ಸಾರಾಂಶ
ಮಕ್ಕಳು ಓದಿನ ಜೊತೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಲು ಉತ್ತೇಜನ ನೀಡಬೇಕು. ಮಕ್ಕಳು ಲವಲವಿಕೆಯಿಂದ ಓದಲು ಆರಂಭಿಸಲಿದ್ದು, ಮನೆಯೇ ಮೊದಲ ಪಾಠಶಾಲೆ ಎಂಬುದನ್ನು ಅರಿಯಬೇಕು.
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಮಕ್ಕಳ ಭೌದ್ಧಿಕ ವಿಕಸನಕ್ಕೆ ಪ್ರತಿಭಾ ಕಾರಂಜಿ ದಿವ್ಯೌಷಧಿಯಾಗಿದೆ ಎಂದು ಕೆಪಿಎಸ್ ಶಾಲೆಯ ಎಡಿಎಂಸಿ ಅಧ್ಯಕ್ಷ ಐಕನಹಳ್ಳಿ ಕೃಷ್ಣೇಗೌಡ ಹೇಳಿದರು.ಪಟ್ಟಣದ ಕೆಪಿಎಸ್ ಶಾಲಾ ಆವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಪ್ರತಿಭಾ ಕಾರಂಜಿಯಲ್ಲಿ ಮಾತನಾಡಿ, ಪ್ರತಿವರ್ಷ ಮಕ್ಕಳ ಪ್ರತಿಭಾ ಕೌಶಲ್ಯತೆ ಗುರುತಿಸಲು ಇಂತಹ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
ಮಕ್ಕಳ ಮನಸ್ಸಿಗೆ ಉಲ್ಲಾಸ ನೀಡಿ ಖುಷಿ ಪಡಿಸುವ ಇಂತಹ ಚಟುವಟಿಕೆಗಳಿಂದ ಓದಿನ ಹಂಬಲ ಹೆಚ್ಚಲಿದೆ. ಒಂದಷ್ಟು ಸಮಯ ನೃತ್ಯ, ಚಿತ್ರಕಲೆ, ಹಾಡುಗಾರಿಕೆ ಕಲಿಸಿಕೊಟ್ಟು ಮಕ್ಕಳೊಂದಿಗೆ ಪೋಷಕರು ಮಕ್ಕಳಾಗಬೇಕು ಎಂದು ಕಿವಿಮಾತು ಹೇಳಿದರು.ಕೆಪಿಎಸ್ ಶಾಲೆ ಉಪಪ್ರಾಂಶುಪಾಲ ಚಲುವನಾರಾಯಣಸ್ವಾಮಿ ಮಾತನಾಡಿ, ಮಕ್ಕಳು ಓದಿನ ಜೊತೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಲು ಉತ್ತೇಜನ ನೀಡಬೇಕು. ಮಕ್ಕಳು ಲವಲವಿಕೆಯಿಂದ ಓದಲು ಆರಂಭಿಸಲಿದ್ದು, ಮನೆಯೇ ಮೊದಲ ಪಾಠಶಾಲೆ ಎಂಬುದನ್ನು ಅರಿಯಬೇಕು ಎಂದು ವಿನಂತಿಸಿದರು.
ಕ್ಲಸ್ಟರ್ ಮಟ್ಟದ 18 ಹಿರಿಯ ಪ್ರಾಥಮಿಕ ಶಾಲೆ ಮಕ್ಕಳು ಭಾಗವಹಿಸಿದ್ದರು. ಈ ವೇಳೆ ಕಥೆ ಹೇಳುವುದು, ಕ್ಲೇಮಾಡಲಿಂಗ್, ಭಾವಗೀತೆ, ಜಾನಪದಗೀತೆ, ಭಕ್ತಿಗೀತೆ, ಚಿತ್ರಕಲೆ, ಆಶುಭಾಷಣ ಸ್ಪರ್ಧೆ, ಕಂಠಪಾಠ ಸ್ಪರ್ಧೆ, ಛದ್ಮವೇಷ, ಧಾರ್ಮಿಕ ಪಠಣೆ ಮತ್ತಿತರ ಸ್ಪರ್ಧೆಗಳಲ್ಲಿ ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕಿ ಮಮತಾ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘ ರಾಜ್ಯಾಧ್ಯಕ್ಷ ಎಲ್.ಎಸ್. ಧರ್ಮಪ್ಪ, ಸಿಆರ್‌ಪಿ ರಾಮಚಂದ್ರು, ಪ್ರೌಢಶಾಲಾ ಶಿಕ್ಷಕ ಸಂಘ ತಾಲೂಕು ಅಧ್ಯಕ್ಷ ಎಸ್.ಎಂ. ಬಸವರಾಜು, ದಯಾನಂದ್, ಸ್ವಾಮಿ, ಸುಮಾ ಇದ್ದರು.