ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ

ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿ (ಕೆ.ಎಂ.ಎಸ್.ಎ.) ವತಿಯಿಂದ ಆ.9ರ ಭಾನುವಾರ ವಿರಾಜಪೇಟೆ ಸಮೀಪದ ಕೊಮ್ಮೆತೋಡಿನಲ್ಲಿ ಮೊದಲನೇ ವರ್ಷದ ಜಿಲ್ಲಾ ಮಟ್ಟದ ಮುಕ್ತ ಕೆಸರುಗದ್ದೆ ಕ್ರೀಡಾ ಸಂಗಮ-2026 ಜರುಗಲಿದೆ. ಫುಟ್ಬಾಲ್, ಪುರುಷರ ಹಗ್ಗ ಜಗ್ಗಾಟ ಸೇರಿದಂತೆ ವಿವಿಧ ವಿಭಾಗಗಳ ಕೆಸರುಗದ್ದೆ ಓಟದ ಸ್ಪರ್ಧೆಯೊಂದಿಗೆ ಆಯೋಜಿಸಲಾಗಿರುವ ಈ ಸಂಗಮದ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದೆ. ಇದಕ್ಕಾಗಿ ವಿರಾಜಪೇಟೆ- ಅಮ್ಮತಿ ಮುಖ್ಯರಸ್ತೆಯಲ್ಲಿರುವ ಕೊಮ್ಮೆತೋಡು ಸೇತುವೆ ಬಳಿಯ ಬತ್ತದ ಗದ್ದೆಯನ್ನು ಸಜ್ಜುಗೊಳಿಸಲಾಗಿದೆ.ಗದ್ದೆಯನ್ನು ಉಳುಮೆ ಮಾಡಿ ಕೆಸರುಗದ್ದೆ ಕ್ರೀಡಾ ಚಟುವಟಿಕೆಗಳಿಗಾಗಿ ಹದಗೊಳಿಸಲಾಗಿದೆ. ಅಲ್ಲದೆ ಫುಟ್ಬಾಲ್ ಕ್ರೀಡಾಂಗಣವನ್ನು ಪೂರ್ಣರೂಪದಲ್ಲಿ ರೂಪಿಸಲಾಗಿದೆ. ಸುತ್ತಲೂ ಬಣ್ಣ ಬಣ್ಣದ ಧ್ವಜ ಅಳವಡಿಸಿ ಗದ್ದೆ ಆವರಣದಲ್ಲಿ ಕ್ರೀಡಾ ರಂಗನ್ನು ಹೆಚ್ಚಿಸಲಾಗಿದೆ. ಇದಕ್ಕಾಗಿ ಕಳೆದ ಎರಡು ದಿನಗಳಿಂದ ಕೆಎಂಎಸ್ಎ ಅಧ್ಯಕ್ಷರಾದ ಆಲೀರ ಎಂ. ರಶೀದ್ ಅವರ ನೇತೃತ್ವದ ತಂಡ ನಿರಂತರವಾಗಿ ಶ್ರಮಿಸುತ್ತಿದೆ. ಕ್ರೀಡಾಕೂಟ ನಡೆಯುವ ಗದ್ದೆಯ ಸಮೀಪದಲ್ಲಿ ವೇದಿಕೆಯನ್ನು ನಿರ್ಮಿಸಲಾಗಿದೆ. ಫುಟ್ಬಾಲ್ ಪಂದ್ಯಾವಳಿಗೆ 22 ತಂಡಗಳು ಮತ್ತು ಪುರುಷರ ಹಗ್ಗ ಜಗ್ಗಾಟಕ್ಕೆ 9 ತಂಡಗಳು ಈಗಾಗಲೇ ಹೆಸರು ನೋಂದಾಯಿಸಿಕೊಂಡಿದ್ದು, ಈ ತಂಡಗಳು ಇಂದು ಪ್ರಶಸ್ತಿಗಾಗಿ ಕೆಸರುಗದ್ದೆಯಲ್ಲಿ ಹಣಾಹಣಿ ನಡೆಸಲಿದೆ.ಕ್ರೀಡಾಸಂಗಮದ ಅಂಗವಾಗಿ ಒಟ್ಟು ಐದು ವಿಭಾಗಗಳಲ್ಲಿ ಕೆಸರುಗದ್ದೆ ಓಟದ ಸ್ಪರ್ಧೆ ನಡೆಯಲಿದೆ. 