ಬಿಡದಿ ವಿವಿದ್ಧೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿಯಮಿತದ ಆಡಳಿತ ಮಂಡಳಿ ಸದಸ್ಯರ ಚುನಾವಣೆ ದಿನ ಕಳೆದಂತೆ ರಂಗೇರುತ್ತಿದೆ. ಜೆಡಿಎಸ್- ಬಿಜೆಪಿ ಮೈತ್ರಿಗೆ ಪ್ರಬಲ ಪೈಪೋಟಿ ನೀಡಲು ಕಾಂಗ್ರೆಸ್ ಪಕ್ಷ ಆಪರೇಷನ್ ಹಸ್ತಕ್ಕೆ ಮುಂದಾಗಿದೆ.

ಎಂ.ಅಫ್ರೋಜ್ ಖಾನ್

ಕನ್ನಡಪ್ರಭ ವಾರ್ತೆ ರಾಮನಗರ

ಬಿಡದಿ ವಿವಿದ್ಧೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿಯಮಿತದ ಆಡಳಿತ ಮಂಡಳಿ ಸದಸ್ಯರ ಚುನಾವಣೆ ದಿನ ಕಳೆದಂತೆ ರಂಗೇರುತ್ತಿದೆ. ಜೆಡಿಎಸ್- ಬಿಜೆಪಿ ಮೈತ್ರಿಗೆ ಪ್ರಬಲ ಪೈಪೋಟಿ ನೀಡಲು ಕಾಂಗ್ರೆಸ್ ಪಕ್ಷ ಆಪರೇಷನ್ ಹಸ್ತಕ್ಕೆ ಮುಂದಾಗಿದೆ.

ಬಿಡದಿ ಸೊಸೈಟಿ ಚುನಾವಣೆ ಜೆಡಿಎಸ್ - ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಪಾಲಿಗೆ ಪ್ರತಿಷ್ಠೆಯ ಕಣವಾಗಿದೆ. ಈ ಚುನಾವಣೆಯಲ್ಲಿ ಮೈತ್ರಿ ಸಾಧಿಸಿರುವ ದಳ - ಕಮಲ ಪಕ್ಷಗಳು ಒಮ್ಮತದಿಂದ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತೀರ್ಮಾನಿಸಿವೆ. ಮತ್ತೊಂದೆಡೆ ಕಾಂಗ್ರೆಸ್ ಪಕ್ಷ ಗೆಲ್ಲುವ ಅಭ್ಯರ್ಥಿಗಳನ್ನು ಗುರುತಿಸಿ ಅಖಾಡಕ್ಕಿಳಿಸಲು ಸಿದ್ಧತೆ ನಡೆಸಿದೆ.

5 ಮಂದಿಯಿಂದ ನಾಮಪತ್ರ ಸಲ್ಲಿಕೆ:

ಏ.12ರಂದು ಬಿಡದಿಯ ಛತ್ರದ ಬಾನಂದೂರು ರಸ್ತೆಯಲ್ಲಿರುವ ಬಿ.ಜಿ.ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಸಂಘದ ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆ ನಡೆಯಲಿದೆ.

ಬಿಡದಿಯ ಸಂಘದ ಕಚೇರಿಯಲ್ಲಿ ಏಪ್ರಿಲ್ 1ರಿಂದ ನಾಮಪತ್ರ ಸ್ವೀಕಾರ ಪ್ರಕ್ರಿಯೆ ಆರಂಭವಾಗಿದ್ದು, ಜೆಡಿಎಸ್ - ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಜಿಪಂ ಮಾಜಿ ಸದಸ್ಯ ಎಚ್.ಎಲ್.ಚಂದ್ರು, ಚಿಕ್ಕಣ್ಣಯ್ಯ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ವಾಜರಹಳ್ಳಿ ಮಹೇಶ್, ದೊಡ್ಡ ರೇವಯ್ಯ, ಆಮ್ ಆದ್ಮಿ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿ ಶಿವಣ್ಣ ಉಮೇದುವಾರಿಕೆ ಸಲ್ಲಿಸಿದ್ದಾರೆ.

