ರಸ್ತೆ ನಾಮಫಲಕಗಳಲ್ಲಿ ಕನ್ನಡದ ಕಗ್ಗೊಲೆ!

| Published : Apr 17 2024, 01:17 AM IST

ಸಾರಾಂಶ

ಕರ್ನಾಟಕದಲ್ಲಿ ಕನ್ನಡ ಉಳಿಸಿ ಬೆಳೆಸಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯ. ಅದರಲ್ಲೂ ಕನ್ನಡ ಉಳಿಸಿ ಬೆಳೆಸಬೇಕಾಗಿರುವ ಕಾರ್ಯ ಮಾಡಬೇಕಾಗಿರುವುದು ಸರ್ಕಾರದ ಕರ್ತವ್ಯ. ಆದರೆ, ಸರ್ಕಾರಗಳ ವತಿಯಿಂದ ರಸ್ತೆ ಬದಿಯಲ್ಲಿ ಹಾಕಿರುವ ಊರುಗಳ ಹೆಸರುಗಳಲ್ಲೇ ಕನ್ನಡದ ಕಗ್ಗೊಲೆ ಆಗುತ್ತಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರಕರ್ನಾಟಕದಲ್ಲಿ ಕನ್ನಡ ಉಳಿಸಿ ಬೆಳೆಸಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯ. ಅದರಲ್ಲೂ ಕನ್ನಡ ಉಳಿಸಿ ಬೆಳೆಸಬೇಕಾಗಿರುವ ಕಾರ್ಯ ಮಾಡಬೇಕಾಗಿರುವುದು ಸರ್ಕಾರದ ಕರ್ತವ್ಯ. ಆದರೆ, ಸರ್ಕಾರಗಳ ವತಿಯಿಂದ ರಸ್ತೆ ಬದಿಯಲ್ಲಿ ಹಾಕಿರುವ ಊರುಗಳ ಹೆಸರುಗಳಲ್ಲೇ ಕನ್ನಡದ ಕಗ್ಗೊಲೆ ಆಗುತ್ತಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಕನ್ನಡ ಉಳಿವಿಗಾಗಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ ಜಾರಿಗೆ ತರಲಾಗಿದ್ದು, ಅದನ್ನು ರಾಜ್ಯಾದ್ಯಂತ ಅಳವಡಿಕೆ ಮಾಡಲಾಗುತ್ತಿದೆ. ಹೀಗಾಗಿ ಸರ್ಕಾರಿ, ಅರೇ ಸರ್ಕಾರಿ, ಸಹಕಾರಿ ಹಾಗೂ ಸಾರ್ವಜನಿಕ ಉದ್ಯಮಗಳು ಸೇರಿದಂತೆ ಎಲ್ಲೆಡೆ ಶೇ.60ರಷ್ಟು ಕನ್ನಡ ಪದಗಳ ಬಳಕೆ ಮಾಡಬೇಕು ಎಂಬ ನಿಯಮ ಜಾರಿಯಲ್ಲಿದೆ. ಆದರೆ ವಿಜಯಪುರ ನಗರದಲ್ಲಿನ ಐತಿಹಾಸಿಕ ಸ್ಥಳಗಳ ಹೆಸರು, ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಊರುಗಳ ನಾಮಫಲಕಗಳು ಅದ್ವಾನದಿಂದ ಕೂಡಿವೆ.

ತಪ್ಪಾಗಿವೆ ಹೆಸರುಗಳು:

ನಗರದ ರೈಲ್ವೆ ಸೇತುವೆ ಮೇಲೆ ಕಲಬುರಗಿ ಎಂದು ಬದಲಾಯಿಸಬೇಕಿರುವ ಹೆಸರನ್ನು ಫಲಕದಲ್ಲಿ ಇಂದಿಗೂ ಗುಲಬರ್ಗಾ ಎಂದೇ ಇದೆ.

ಉಕ್ಕಲಿ ರಸ್ತೆಯಲ್ಲಿರುವ ಫಲಕದಲ್ಲಿ ಉಕ್ಕಲಿ ಬದಲಾಗಿ ಉಕ್ಕಳಿ ಎಂದಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ತಿಡಗುಂದಿಯ ಬದಲಾಗಿ ತಿಡಗುಂಡಿ ಎಂದು ಬರೆಯಲಾಗಿದೆ. ಮತ್ತೊಂದೆಡೆ ಮಕಣಾಪುರ ಎಂಬುದರ ಬದಲಾಗಿ ಮಖಣಾಪುರ ಎಂದು ಬರೆಯಲಾಗಿದೆ.

