ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ 15ಕ್ಕೆ

| Published : Sep 04 2024, 02:01 AM IST

ಸಾರಾಂಶ

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪೂರ್ವ ಸಿದ್ದತಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಸೆ.15 ರಂದು ರಾಜ್ಯಾದ್ಯಂತ ಏಕ ಕಾಲಕ್ಕೆ ಆಚರಿಸುವುದರ ಜೊತೆಗೆ ಸಂವಿಧಾನ ಪೀಠಿಕೆ ವಾಚನ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ಹೇಳಿದರು.ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಸಂಬಂಧ ಡಿಸಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ದಿನದ ಅಂಗವಾಗಿ ಚಾಮರಾಜ ನಗರವರೆಗೆ ಏಕಕಾಲಕ್ಕೆ ಮಾನವ ಸರಪಳಿ ನಿರ್ಮಿಸಲಾಗುತ್ತಿದ್ದು, ಜಿಲ್ಲೆಯಲ್ಲೂ 110 ಕಿಮೀ ನಷ್ಟು ಮಾನವ ಸರಪಳಿ ನಿರ್ಮಿಸುತ್ತಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸಲು ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ತಮ್ಮೇನಹಳ್ಳಿ (ಗಡಿಭಾಗ)ಯಿಂದ ಆರಂಭಗೊಳ್ಳುವ ಮಾನವ ಸರಪಳಿ ಹಿರಿಯೂರು ತಾಲೂಕಿನ ಜವಗೊಂಡನಹಳ್ಳಿ (ಗಡಿಭಾಗ)ವರೆಗೆ 110 ಕಿಮೀ ನಿರ್ಮಾಣಗೊಳ್ಳಲಿದೆ. ಜಿಲ್ಲೆಯ ಮೊಳಕಾಲ್ಮೂರು, ಚಳ್ಳಕೆರೆ ಮತ್ತು ಹಿರಿಯೂರು ತಾಲೂಕುಗಳಲ್ಲಿ ಈ ಮಾನವ ಸರಪಳಿ ನಿರ್ಮಾಣ ಆಗಬೇಕು. ಇದೊಂದು ವಿಶೇಷ ಮತ್ತು ದೇಶಾಭಿಮಾನದ ಕಾರ್ಯಕ್ರಮವಾಗಿದ್ದು ಎಲ್ಲ ಸಾರ್ವಜನಿಕರು, ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಜನಪ್ರತಿನಿಧಿಗಳು, ಸರ್ಕಾರಿ ನೌಕರರು ಸ್ವಯಂ ಪ್ರೇರಿತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ತಿಳಿಸಿದರು.

ಡಿಸಿ ವೆಂಕಟೇಶ್ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 110 ಕಿಮೀ ಮಾನವ ಸರಪಳಿ ನಿರ್ಮಿಸಲಾಗುತ್ತಿದ್ದು, ಪ್ರತಿ ಕಿಮೀ ಗೆ ಸುಮಾರು 850 ಜನರಂತೆ, ಒಟ್ಟು 110 ಕಿಮೀ ಗೆ ಅಂದಾಜು 95,000 ಜನರ ಅಗತ್ಯವಿದೆ. ಇದಕ್ಕಾಗಿ ಈಗಾಗಲೆ ಸಿದ್ಧತೆಗಳನ್ನು ಪ್ರಾರಂಭಿಸಲಾಗಿದ್ದು, ಸುಮಾರು 35,000 ವಿದ್ಯಾರ್ಥಿಗಳು, 25,000 ಸ್ವ-ಸಹಾಯ ಸಂಘ ಪ್ರತಿನಿಧಿಗಳು, 2000 ಆಶಾ, ಅಂಗನವಾಡಿ ಕಾರ್ಯಕರ್ತೆಯರು, 4000 ಬೋಧಕ, ಬೋಧಕೇತರ ಸಿಬ್ಬಂದಿ, ಮಾರ್ಗದ ಅಕ್ಕ-ಪಕ್ಕದ ಗ್ರಾಪಂಗಳಿಂದ ಸುಮಾರು 25,000 ನಗರ, ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಸುಮಾರು 10,000 ಜನರು ಭಾಗಿಯಾಗುವ ನಿರೀಕ್ಷೆ ಇದೆ ಎಂದರು.

ಇದಕ್ಕಾಗಿ ಖಾಸಗಿ ಶಾಲೆಗಳ ಸುಮಾರು 200 ಕ್ಕೂ ಹೆಚ್ಚು ಬಸ್‌ಗಳನ್ನು ಸಾರಿಗೆ ಸಂಪರ್ಕಕ್ಕಾಗಿ ಬಳಸಲು ಯೋಜಿಸಲಾಗಿದೆ. ಪ್ರತಿ 5 ಕಿಮೀ ಗೆ ಒಬ್ಬರು ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಯನ್ನಾಗಿ ನಿಯೋಜಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರು, ಮುಂಜಾಗ್ರತಾ ಕ್ರಮವಾಗಿ ವೈದ್ಯಕೀಯ ರಕ್ಷಣೆ, ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗುವುದು ಎಂದರು.

ಸಭೆಯಲ್ಲಿ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಟಿ.ರಘುಮೂರ್ತಿ, ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ, ಆದಿಜಾಂಬವ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಜಿ.ಎಸ್. ಮಂಜುನಾಥ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಾಜ್‍ಪೀರ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಬಂಡಾರು, ಉಪವಿಭಾಗಾಧಿಕಾರಿ ಕಾರ್ತಿಕ್, ಸಮಾಜ ಕಲ್ಯಾಣ ಇಲಾಖೆ ಜಂಟಿನಿರ್ದೇಶಕ ಜಗದೀಶ್ ಹೆಬ್ಬಳ್ಳಿ ಉಪಸ್ಥಿತರಿದ್ದರು.