5.5 ಲಕ್ಷ ಮೆಟ್ರಿಕ್ ಟನ್ ಕಬ್ಬುನುರಿಸುವ ಗುರಿ

| Published : Sep 24 2024, 01:53 AM IST

5.5 ಲಕ್ಷ ಮೆಟ್ರಿಕ್ ಟನ್ ಕಬ್ಬುನುರಿಸುವ ಗುರಿ
Share this Article
  • FB
  • TW
  • Linkdin
  • Email

ಸಾರಾಂಶ

ಭಾಲ್ಕಿ ತಾಲೂಕಿನ ಹುಣಜಿ(ಎ) ಸಮೀಪದ ಮಹಾತ್ಮ ಗಾಂಧಿ ಸಹಕಾರ ಸಕ್ಕರೆ ಕಾರ್ಖಾನೆ ಆವರಣದಲ್ಲಿ 33ನೇ ವಾರ್ಷಿಕ ಮಹಾಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಭಾಲ್ಕಿ

ಪ್ರಸಕ್ತ ಸಾಲಿನಲ್ಲಿ ಮಹಾತ್ಮ ಗಾಂಧಿ ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿ 5.5ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿ ಹೊಂದಲಾಗಿದೆ ಎಂದು ಕಾರ್ಖಾನೆ ಅಧ್ಯಕ್ಷ ವೈಜಿನಾಥ ಪಾಟೀಲ್ ಜ್ಯಾಂತಿ ಹೇಳಿದರು.

ತಾಲೂಕಿನ ಹುಣಜಿ(ಎ) ಸಮೀಪದ ಮಹಾತ್ಮ ಗಾಂಧಿ ಸಹಕಾರ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ 33ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ಸಾಲಿನಲ್ಲಿ 148 ದಿನಗಳ ಕಾಲ ಕಬ್ಬಿನ ಹಂಗಾಮು ನಡೆದಿದ್ದು 4,70,325 ಮೆಟ್ರಿಕ್ ಟನ್ ಕಬ್ಬು ನುರಿಸಿ ಕಬ್ಬು ಕಟಾವು ಮತ್ತು ಸಾಗಾಣಿಕೆ ಸೇರಿ 164.67 ಕೋಟಿ ರು.ಹಣ ಪಾವತಿಸಲಾಗಿದೆ ಎಂದು ತಿಳಿಸಿದರು.

ಪ್ರಸ್ತುತ 2024-25ನೇ ಸಾಲಿನಲ್ಲಿ ಜಿಲ್ಲೆಯ 39,964 ಎಕರೆ ಕಬ್ಬು ಕ್ಷೇತ್ರವನ್ನು ನೋಂದಾಯಿಸುವ ಗುರಿ ಹೊಂದಲಾಗಿದೆ. ಇದರ ಆಧಾರದ ಮೇಲೆ 5.5 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವುದರ ಜತೆಗೆ ಶೇ.10 ರಷ್ಟು ಸಕ್ಕರೆ ಇಳುವರಿ ತರುವ ಪ್ರಯತ್ನ ನಡೆಯುತ್ತಿದೆ ಎಂದರು.

ಜಿಲ್ಲೆಯ ರೈತರು ಸೂಕ್ತ ಸಲಹೆ ಪಡೆದು ಸುಧಾರಿತ ಕಬ್ಬಿನ ತಳಿಗಳನ್ನು ನಾಟಿ ಮಾಡಬೇಕು. ಇದರಿಂದ ಸಕ್ಕರೆ ಇಳುವರಿ ಹೆಚ್ಚಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ಕಚೇರಿ ಅಧೀಕ್ಷಕ ರಮೇಶ ಚಿದ್ರಿ ವಾರ್ಷಿಕ ವರದಿ ಮಂಡಿಸಿದರು. ಈ ವೇಳೆ ನಿರ್ದೇಶಕರಾದ ಬಾಬುರಾವ ಪಾಟೀಲ್, ಬಾಬುರಾವ ತುಂಬಾ, ಶಿವಶಂಕರ ಪಾಟೀಲ್, ಲಿಯಾಕತ್ ಅಲಿ ಅಹ್ಮದ್ ಅಲಿ, ಸಂಗಾರೆಡ್ಡಿ ಸಿದ್ದಾರೆಡ್ಡಿ, ಶಂಕರ ಚವ್ಹಾಣ, ಅಶೋಕಕುಮಾರ ಕೋಟಿ, ಬಾಬುರಾವ ಪೊಲೀಸ್ ಪಾಟೀಲ್, ಸಂಗ್ರಾಮ ಮುದ್ನಾಳೆ, ಸುರೇಖಾ ಭೀಮರಾವ ಶೆಟಕಾರ್, ನಳಿನಿ ಸುನಿಲ ಪಾಟೀಲ್, ವ್ಯವಸ್ಥಾಪಕ ಬಿ.ಶಿವಣ್ಣ ಇದ್ದರು.

ಪ್ರತಿ ಟನ್‌ಗೆ ₹3 ಸಾವಿರ ನಿಗದಿ ಪಡಿಸಿ

ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ಸಿದ್ರಾಮಪ್ಪ ಆಣದೂರೆ, ಮಲ್ಲಿಕಾರ್ಜುನ ಸ್ವಾಮಿ, ತಾಲೂಕು ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಸೇರಿ ವಿವಿಧ ಭಾಗದ ರೈತರು ಮಾತನಾಡಿ, ಪ್ರತಿ ಟನ್ ಕಬ್ಬಿಗೆ 3 ಸಾವಿರ ರು.ದರ ನಿಗದಿಪಡಿಸಬೇಕು. ಜತೆಗೆ ಕಾರ್ಖಾನೆಗೆ ಕಬ್ಬು ಸಾಗಿಸಿದ ರೈತರ ಪ್ರತಿ ಟನ್ ಕಬ್ಬಿಗೆ ಕನಿಷ್ಠ 2-5 ಕೆಜಿ ಉಚಿತ ಸಕ್ಕರೆ ವಿತರಿಸುವುದು ಸೇರಿ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ಕಾರ್ಖಾನೆ ಅಧ್ಯಕ್ಷ ವೈಜಿನಾಥ ಪಾಟೀಲ್ ಜ್ಯಾಂತಿ ಮಾತನಾಡಿ, ಆಡಳಿತ ಮಂಡಳಿಯ ಸಭೆಯಲ್ಲಿ ಚರ್ಚಿಸಿ ರೈತರ ಬೇಡಿಕೆಗಳನ್ನು ಈಡೇರಿಸುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.