ಹಲವು ವರ್ಷಗಳಿಂದಿರುವ ಫಲಕಗಳು:

ಈ ರೀತಿಯಾಗಿ ನಗರದಲ್ಲಿ ಹಲವು ಸ್ಥಳಗಳ ಹೆಸರುಗಳನ್ನು ಕನ್ನಡದಲ್ಲಿಯೇ ತಪ್ಪು ತಪ್ಪಾಗಿ ಬರೆಯಲಾಗಿದೆ. ಜೊತೆಗೆ ನಗರದ ಹೊರವಲಯದಲ್ಲಿರುವ ಜಿಲ್ಲಾ ಹಾಗೂ ಅಂತರ್ ಜಿಲ್ಲಾ ರಸ್ತೆಗಳು, ರಾಜ್ಯ ಮತ್ತು ಅಂತರ್ ರಾಜ್ಯ ರಸ್ತೆಗಳು ಅಷ್ಟೇ ಅಲ್ಲದೇ ರಾಷ್ಟ್ರೀಯ ಹೆದ್ದಾರಿಗಳಲ್ಲೂ ಹಾಕಲಾಗಿರುವ ಫಲಕಗಳು ಕನ್ನಡದಲ್ಲಿ ಮುದ್ರಣ ದೋಷಕಂಡಿವೆ. ಹತ್ತಾರು ವರ್ಷಗಳಿಂದಲೂ ಹೀಗೆಯೇ ಕನ್ನಡ ಫಲಕಗಳಲ್ಲಿ ಯಡವಟ್ಟು ಇದ್ದರೂ ಯಾರೊಬ್ಬರೂ ಇದರ ಬಗ್ಗೆ ಚಕಾರ ಎತ್ತಿಲ್ಲ.

ಸರಿಯಾಗಿ ನಮೂದಿಸಿ:

ಈಗಾಗಲೇ ಇಂಗ್ಲಿಷ್ ಬೋರ್ಡ್‌ಗಳನ್ನು ಹಾಕಿರುವ ಉದ್ಯಮಗಳಿಗೆ, ವಿವಿಧ ಸಂಘಸಂಸ್ಥೆಗಳಿಗೆ ಎಚ್ಚರಿಕೆ ನೀಡಿ ಅಂತಹ ಬೋರ್ಡ್‌ಗಳನ್ನು ತೆರವುಗೊಳಿಸುತ್ತಿದೆ. ಅದರ ಜೊತೆಗೆ ಕನ್ನಡಪರ ಸಂಘಟನೆಗಳು ಸಹ ಬೆಂಬಲ ಸೂಚಿಸಿದ್ದು, ಎಲ್ಲಿಯಾದರು ಸಾರ್ವಜನಿಕ ಸ್ಥಳಗಳಲ್ಲಿ ಇಂಗ್ಲಿಷ್ ಫಲಕಗಳು ಕಂಡರೇ ಅವುಗಳಿಗೆ ಮಸಿ ಬಳೆಯುವುದು, ಕಿತ್ತು ಹಾಕುವ ಕೆಲಸವನ್ನು ಮಾಡುತ್ತಿವೆ. ಆದರೆ, ಕರ್ನಾಟಕದಲ್ಲಿಯೇ ಕನ್ನಡವನ್ನು ಯದ್ವಾತದ್ವಾ ಬರೆದು ಅದ್ವಾನ ಮಾಡಿದರೆ ಹೇಗೆ? ಹೀಗಾಗಿ ತಕ್ಷಣದಲ್ಲಿಯೇ ಎಲ್ಲೆಲ್ಲಿ ಈ ರೀತಿ ತಪ್ಪುಗಳಾಗಿವೆಯೋ ಅಲ್ಲಲ್ಲಿ ಫಲಕಗಳ ಮೇಲೆ ಮತ್ತೊಮ್ಮೆ ಸರಿಯಾಗಿ ಹೆಸರುಗಳನ್ನು ಬರೆಯುವ ಕೆಲಸ ಸರ್ಕಾರದಿಂದ ಹಾಗೂ ಜಿಲ್ಲಾಡಳಿತದಿಂದ ಆಗಬೇಕಿದೆ.

