹ ಕೆಲಸ ಮಾಡಬೇಕೆಂದು ತಿಳಿವಳಿಕೆ ನೀಡಿದರು.
ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ ಮಾತನಾಡಿ, ಪಟ್ಟಣ ದಿನದಿಂದ ದಿನಕ್ಕೆ ದೊಡ್ಡದಾಗಿ ಬೆಳೆಯುತ್ತಿದೆ. ವಾಹನ ಸಂಚಾರ ದಟ್ಟನೆ ಹೆಚ್ಚಾಗಿದೆ. ಸುಗಮ ಸಂಚಾರಕ್ಕೆ ಬೈಪಾಸ್ ರಸ್ತೆ ಮಾಡಲು ಕ್ರಮ ಕೈಗೊಳ್ಳಬೇಕು. ಸಮರ್ಪಕ ಕಸ ವಿಲೇವಾರಿಗೆ ಹೆಚ್ಚಿನ ಅನುದಾನ ನೀಡಿ ಸೂಕ್ತ ಕ್ರಮ ವಹಿಸಬೇಕು. ಈ ಹಿಂದೆಯೇ ಬೈಪಾಸ್ ರಸ್ತೆ ಮಾಡಿದ ಕಾಂಗ್ರೆಸ್ ವೀರಪ್ಪ ಹಾಗೂ ಡಾ.ರಾಜ್‌ಕುಮಾರ್ ಅವರ ಭಾವಚಿತ್ರವನ್ನು ಪುರಸಭೆ ಸಭಾಂಗಣದಲ್ಲಿ ಅಳವಡಿಸಬೇಕು ಎಂದು ಆಗ್ರಹಿಸಿದರು.ಪುರಸಭೆ ಮಾಜಿ ಅಧ್ಯಕ್ಷ ಚಿಕ್ಕರಾಜು ಮಾತನಾಡಿ, ಪೇಟೆ ಬೀದಿ ಇತಿಹಾಸ ಪ್ರಸಿದ್ಧ ಕೆಂಪಣ್ಣನ ಕಟ್ಟೆ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಅಲ್ಲಿಯೇ ವಾಕಿಂಗ್ ಟ್ರಾಕ್ ಹಾಗೂ ಪಾರ್ಕ್ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ಪಟ್ಟಣದಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಬದಲಾವಣೆ ಮಾಡುವ ಸಂಬಂಧ ಶಾಸಕರ ಗಮನಕ್ಕೆ ಬಂದು ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು. ಹಂದಿ, ಕೋತಿ ಹಾಗೂ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದೆ. ಅವುಗಳ ಕಡಿವಾಣ ಮುಂದಾಗಬೇಕು. ಐತಿಹಾಸಿಕ ಸಿಡಿಹಬ್ಬ ಆಚರಣೆಯ ವೇಳೆ ಅಭಿವೃದ್ಧಿಗೆ ಪ್ರತ್ಯೇಕವಾಗಿ ಬಜೆಟ್ ನಲ್ಲಿ ಹಣ ಮೀಸಲಿಡಬೇಕು ಎಂದು ಒತ್ತಾಯಿಸಿದರು.ಪುರಸಭೆ ಮಾಜಿ ಅಧ್ಯಕ್ಷ ದಯಾಶಂಕರ್ ಮಾತನಾಡಿ, ಪಟ್ಟಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಅನುದಾನ ಮೀಸಲಿಡಬೇಕು. ಸಾರಿಗೆ ಬಸ್ ನಿಲ್ದಾಣದ ಮುಂಭಾಗ ಇಷ್ಟಬಂದ ರೀತಿಯಲ್ಲಿ ನಿಲ್ಲಿಸುವ ವಾಹನಗಳಿಗೆ ದಂಡ ವಿಧಿಸಬೇಕು. ಟೀ ಲೋಟಗಳನ್ನು ಬೇಕಾ ಬಿಟ್ಟಿ ಬಿಸಾಡುವ ಟೀ ಅಂಗಡಿಗಳಿಗೆ ನೊಟೀಸ್ ಜಾರಿ ಮಾಡಬೇಕೆಂದು ಸಲಹೆ ನೀಡಿದರು.
ಮುಖಂಡರಾದ ಮಹೇಶ್ ಕುಮಾರ್, ಚಿಕ್ಕಣ್ಣ ಮಾತನಾಡಿ, ರಸ್ತೆಯ ಅಭಿವೃದ್ಧಿ ಜೊತೆಗೆ ಚರಂಡಿ, ಒಳಚರಂಡಿ ಪ್ರಗತಿಗೆ ಹೆಚ್ಚಿನ ಗಮನ ಕೊಡಬೇಕು. ರಾಜಕಾಲುವೆ ಸ್ವಚ್ಛತೆ ಹಾಗೂ ಸಾಂಕ್ರಮಿಕ ರೋಗಗಳನ್ನು ನಿಯಂತ್ರಿಯಲು ನೀರನ್ನು ಪರೀಕ್ಷೆ ಮಾಡಿಸಲು ಆದ್ಯತೆ ನೀಡಬೇಕೆಂದರು.ಪುರಸಭೆ ಮುಖ್ಯಾಧಿಕಾರಿ ನಾಗರತ್ನ ಮಾತನಾಡಿ, ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರ ಅಭಿಪ್ರಾಯಗಳನ್ನು ಬಜೆಟ್‌ನಲ್ಲಿ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು. ಪುರಸಭೆ ಸದಸ್ಯರು, ಮಾಜಿ ಅಧ್ಯಕ್ಷರು, ಸದಸ್ಯರು ಹಾಗೂ ಹಿರಿಯ ನಾಗರೀಕರ ಸಲಹೆ ಸಹಕಾರದೊಂದಿಗೆ ಪುರಸಭೆಯನ್ನು ಅಭಿವೃದ್ಧಿಗೊಳಿಸಲು ಶ್ರಮಿಸೋಣ ಎಂದರು.