ಕೈ ಪಡೆಯ ಆಪರೇಷನ್ ಹಸ್ತ ಸಕ್ಸಸ್ :

ಬಿಡದಿ ಸೊಸೈಟಿಯನ್ನು ಕೈ ವಶ ಪಡಿಸಿಕೊಳ್ಳಲು ಶಾಸಕ ಎಚ್.ಸಿ.ಬಾಲಕೃಷ್ಣರವರು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಗಾಣಕಲ್ ನಟರಾಜ್, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಯರೇಹಳ್ಳಿ ಮಂಜು, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಚಂದ್ರಶೇಖರ್ , ಬಿಡದಿ ಪುರಸಭೆ ವಿಪಕ್ಷ ನಾಯಕ ಸಿ.ಉಮೇಶ್ , ಬಿಎಂಐಸಿಪಿ ನಿರ್ದೇಶಕ ಇಬ್ಬನಕುಪ್ಪೆ ರಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್ ಸೇರಿ ಹಲವು ಕಾಂಗ್ರೆಸ್ ನಾಯಕರಿಗೆ ಜವಾಬ್ದಾರಿ ಹಂಚಿಕೆ ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಾಳಯ ಆಪರೇಷನ್ ಹಸ್ತಕ್ಕೂ ಮುಂದಾಗಿದೆ. ಇದರ ಭಾಗವಾಗಿ ಮಂಚನಾಯಕನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ರವಿಕುಮಾರ್, ಶೇಷಗಿರಿಹಳ್ಳಿ ಗ್ರಾಮದ ಮುಖಂಡರಾದ ಮಂಜುನಾಥ್, ಬಾಲಾಜಿ ಹಾಗೂ ಭೈರಾಗಿ ಕಾಲೋನಿಯ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕೆಂಗಲ್ ಹನುಮಂತಯ್ಯ ಅವರು ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಚುನಾವಣೆ ವೇಳೆಗೆ ಮತ್ತಷ್ಟು ಜೆಡಿಎಸ್ - ಬಿಜೆಪಿ ಮುಖಂಡರು ಕೈ ಪಾಳಯ ಸೇರುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಬಿಡದಿ ಸೊಸೈಟಿ ಚುನಾವಣೆ ಪ್ರತಿಷ್ಠೆ ಏಕೆ ?:

ಬಿಡಿಸಿಸಿ ಬ್ಯಾಂಕ್ ವ್ಯಾಪ್ತಿಗೆ ಬರಲಿರುವ ಬಿಡದಿ ಸೊಸೈಟಿಯಲ್ಲಿ ಸುಮಾರು 63 ಗ್ರಾಮಗಳಿಂದ 4,500 ರಿಂದ 4800 ಮತದಾರರು ಇದ್ದಾರೆ. ರಾಜಕೀಯವಾಗಿ ಬಿಡದಿ ಹೋಬಳಿ ಹೆಚ್ಚಾಗಿ ಜೆಡಿಎಸ್ ಪ್ರಾಬಲ್ಯವನ್ನು ಹೊಂದಿದೆ. ಹೀಗಾಗಿ ಸೊಸೈಟಿಯನ್ನು ಕೈ ವಶ ಪಡಿಸಿಕೊಂಡಲ್ಲಿ ಮುಂಬರುವ ಚುನಾವಣೆಗಳಿಗೆ ಪ್ಲಸ್ ಪಾಯಿಂಟ್ ಆಗಲಿದೆ ಎಂಬುದು ಕಾಂಗ್ರೆಸ್ ನಾಯಕರ ಲೆಕ್ಕಾಚಾರವಾದರೆ, ಜೆಡಿಎಸ್ ಗೆ ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಸವಾಲು ಎದುರಾಗಿದೆ. ಇನ್ನು ಬಿಜೆಪಿ ಆಟಕುಂಟು ಲೆಕ್ಕಕ್ಕೆ ಇಲ್ಲದಂತಿದೆ.