1ರಿಂದ 4ನೇ ತರಗತಿವರೆಗಿನ ಪುಟ್ಟ ಮಕ್ಕಳ ವಿಭಾಗ, 5ರಿಂದ 8ನೇ ತರಗತಿವರೆಗಿನ ಸಬ್ ಜೂನಿಯರ್ ವಿಭಾಗ, 9 ರಿಂದ ದ್ವಿತೀಯ ಪಿಯುಸಿ ತರಗತಿವರೆಗಿನ 17 ವರ್ಷದೊಳಗಿನ ವಿಭಾಗ, ಯಾವುದೇ ಪದವಿ ತರಗತಿ ವಿದ್ಯಾರ್ಥಿಗಳ ಕಾಲೇಜು ವಿಭಾಗ ಮತ್ತು ಕೊಡಗು ಜಿಲ್ಲೆಯ ನಿವಾಸಿಗಳು ಮುಕ್ತವಾಗಿ ಪಾಲ್ಗೊಳ್ಳಬಹುದಾದ ಸಾರ್ವಜನಿಕ ವಿಭಾಗದಲ್ಲಿ ಕೆಸರುಗದ್ದೆ ಓಟದ ಸ್ಪರ್ಧೆ ಜರುಗಲಿದೆ. ವಿವಿಧ ವಿಭಾಗಗಳಲ್ಲಿ ನಡೆಯುವ ಓಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಸ್ಪರ್ದಿಗಳು ಬೆಳಗ್ಗೆ ಸ್ಥಳದಲ್ಲೇ ಹೆಸರು ನೋಂದಾಯಿಸಿಕೊಳ್ಳಬೇಕು. ಹೆಸರು ನೋಂದಣಿಗೆ ಯಾವುದೇ ಶುಲ್ಕವಿರುವುದಿಲ್ಲ. ಸ್ಪರ್ಧೆಯಲ್ಲಿ ವಿಜೇತರಾಗುವವರಿಗೆ ತಲಾ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನದ ನಗದು ಬಹುಮಾನ, ಪಾರಿತೋಷಕ ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಗುವುದು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ದೂರವಾಣಿ ಸಂಖ್ಯೆಗಳಾದ 9008706944 ಅನ್ನು ಸಂಪರ್ಕಿಸಬಹುದಾಗಿದೆ.ಬೆಳಿಗ್ಗೆ 10 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ)ಅಧ್ಯಕ್ಷರಾದ ದುದ್ದಿಯಂಡ ಹೆಚ್. ಸೂಫಿ ಹಾಜಿ ಅವರು ಕೆಸರುಗದ್ದೆ ಕ್ರೀಡಾ ಸಂಗಮ 2026 ಅನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಸಿ.ಎಸ್. ಅರುಣ್ ಮಾಚಯ್ಯ ಭಾಗವಹಿಸಲಿದ್ದಾರೆ. ಕೆ.ಎಂ.ಎಸ್.ಎ. ಗೌರವಾಧ್ಯಕ್ಷರಾದ ಅಕ್ಕಳತಂಡ ಎಸ್. ಮೊಯ್ದು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ವಿವಿಧ ಕ್ಷೇತ್ರದ ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕೆ.ಎಂ.ಎಸ್.ಎ.ಅಧ್ಯಕ್ಷರಾದ ಆಲೀರ ಎಂ. ರಶೀದ್ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಕಾಂಗ್ರೆಸ್ ಹಿರಿಯ ಮುಖಂಡರಾದ ನಾಪಂಡ ಮುತ್ತಪ್ಪ ಸೇರಿದಂತೆ ವಿವಿಧ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಕೆಎಂಎಸ್ಎ ಪ್ರಧಾನ ಕಾರ್ಯದರ್ಶಿ ಎಂ.ಎಂ. ಇಸ್ಮಾಯಿಲ್ ತಿಳಿಸಿದ್ದಾರೆ.