ಜಿಲ್ಲಾಡಳಿತದ ಸೂಚನೆಗಳು:

ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೆಯಕ ಜಾರಿಗೆ ತರಲು ಈಗಾಗಲೇ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ ನೀಡಿದ್ದಾರೆ. ಜಿಲ್ಲೆಯ ರಸ್ತೆಗಳು, ಬಡಾವಣೆ ಪ್ರದೇಶಗಳ ಹೆಸರುಗಳು, ಸರ್ಕಾರಿ ಇಲಾಖೆಗಳ ಫಲಕಗಳು, ಸರ್ಕಾರದ ವಿವಿಧ ಇಲಾಖೆಗಳು, ಉದ್ಯಮಗಳು, ಸಹಕಾರ ಮತ್ತು ಸಾರ್ವಜನಿಕ ಉದ್ಯಮಗಳು, ಶೈಕ್ಷಣಿಕ ಸಂಸ್ಥೆಗಳು, ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳು, ಖಾಸಗಿ ಕೈಗಾರಿಕೆಗಳು, ವಿಶ್ವವಿದ್ಯಾಲಯಗಳ ಫಲಕಗಳಲ್ಲಿರುವ ಹೆಸರುಗಳು ಮತ್ತು ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ಹೆಸರು ಮತ್ತು ಪದನಾಮಗಳನ್ನು ಶೇ.60ರಷ್ಟು ಕನ್ನಡ ಭಾಷೆ ಇರುವಂತೆ ನೋಡಿಕೊಳ್ಳಬೇಕು.

---

ಬಾಕ್ಸ್‌

ಕನ್ನಡ ಫಲಕಗಳಲ್ಲಿ ಆಗಿರುವ ತಪ್ಪುಗಳುನಗರದ ಭೂತನಾಳ ಕೆರೆಯ ಬಳಿ ರಸ್ತೆಯಲ್ಲಿರುವ ಮಾಹಿತಿ ಫಲಕದಲ್ಲಿ ಐತಿಹಾಸಿಕ ಗೋಳಗುಮ್ಮಟವನ್ನು ಗೂಲಗುಮ್ಮಟ ಎಂದು ಬರೆಯಲಾಗಿದೆ. ಇದೇ ನಾಮಫಲಕದಲ್ಲಿ ಉದ್ಯಾನವನ ಎಂಬುವುದರ ಬದಲಾಗಿ ಉದ್ಯಾಣವನ ಎಂದು ಬರೆಯಲಾಗಿದೆ. ನಗರದ ಗೋಳಗುಮ್ಮಟ ರಸ್ತೆಯಲ್ಲಿರುವ ಫಲಕದಲ್ಲಿ ಕುಮಟಗಿ ಎಂಬುವುದರ ಬದಲಾಗಿ ಕುಮ್ಮಟಗಿ ಎಂದು ಬರೆಯಲಾಗಿದೆ. ನಗರದ ಸಿಂದಗಿ ರಸ್ತೆಯಲ್ಲಿರುವ ಬಸವ ನಗರವನ್ನು ಬಸವನ ನಗರ ಎಂದು ಬರೆಯಲಾಗಿದೆ.

---

ಕೋಟ್

ವಿಜಯಪುರ ಜಿಲ್ಲೆಯಾದ್ಯಂತ ನಾವು ಯಾವುದೇ ತಾಲೂಕಿಗೆ ಅಥವಾ ಪಟ್ಟಣಕ್ಕೆ ಹೋದರೂ ಅಲ್ಲಲ್ಲಿ ಕನ್ನಡದಲ್ಲಿ ಹಾಕಿರುವ ಫಲಕಗಳಲ್ಲಿ ಉಚ್ಚಾರಣೆ ಹಾಗೂ ಪದಗಳ ಅಸಂಬಂಧ ಜೋಡಣೆ ಕಂಡುಬರುತ್ತಿದೆ. ಬೇರೆ ಕಡೆಗಳಿಂದ ಸಂಬಂಧಿಸಿದವರು ಇವುಗಳನ್ನು ಸರಿಪಡಿಸಬೇಕಿದೆ.

-ಪ್ರಕಾಶ ಹುಂಡೆಕಾರ, ನಗರ ನಿವಾಸಿ.

--

ಕನ್ನಡ ಬಳಕೆ ಜಾಗೃತಿ ಮೂಡಿಸುವುದು ಹಾಗೂ ಕನ್ನಡವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಕೆಲಸ ನಡೆದಿದೆ. ಜಿಲ್ಲಾಮಟ್ಟದ ಸಮಿತಿ, ತಾಲೂಕು ಮಟ್ಟದ ಸಮಿತಿಗಳನ್ನು ರಚನೆ ಮಾಡಲಾಗಿದೆ. ಸಮಿತಿಗಳ ಮೂಲಕ ಕನ್ನಡ ಭಾಷಾ ಬಳಕೆಯ ಜಾಗೃತಿ ಹಾಗೂ ತಿಳಿವಳಿಕೆ ಮೂಡಿಸಲಾಗುತ್ತಿದೆ. ಎಲ್ಲೆಲ್ಲಿ ಫಲಕಗಳು ತಪ್ಪಾಗಿವೆ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು.

-ಟಿ.ಭೂಬಾಲನ್, ವಿಜಯಪುರ ಡಿಸಿ.