ಕೃಷ್ಣ ಗೌಡ ಮಾದ್ಲಮನೆಗೆ ‘ಜನಪದ ವೈದ್ಯ ಸಿರಿ’ ಪ್ರಶಸ್ತಿ

| Published : Nov 30 2024, 12:46 AM IST

ಸಾರಾಂಶ

ಸುಮಾರು ೩೫ ವರ್ಷದ ಅನುಭವದೊಂದಿಗೆ ಬಹುಮೂಲಿಕ ಪದ್ಧತಿಯಲ್ಲಿ ಪಾರಂಗತರಾಗಿರುವ ಅವರು, ಬೆನ್ನುನೋವು, ಮೂಲವ್ಯಾಧಿ, ಚರ್ಮರೋಗ, ಸ್ತ್ರೀಯರ ರೋಗಗಳು, ದುರ್ಬಲತೆ ಮುಂತಾದ ಅನೇಕ ರೋಗಗಳಿಗೆ ಸೂಕ್ತವಾಗಿ ತಾವೇ ತಯಾರಿಸಿದ ಸಸ್ಯಮೂಲದ ಔಷಧಿಗಳ ಮೂಲಕ ಚಿಕಿತ್ಸೆ ನೀಡುತ್ತಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ಕುತ್ಪಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆಯ ಜಾನಪದ ವೈದ್ಯಕೀಯ ಸಂಶೋಧನಾ ಕೇಂದ್ರದ ವತಿಯಿಂದ ಸಂಸ್ಥೆಯ ಅಧ್ಯಕ್ಷ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಪ್ರತೀವರ್ಷ ನೀಡುವ ರಾಜ್ಯಮಟ್ಟದ ‘ಜನಪದ ವೈದ್ಯ ಸಿರಿ ಪ್ರಶಸ್ತಿ’ಯನ್ನು ಈ ಬಾರಿ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಹಾರ್ಸಿಕಟ್ಟ ಗ್ರಾಮದ ಜಾನಪದ ವೈದ್ಯ ಕೃಷ್ಣ ಗೌಡ ಮಾದ್ಲಮನೆ (63) ಅವರಿಗೆ ನೀಡಿ ಗೌರವಿಸಲಾಯಿತು.

ಸುಮಾರು ೩೫ ವರ್ಷದ ಅನುಭವದೊಂದಿಗೆ ಬಹುಮೂಲಿಕ ಪದ್ಧತಿಯಲ್ಲಿ ಪಾರಂಗತರಾಗಿರುವ ಅವರು, ಬೆನ್ನುನೋವು, ಮೂಲವ್ಯಾಧಿ, ಚರ್ಮರೋಗ, ಸ್ತ್ರೀಯರ ರೋಗಗಳು, ದುರ್ಬಲತೆ ಮುಂತಾದ ಅನೇಕ ರೋಗಗಳಿಗೆ ಸೂಕ್ತವಾಗಿ ತಾವೇ ತಯಾರಿಸಿದ ಸಸ್ಯಮೂಲದ ಔಷಧಿಗಳ ಮೂಲಕ ಚಿಕಿತ್ಸೆ ನೀಡುತ್ತಾರೆ.ಮುಖ್ಯ ಅತಿಥಿಗಳಾದ ಡಾ. ಎಂ.ಆರ್. ವಾಸುದೇವನ್ ನಂಬೂದಿರಿ, ಪ್ರಾಂಶುಪಾಲ ಡಾ. ಮಮತಾ ಕೆ.ವಿ., ವೈದ್ಯಕೀಯ ಅಧೀಕ್ಷಕ ಡಾ. ನಾಗರಾಜ್ ಎಸ್., ಆಡಳಿತ ವಿಭಾಗ ಮುಖ್ಯಸ್ಥ ಡಾ. ವೀರಕುಮಾರ ಕೆ., ಶೈಕ್ಷಣಿಕ ವಿಭಾಗ ಮುಖ್ಯಸ್ಥೆ ಡಾ. ಶ್ರೀಲತಾ ಕಾಮತ್, ಸ್ನಾತಕೋತ್ತರ ವಿಭಾಗದ ಡೀನ್ ಡಾ. ಅಶೋಕ್ ಕುಮಾರ್ ಬಿ.ಎನ್., ಸ್ನಾತಕ ವಿಭಾಗದ ಡೀನ್ ಡಾ. ರಜನೀಶ್ ವಿ. ಗಿರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸನ್ಮಾನಿತರಾದ ಕೃಷ್ಣ ಗೌಡ ಹರ್ಷವ್ಯಕ್ತಪಡಿಸಿ, ಪಾರಂಪರಿಕ ಸಂಪ್ರದಾಯದಿಂದ ಬಂದ ಜಾನಪದ ಶೈಲಿಯ ವೈದ್ಯಕೀಯ ಶುಶ್ರೂಷೆಯ ಬಗ್ಗೆ ಮಾತನಾಡಿದರು. ಆಯುರ್ವೇದ ವಿದ್ಯಾರ್ಥಿಗಳಿಗೆ ಮುಂದಿನ ದಿನದಲ್ಲಿ ಆಯುರ್ವೇದಕ್ಕೆ ಹೆಚ್ಚಿನ ಬೇಡಿಕೆ ಬರುವುದರಿಂದ ಆಯುರ್ವೇದದಲ್ಲಿ ನಂಬಿಕೆ ಇಡಬೇಕಾಗಿ ಕಿವಿಮಾತು ನುಡಿದರು.ಜನಪದ ವೈದ್ಯಕೀಯ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ರವಿಕೃಷ್ಣ ಎಸ್. ಸ್ವಾಗತಿಸಿದರು. ಸದಸ್ಯರಾದ ಡಾ. ರವಿ ಕೆ.ವಿ. ವೈದ್ಯರನ್ನು ಪರಿಚಯಿಸಿದರು. ಡಾ. ಸುಶ್ಮಿತಾ ವಿ.ಎಸ್. ಸನ್ಮಾನ ಪತ್ರ ವಾಚಿಸಿದರು.