ಈ ಮೊದಲಿನಿಂದಲೂ ಸೊಸೈಟಿ ಮೇಲೆ ಜೆಡಿಎಸ್ ಪಕ್ಷವೇ ಹಿಡಿತ ಸಾಧಿಸುತ್ತಾ ಬಂದಿದ್ದು, ಕಾಂಗ್ರೆಸ್ ಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬಂದ ಉದಾಹರಣೆಯೇ ಇಲ್ಲ. ಕಳೆದ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ 7 ಮತ್ತು ಕಾಂಗ್ರೆಸ್ ಬೆಂಬಲಿತ 5 ಮಂದಿ ಗೆಲುವು ಸಾಧಿಸಿದ್ದರು. ಕೊನೆ ಅ‍ವಧಿಯಲ್ಲಿ ಜೆಡಿಎಸ್ ತೆಕ್ಕೆಯಲ್ಲಿದ್ದ ಅಧಿಕಾರವನ್ನು ಇಬ್ಬರು ದಳಪತಿಗಳ ಬೆಂಬಲದೊಂದಿಗೆ ಕಾಂಗ್ರೆಸ್ ವಶ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

ಮೂರು ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಆಕಾಂಕ್ಷಿತ ಅಭ್ಯರ್ಥಿಗಳು ತಮ್ಮ ಸರ್ಕಾರಗಳ ಅವಧಿಯಲ್ಲಿನ ಸಾಧನೆಗಳು ಹಾಗೂ ರೈತ ಪರ ಯೋಜನೆಗಳನ್ನು ಮತದಾರರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಬಿಡದಿ ಸೊಸೈಟಿಯ 12 ಕ್ಷೇತ್ರಗಳಿಗೆ ಚುನಾವಣೆ:

ಬಿಡದಿ ವಿವಿದ್ಧೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿಯಮಿತದ ಆಡಳಿತ ಮಂಡಳಿಗೆ ಸಾಲಗಾರರಲ್ಲದ ಕೇತ್ರ ಸಾಮಾನ್ಯ ಸ್ಥಾನ-1, ಸಾಲಗಾರರ ಕ್ಷೇತ್ರದಿಂದ 11 ಸ್ಥಾನಗಳಿದ್ದು ಅದರಲ್ಲಿ 5 ಸಾಮಾನ್ಯ, ಹಿಂದುಳಿದ ಪ್ರವರ್ಗ(ಎ) ಮೀಸಲು-1, ಹಿಂದುಳಿದ ಪ್ರವರ್ಗ(ಬಿ) ಮೀಸಲು-1, ಪರಿಶಿಷ್ಟಜಾತಿ ಮೀಸಲು-1, ಪರಿಶಿಷ್ಟ ಪಂಗಡ ಮೀಸಲು-1 ಹಾಗೂ ಮಹಿಳಾ ಮೀಸಲು ಸ್ಥಾನಗಳು ಸೇರಿದಂತೆ ಒಟ್ಟು 12 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಫೈನಲ್ :

ಬಿಡದಿ ಸೊಸೈಟಿ ಚುನಾವಣೆಗೆ ಜೆಡಿಎಸ್ - ಬಿಜೆಪಿ ಮಿತ್ರ ಪಕ್ಷಗಳು ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಪ್ರಯತ್ನದಲ್ಲಿದ್ದರೆ, ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಗಳನ್ನು ಫೈನಲ್ ಮಾಡಿದೆ ಎಂದು ತಿಳಿದು ಬಂದಿದೆ.

ಕಾಂಗ್ರೆಸ್ ಬೆಂಬಲಿತರಾಗಿ ಬಿಎನ್ ಸಂತೋಷ್ ಬಾನಂದೂರು , ಸತ್ಯಪ್ಪ ಮೇಡನಹಳ್ಳಿ, ಮಹೇಶ್ ವಾಜರಹಳ್ಳಿ, ರೇವಣ್ಣ ಶೇಷಗಿರಿಹಳ್ಳಿ, ಮಧು ಕೆ.ಜಿ.ಹಳ್ಳಿ, ಸುಜ್ಞಾನಮೂರ್ತಿ / ಜೀವನ್ ಬಾಬು/ ಮಾದೇಶ್ , ಶೋಭಾ ಅವರೆಗೆರೆ, ಯೋಗಾನಂದ ಪತ್ನಿ ಅನ್ನಪೂರ್ಣೇಶ್ವರಿ, ರಮೇಶ್ ಇಟ್ಟಮಡು (ಎಸ್ಸಿ), ಕೆಂಗಲಯ್ಯ (ಎಸ್ಟಿ), ಬಾಲಕೃಷ್ಣ ಕೆಂಚನಕುಪ್ಪೆ , ಹೇಮಂತ್ / ನಿತ್ಯಾನಂದ್ ಅವರನ್ನು ಅಂತಿಮಗೊಳಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.